ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರ ಮುಕ್ತ ವ್ಯಾಪಾರಕ್ಕೆ ಅಡ್ಡಿಪಡಿಸುತ್ತಿರುವ ವರ್ತಕರ ವಿರುದ್ಧ ಕ್ರಮ ವಹಿಸುವಂತೆ ತಾಲೂಕು ರೈತಸಂಘ ಒತ್ತಾಯಿಸಿದೆ.ಎಪಿಎಂಸಿ ಕಾರ್ಯದರ್ಶಿ ರಫಿಕ್ ಅಹಮದ್ ಅವರನ್ನು ಭೇಟಿ ಮಾಡಿದ ರೈತಸಂಘದ ತಾಲೂಕು ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ರೈತ ಸಮುದಾಯಕ್ಕೆ ವರ್ತಕರಿಂದ ಆಗುತ್ತಿರುವ ಕಿರುಕುಳವನ್ನು ಪ್ರಸ್ತಾಪಿಸಿ ಕಿರುಕುಳ ನಿಲ್ಲದಿದ್ದರೆ ಹೋರಾಟ ಆರಂಭಿಸುವುದಾಗಿ ಎಚ್ಚರಿಸಿದರು.
ಎಪಿಎಂಸಿ ಆವರಣದಲ್ಲಿ ಪ್ರತಿ ಬುಧವಾರ ಮತ್ತು ಶನಿವಾರ ವಾರದ ಸಂತೆ ನಡೆಯುತ್ತದೆ. ಸಂತೆ ವ್ಯಾಪಾರಿಗಳ್ಯಾರೂ ಎಪಿಎಂಸಿ ಗೆ ತೆರಿಗೆ ಕಟ್ಟುತ್ತಿಲ್ಲ. ಸಂತೆಯಲ್ಲಿ ಮಾರಾಟಕ್ಕಾಗಿ ರೈತರು ಮುಂಜಾನೆ 5 ಗಂಗೆ ತಾವು ಬೆಳೆದ ಸೊಪ್ಪು, ತರಕಾರಿ, ಕಾಳು ಕಡ್ಡಿಗಳನ್ನು ಮಾರಾಟಕ್ಕೆ ತರುತ್ತಾರೆ.ರೈತರು ಮಾರಾಟಕ್ಕಾಗಿ ತಂದಿಟ್ಟ ಜಾಗವನ್ನು ಖಾಲಿ ಮಾಡುವಂತೆ ಸಂತೆ ವ್ಯಾಪಾರಿಗಳು ಮತ್ತು ದಳ್ಳಾಳಿಗಳು ಬೆದರಿಕೆ ಹಾಕುತ್ತಿದ್ದಾರೆ. ಇಲ್ಲಿ ಮಾರಾಟ ಮಾಡುವ ಅಧಿಕಾರ ರೈತರಿಗೆ ಮಾತ್ರ ಇದೆ. ಮಾರಾಟ ಮಾಡಲು ಬಂದ ರೈತರನ್ನು ಒಕ್ಕಲೆಬ್ಬಿಸಿ ಅದೇ ಜಾಗದಲ್ಲಿ ವ್ಯಾಪಾರ ಮಾಡುವ ಹಕ್ಕು ವರ್ತಕರಿಗಿಲ್ಲ ಎಂದು ಕಿಡಿಕಾರಿದರು.
ಎಪಿಎಂಸಿ ಇರುವುದೇ ರೈತರ ಉತ್ಪನ್ನಗಳ ಮಾರಾಟಕ್ಕೆ. ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಸ್ವಯಂ ಮಾರಾಟ ಮಾಡಲು ವರ್ತಕರು ಅಡ್ಡಗಾಲು ಹಾಕುತ್ತಿರುವುದನ್ನು ಸಹಿಸುವುದಿಲ್ಲ. ಕಾರ್ಯದರ್ಶಿಗಳು ತಕ್ಷಣ ಗಮನಹರಿಸಿ ರೈತರು ಮಾರಾಟ ಮಾಡಲು ಅಗತ್ಯ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು.ಎಳನೀರು ಕೊಂಡುಕೊಳ್ಳುವ ವರ್ತಕರಿಂದ ರೈತರಿಗೆ ಭಾರೀ ಪ್ರಮಾಣದ ಅನ್ಯಾಯವಾಗುತ್ತಿದೆ. ಬಿಡಿ ಲೆಕ್ಕದಲ್ಲಿ ವರ್ತಕರು ರೈತರಿಂದ ಎಳನೀರು ಖರೀದಿಸುತ್ತಿದ್ದು ಪ್ರತಿ 100 ಎಳನೀರಿಗೆ 6 ಎಳನೀರನ್ನು ಸೋಡಿ (ಕೇಡು ಲೆಕ್ಕ) ಹೆಸರಿನಲ್ಲಿ ರೈತರಿಂದ ಉಚಿತವಾಗಿ ಕಿತ್ತುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತೆಂಗಿನ ಕಾಯಿ ವ್ಯಾಪಾರದಲ್ಲಿಯೂ ಇದೇ ರೀತಿ ರೈತರಿಗೆ ವಂಚನೆಯಾಗುತ್ತಿದೆ. ಒಂದು ಟನ್ ಕಾಯಿಗೆ 20 ಕೆ.ಜಿ ಕಳೆದು ರೈತರಿಗೆ ವಂಚನೆ ಮಾಡಲಾಗುತ್ತಿದೆ. ಎಳನೀರು ವಹಿವಾಟಿನ ದೈನಂದಿನ ಆನ್ ಲೈನ್ ಮಾರಾಟ ಬೆಲೆಯನ್ನು ಎಪಿಎಂಸಿ ಬಹಿರಂಗವಾಗಿ ಪ್ರದಶಿಸುತ್ತಿಲ್ಲ. ಇದರಿಂದ ರೈತರಿಗೆ ಮಾರಾಟ ಬೆಲೆಯಲ್ಲೂ ವಂಚನೆಯಾಗುತ್ತಿದೆ ಎಂದು ದೂರಿದರು.ಎಳನೀರು ಮತ್ತು ಕಾಯಿ ಮಾರಾಟದಲ್ಲಿ ಕೆಡು ಕಳೆಯುವ ನಿಯಮ ಇಲ್ಲ. ಕೇಡು ಕಳೆಯುವ ಲೆಕ್ಕದಲ್ಲಿ ರೈತರಿಂದ ಉಚಿತವಾಗಿ ಹೆಚ್ಚುವರಿ ಎಳನೀರು ಮತ್ತು ತೆಂಗಿನ ಕಾಯಿ ಪಡೆಯುತ್ತಿರುವ ವರ್ತಕರ ವಿರುದ್ಧ ಕ್ರಮ ಜರುಗಿಸಬೇಕು. ಬಿಡಿ ಎಳನೀರು ಮಾರಾಟ ದಂಧೆಯನ್ನು ನಿಲ್ಲಿಸಿ ಎಳನೀರನ್ನು ಕೆ.ಜಿ.ಲೆಕ್ಕದಲ್ಲಿ ತೂಕ ಹಾಕಿ ಕೊಂಡುಕೊಳ್ಳುವ ವ್ಯವಸ್ಥೆಯನ್ನು ಜಾರಿಗೆ ತರಬೇಕು. ದಳ್ಳಾಳಿಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ರೈತಸಂಘದ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಎಪಿ.ಎಂಸಿ ಕಾರ್ಯದರ್ಶಿ ರಫಿಕ್ ಅಹಮದ್, ಗ್ರಾಮೀಣ ಸಂತೆಯಿಂದ ಎಪಿಎಂಸಿಗೆ ಯಾವುದೇ ಆದಾಯ ಇಲ್ಲ. ಅವರಿಂದ ಯಾವುದೇ ಸುಂಕ ವಸೂಲಾತಿ ಮಾಡುತ್ತಿಲ್ಲ. ಸಂತೆ ತ್ಯಾಜ್ಯವನ್ನು ತೆಗೆದು ಶುಚಿಗೊಳಿಸುವ ವೆಚ್ಚವನ್ನು ಎಪಿಎಂಸಿಯೇ ಮಾಡುತ್ತಿದೆ. ಸಂತೆ ವ್ಯಾಪಾರಿಗಳಿಂದ ರೈತರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಲಾಗುವುದು ಎಂದರು.ತೂಕದ ಲೆಕ್ಕದಲ್ಲಿ ಎಳನೀರು ಮಾರಾಟಕ್ಕೆ ಅನುವು ಮಾಡುವ ಮತ್ತು ಎಳನೀರು ಮತ್ತು ತೆಂಗಿನ ಕಾಯಿ ಮಾರಾಟದ ವೇಳೆ ಕೇಡಿನ ಲೆಕ್ಕದಲ್ಲಿ ರೈತರಿಂದ ಉಚಿತವಾಗಿ ಪಡೆಯುವುದನ್ನು ತಪ್ಪಿಸಲು ಶೀಘ್ರದಲ್ಲಿಯೇ ರೈತರು ಮತ್ತು ವರ್ತಕ ಸಮುದಾಯದ ನಡುವೆ ಮುಖಾಮುಖಿ ಚರ್ಚೆ ನಡೆಸುವ ಭರವಸೆ ನೀಡಿದರು.
ಈ ವೇಳೆ ರೈತ ಮುಖಂಡರಾದ ಚೌಡೇನಹಳ್ಳಿ ಕೃಷ್ಣೇಗೌಡ, ಅಕ್ಕಿಮಂಚನಹಳ್ಳಿ ಹೊನ್ನೇಗೌಡ, ಎಪಿಎಂಸಿ ಅಧಿಕಾರಿ ಸತೀಶ್ ಇದ್ದರು.