ನರಸಿಂಹರಾಜಪುರಬಡವರ ಹೆಣ್ಣು ಮಕ್ಕಳ ಮದುವೆಗೆ 5 ಸಾವಿರ ಸಹಾಯಧನ ಕೊಡಬೇಕೆಂಬ ಯೋಜನೆ ಇನ್ನೂ ಜಾರಿಗೆ ಬಂದಿಲ್ಲ. ಇದನ್ನು ಜಾರಿಗೊಳಿಸಬೇಕು ಎಂದು ಸಮಾಜ ಸೇವಕಿ ಹಾಗೂ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಜುಬೇದಾ ಸಲಹೆ ಸಲಹೆ ನೀಡಿದರು.
- ಪಪಂನಲ್ಲಿ 2026-27 ನೇ ಸಾಲಿಗೆ ಬಜೆಟ್ ತಯಾರಿಸುವ ಬಗ್ಗೆ ನಡೆದ ಪೂರ್ವ ಭಾವಿ ಸಭೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಬಡವರ ಹೆಣ್ಣು ಮಕ್ಕಳ ಮದುವೆಗೆ 5 ಸಾವಿರ ಸಹಾಯಧನ ಕೊಡಬೇಕೆಂಬ ಯೋಜನೆ ಇನ್ನೂ ಜಾರಿಗೆ ಬಂದಿಲ್ಲ. ಇದನ್ನು ಜಾರಿಗೊಳಿಸಬೇಕು ಎಂದು ಸಮಾಜ ಸೇವಕಿ ಹಾಗೂ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಜುಬೇದಾ ಸಲಹೆ ಸಲಹೆ ನೀಡಿದರು.
ಮಂಗಳವಾರ ಇಲ್ಲಿನ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಆಡಳಿತಾಧಿಕಾರಿ ತಹಸೀಲ್ದಾರ್ ಡಾ. ನೂರುಲ್ ಹುದಾ ಅಧ್ಯಕ್ಷತೆಯಲ್ಲಿ ನಡೆದ 2026–27ನೇ ಸಾಲಿನ ಬಜೆಟ್ ತಯಾರಿಸುವ ಬಗ್ಗೆ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಸಲಹೆ ನೀಡಿದರು.ತಂದೆ, ತಾಯಿ ಇಲ್ಲದ ಅಥವಾ ಏಕ ಪೋಷಕರನ್ನು ಹೊಂದಿರುವ ಹೆಣ್ಣುಮಕ್ಕಳ ವಿವಾಹಕ್ಕೆ ಸಹಾಯ ಧನ ನೀಡಲು ಕ್ರಮ ತೆಗೆದುಕೊಳ್ಳಬಹುದು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ಪಟ್ಟಣ ಪಂಚಾಯಿತಿ ನಾಮಿನಿ ಸದಸ್ಯ ಅಣ್ಣಪ್ಪ ಮಾತನಾಡಿ, ಪಟ್ಟಣದ ಎಸ್.ಟಿ ಸಮುದಾಯಕ್ಕೆ ಸೇರಿದ ಮೇದರ ಜನಾಂಗಕ್ಕೆ ಮೀಸಲಿರುವ ಸ್ಮಶಾನದಲ್ಲಿ ಚಿತಾಗಾರದ ವ್ಯವಸ್ಥೆ ಮಾಡಬೇಕು. ವಿದ್ಯುತ್ ದೀಪ ಅಳವಡಿಸಬೇಕು ಎಂದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ಸಮಾಜ ಸೇವಕಿ ಜುಬೇದ ಸಲಹೆ ನೀಡಿ, ಪಟ್ಟಣದ ಒಂದನೇ ವಾರ್ಡ್ ನ ಹಿಡುವಳ್ಳಿ ವ್ಯಾಪ್ತಿಯಲ್ಲಿರು ಸ್ಮಶಾನದಲ್ಲಿ ಶವಸಂಸ್ಕಾರಕ್ಕೆ ಅಳವಡಿಸಿರುವ ಕಬ್ಬಿಣದ ಬಾಕ್ಸ್ ಶಿಥಿಲಾವಸ್ಥೆಗೆ ತಲುಪಿದೆ. ಸ್ಮಶಾನದ ಮೇಲ್ಛಾವಣಿ ಶಿಥಿಲ ವಾಗಿದೆ. ಅಲ್ಲದೆ ಅಲ್ಲಿ ಬೆಳಕಿನ ವ್ಯವಸ್ಥೆಯ ಕೊರತೆಯಿದ್ದು ವಿದ್ಯುತ್ ದೀಪ ಅಳವಡಿಸಲು ಅನುದಾನ ಮೀಸಲಿಡಬೇಕು. ಪಪಂನಿಂದ ಸರ್ಕಾರಿ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಬೇಕು. ಪಟ್ಟಣದಲ್ಲಿ ವಿದ್ಯುತ್ ಕಂಬಗಳನ್ನು ದೂರ, ದೂರ ಅಳವಡಿಸಿದ್ದು ಇದಕ್ಕೆ ಅಳವಡಿಸಿರುವ ವಿದ್ಯುತ್ ದೀಪಗಳು ಸಮರ್ಪಕ ಬೆಳಕು ನೀಡುತ್ತಿಲ್ಲ. ಉದ್ಯಾನಗಳನ್ನು ಅಭಿವೃದ್ಧಿಪಡಿಸಬೇಕು. ಉದ್ಯಾನವನ್ನು ರಾಷ್ಟ್ರೀಯ ಹಬ್ಬಗಳಲ್ಲಿ ಮಾತ್ರ ಸ್ವಚ್ಛಗೊಳಿಸಲಾಗುತ್ತಿದ್ದು ಬೇರೆ ಸಮಯದಲ್ಲೂ ಸ್ವಚ್ಛಗೊಳಿಸಲು ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು.
ಸಭೆ ಅಧ್ಯಕ್ಷತೆ ವಹಿಸಿದ್ದ ಆಡಳಿತಾಧಿಕಾರಿ ಡಾ.ನೂರಲ್ ಹುದಾ ಮಾತನಾಡಿ, ಪಪಂ ಆರ್ಥಿಕ ಸೌಲಭ್ಯ ನೋಡಿಕೊಂಡು ಸರ್ಕಾರಿ ಶಾಲೆ ದತ್ತು ಪಡೆಯಲು ಚಿಂತನೆ ನಡೆಸಬಹುದು. ಪಟ್ಟಣದಲ್ಲಿ ಅಳವಡಿಸಿರುವ ಸಿಸಿಎಂ ಎಸ್ ದೀಪಗಳು ಸಮರ್ಪಕ ಬೆಳಕು ನೀಡುತ್ತಿಲ್ಲ. ರಸ್ತೆ ವಿಭಜಕ ಅಳವಡಿಸಿರುವ ಕಡೆ ಮಧ್ಯದಲ್ಲಿ ಹೂವು, ಹಣ್ಣಿನ ಗಿಡ ನೆಡಬಹುದು . ಈ ಬಗ್ಗೆ ಸಾಮಾಜಿಕ ವಲಯ ಅರಣ್ಯಾಧಿಕಾರಿಗೆ ಪತ್ರ ಬರೆಯುವಂತೆ ತಹಸೀಲ್ದಾರ್ ನೂರುಲ್ ಹುದಾ ಸೂಚಿಸಿದರು.ಸಭೆಯಲ್ಲಿ ಹಾಜರಿದ್ದ ನಾಗರಿಕರು ಸಲಹೆ ನೀಡಿ, ಪಟ್ಟಣದ ವ್ಯಾಪ್ತಿಯಲ್ಲಿ ಶಾಶ್ವತ ಕುಡಿಯುವ ನೀರು ಯೋಜನೆ ಕೊಳವೆ ಅಳವಡಿಕೆಗೆ ಕಾಂಕ್ರಿಟ್ ರಸ್ತೆ ಅಗೆಯಲಾಗಿದೆ. ಇಂಟರ್ ಲಾಕ್ ತೆಗೆದುಹಾಕಿದ್ದಾರೆ. ಕೊಳವೆ ಅಳವಡಿಸಿದ ನಂತರ ಅಗೆದು ರಸ್ತೆಯನ್ನು ಪುನಃ ನಿರ್ಮಾಣ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಬೇಕೆಂಬ ಸಲಹೆ ನೀಡಿದರು.ಪಪಂ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಪಪಂಗೆ 2025–26ನೇ ಸಾಲಿನಲ್ಲಿ ಆಸ್ತಿತೆರಿಗೆ ₹36.62 ಲಕ್ಷ ಬರಬೇಕಾಗಿತ್ತು. ಇದರಲ್ಲಿ ₹33.31ಲಕ್ಷ ವಸೂಲಾಗಿದೆ. ಮಾರ್ಚ್ ಅಂತ್ಯದೊಳಗೆ ಉಳಿದ ತೆರಿಗೆ ವಸೂಲಿ ಮಾಡಲಾಗುವುದು. ಕುಡಿಯುವ ನೀರಿನ ಶುಲ್ಕ ₹20.10 ಲಕ್ಷ ಬರಬೇಕಾಗಿತ್ತು. ಇದರಲ್ಲಿ ₹14 ಲಕ್ಷ ವಸೂಲಾತಿ ಯಾಗಿದೆ. ವ್ಯಾಪಾರ ಪರವಾನಿಗೆಯಿಂದ ₹2.25 ಲಕ್ಷ ಬರಬೇಕಾಗಿತ್ತು. ಇದರಲ್ಲಿ ₹1.96 ಲಕ್ಷ ವಸೂಲಾಗಿದೆ. ಪಪಂಗೆ ಸೇರಿದ ಮಳಿಗೆಗೆ ಬಾಡಿಗೆಯಿಂದ ₹70.95 ಲಕ್ಷ ಆದಾಯ ಬರಬೇಕಾಗಿತ್ತು. ಇದರಲ್ಲಿ 41.48 ಲಕ್ಷ ವಸೂಲಾಗಿದೆ. 15 ನೇ ಹಣಕಾಸು ಯೋಜನೆಯಡಿ ₹43ಲಕ್ಷದ ಕ್ರಿಯಾಯೋಜನೆ ರೂಪಿಸಲಾಗಿದೆ. ಆದರೆ, ಅನುದಾನಬಿಡುಗಡೆಯಾಗಿಲ್ಲ. ಮುಕ್ತ ನಿಧಿಯಲ್ಲಿ ₹2 ಲಕ್ಷ ಮಾತ್ರ ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು.
ಪಪಂ ನಾಮನಿರ್ದೇಶನ ಸದಸ್ಯರಾದ ಸುಬ್ರಹ್ಮಣ್ಯ, ರಜಿ, ಪಪಂ ಸಮುದಾಯ ಸಂಘಟನಾಧಿಕಾರಿ ಲಕ್ಷ್ಮಣಗೌಡ ಇದ್ದರು.