ಹೋಬಳಿ ಮಟ್ಟದಲ್ಲಿ ಇ-ಆಫೀಸ್ ಅನುಷ್ಠಾನಗೊಳಿಸಿ

| Published : Feb 22 2024, 01:50 AM IST

ಸಾರಾಂಶ

ಜಿಲ್ಲಾ ಹಾಗೂ ತಾಲೂಕು ಮಟ್ಟದ ಎಲ್ಲ ಕಚೇರಿಗಳಲ್ಲಿ ಇ-ಆಫೀಸ್ ಅನುಷ್ಠಾನಗೊಳಿಸಲಾಗಿದ್ದು, ಹೋಬಳಿ ಮಟ್ಟದಲ್ಲಿಯೂ ಅನುಷ್ಠಾನಗೊಂಡಲ್ಲಿ ಕಚೇರಿ ಕೆಲಸಗಳಲ್ಲಿ ವೇಗದ ಪ್ರಗತಿ ಕಾಣಬಹುದು.

ಕೊಪ್ಪಳ: ರಾಜ್ಯ ಸರ್ಕಾರದ ನಿರ್ದೇಶನದಂತೆ ಎಲ್ಲ ಕಂದಾಯ ಕಚೇರಿಗಳಲ್ಲಿ ಇ-ಆಫೀಸ್ ನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು, ಅದರಂತೆ ಹೋಬಳಿ ಮಟ್ಟದಲ್ಲಿಯೂ ಇ-ಆಫೀಸ್ ಅನುಷ್ಠಾನಕ್ಕೆ ಅಗತ್ಯ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ನಳಿನ್ ಅತುಲ್ ಅಧಿಕಾರಿಗಳಿಗೆ ಸೂಚಿಸಿದರು.ಗಂಗಾವತಿ ತಹಶೀಲ್ದಾರ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಅಧಿಕಾರಿ, ಸಿಬ್ಬಂದಿಯೊಂದಿಗೆ ಸಭೆ ನಡೆಸಿ ಮಾತನಾಡಿದರು.ಕಡತ ವಿಲೇವಾರಿ ವಿಳಂಬ ತಪ್ಪಿಸುವ ಉದ್ದೇಶದಿಂದಾಗಿ ಕಂದಾಯ ಸಚಿವರು ಇ-ಆಫೀಸ್ ಮೂಲಕವೇ ಕಚೇರಿಯ ಎಲ್ಲ ಕಡತಗಳು ವಿಲೇವಾರಿ ಆಗಬೇಕು ಎಂದು ಸೂಚನೆ ನೀಡಿದ್ದಾರೆ. ಅದರಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಎಲ್ಲ ಕಚೇರಿಗಳಲ್ಲಿ ಇ-ಆಫೀಸ್ ಅನುಷ್ಠಾನಗೊಳಿಸಲಾಗಿದ್ದು, ಹೋಬಳಿ ಮಟ್ಟದಲ್ಲಿಯೂ ಅನುಷ್ಠಾನಗೊಂಡಲ್ಲಿ ಕಚೇರಿ ಕೆಲಸಗಳಲ್ಲಿ ವೇಗದ ಪ್ರಗತಿ ಕಾಣಬಹುದು. ಇದರಿಂದ ಕೆಲಸದ ಒತ್ತಡವೂ ಕಡಿಮೆಯಾಗುತ್ತದೆ ಎಂದು ಅವರು ಹೇಳಿದರು.ಜಿಲ್ಲಾಧಿಕಾರಿ ತಾಲೂಕು ಕಚೇರಿಗಳಿಂದ ನಿರ್ವಹಿಸುವ ಕಲ್ಯಾಣ ಕರ್ನಾಟಕ ಮೀಸಲಾತಿ ಪ್ರಮಾಣ ಪತ್ರ 371(ಜೆ), ಇಲಾಖಾ ದಾಖಲಾತಿ ಸಂಗ್ರಹಣಾ ಕೊಠಡಿ ಮುಂತಾದ ಸಂಕಲನ ವಿಭಾಗಳಿಗೆ ಖುದ್ದು ಭೇಟಿ ನೀಡಿ, ಪರಿಶೀಲಿಸಿದರು. ದಾಖಲಾತಿಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಂಡು, ಜವಾಬ್ದಾರಿ ಹಾಗೂ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಲು ಸೂಚಿಸಿದರು.ಈ ಸಂದರ್ಭದಲ್ಲಿ ಗಂಗಾವತಿ ತಹಶೀಲ್ದಾರ ನಾಗರಾಜ, ಕಚೇರಿಯ ಸಿಬ್ಬಂದಿ ಇದ್ದರು.