ಪರಿಸರಕ್ಕೆ ಧಕ್ಕೆಯಿಲ್ಲದೆ ಪಂಪ್ಡ್ ಸ್ಟೋರೇಜ್ ಜಾರಿ

| Published : Oct 28 2025, 12:03 AM IST

ಸಾರಾಂಶ

2 ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಪರಿಸರಕ್ಕೆ ಹೆಚ್ಚಿನ ಹಾನಿಯಾಗದ ರೀತಿಯಲ್ಲಿ ಯೋಜನೆ ಜಾರಿಗೊಳಿಸಲು ಕೆಪಿಸಿಎಲ್ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಹೆಜ್ಜೆ ಇಡುತ್ತಿದೆ ಎಂದು ಕೆಪಿಸಿಎಲ್ ಮುಖ್ಯ ಅಭಿಯಂತರ ಮಹಾದೇವ್ ತಿಳಿಸಿದರು.

ಶಿವಮೊಗ್ಗ: 2 ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಪರಿಸರಕ್ಕೆ ಹೆಚ್ಚಿನ ಹಾನಿಯಾಗದ ರೀತಿಯಲ್ಲಿ ಯೋಜನೆ ಜಾರಿಗೊಳಿಸಲು ಕೆಪಿಸಿಎಲ್ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಹೆಜ್ಜೆ ಇಡುತ್ತಿದೆ ಎಂದು ಕೆಪಿಸಿಎಲ್ ಮುಖ್ಯ ಅಭಿಯಂತರ ಮಹಾದೇವ್ ತಿಳಿಸಿದರು.

ನಗರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಆರ್ಥಿಕ ಪ್ರಗತಿ ಮತ್ತು ಶಾಶ್ವತ ವಿದ್ಯುತ್ ಅಭಿವೃದ್ಧಿಗೆ ಅತಿ ಕಡಿಮೆ ಭೂ ಬಳಕೆ ಮಾಡಿಕೊಂಡು ಕೇವಲ 0.541 ಚ.ಕಿ.ಮೀ. ಅರಣ್ಯ ಭೂಮಿಯಲ್ಲಿ ಈ ವಿದ್ಯುತ್ ಶೇಖರಣೆ ಮತ್ತು ಮರು ಉತ್ಪಾದನೆಗೆ ಕ್ರಮ ವಹಿಸಲಾಗುವುದು. ಹೊಸ ಅಣೆಕಟ್ಟುಗಳಿಲ್ಲದೇ ಈಗಿರುವ ಗೇರುಸೊಪ್ಪ ಮತ್ತು ತಳಕಳಲೆ ಅಣೆಕಟ್ಟುಗಳ ಬಳಕೆ ಮಾಡಿಕೊಳ್ಳಲಾಗುವುದು. ತಜ್ಞರ ಮೇಲ್ವಿಚಾರಣೆಯಲ್ಲಿ ಸುರಕ್ಷಿತ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಗುಡ್ಡ ಕುಸಿತ, ಪರಿಸರ ಹಾನಿ, ಜಲಕ್ಷಾಮ ಮುಂತಾದ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ವಿನಂತಿಸಿದರು.

ಈ ಯೋಜನೆಯಡಿ ಕೇವಲ 100.645 ಹೆಕ್ಟೇರ್ ಪ್ರದೇಶ (245.7 ಎಕರೆ) ಮಾತ್ರ ಬಳಸಿಕೊಳ್ಳಲಾಗುತ್ತಿದ್ದು, ಈ ಪೈಕಿ 54.155 ಹೆಕ್ಟೇರ್ ಅರಣ್ಯ ಪ್ರದೇಶವಾಗಿದ್ದರೆ 46.49 ಹೆಕ್ಟೇರ್ ಅರಣ್ಯೇತರ ಪ್ರದೇಶವಾಗಿದೆ. ಅರಣ್ಯ ಪ್ರದೇಶಕ್ಕೆ ಸಂಬಂಧಿಸಿದಂತೆ ಕೆಪಿಸಿಎಲ್ ಪರ್ಯಾಯ ಅರಣ್ಯ ಪುನರ್ ಸ್ಥಾಪಿಸಲು ಅರಣ್ಯ ಇಲಾಖೆಗೆ ಸ್ವಾಧೀನದಷ್ಟೇ ಅರಣ್ಯೇತರ ಪ್ರದೇಶ ಹಾಗೂ ಅರಣ್ಯ ಪುನರ್ ಸ್ಥಾಪನೆಗೆ ತಗುಲುವ ವೆಚ್ಚ ಭರಿಸುತ್ತಿದೆ. ಯೋಜನೆಯ ವ್ಯಾಪ್ತಿಯಲ್ಲಿ ಸುಮಾರು 16 ಸಾವಿರ ಮರಗಳನ್ನು ಗುರುತಿಸಲಾಗಿದೆಯಾದರೂ ಆ ಪ್ರಮಾಣ ತಗ್ಗಿಸಿ ಮರ ಕಡಿತಲೆ ಮಾಡಲಾಗುವುದು ಎಂದರು.

ಯೋಜನೆಯ ಬಹುಪಾಲು ರಚನೆಗಳು ಸುರಂಗದ ಒಳಗೆ ಇರುವುದರಿಂದ ಭೂಮಿಯ ಮೇಲ್ಮೈನಲ್ಲಿ ಕನಿಷ್ಠ ಪರಿಣಾಮ ಉಂಟಾಗುತ್ತದೆ. ಭೂಮಿಯ ಆಳದಲ್ಲಿ ಸುರಂಗದ ಮೂಲಕ ನೀರನ್ನು ಹರಿಬಿಡುವ ಮತ್ತು ಅದೇ ಟನಲ್ ಮೂಲಕ ನೀರನ್ನು ಎತ್ತುವಳಿ ಮಾಡುವುದರಿಂದ ಸುರಂಗ ನಿರ್ಮಾಣದ ಭೂಮಿಯ ಮೇಲ್ಮೈನಲ್ಲಿ ಇರುವ ಮರ, ಗಿಡ, ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದರು.

ಪಂಪ್ಡ್ ಸ್ಟೋರೇಜ್ ಯೋಜನೆಗೆ ಈಗಾಗಲೇ ಕೇಂದ್ರ ವಿದ್ಯುತ್ ಪ್ರಾಧಿಕಾರ ಅನುಮತಿ ನೀಡಿದೆ. ಇದು ಅನುಮತಿ ನೀಡುವ ಮೊದಲು 13 ನಿರ್ದೇಶನಾಲಯಗಳಿಂದ ಅಭಿಪ್ರಾಯ ಸಂಗ್ರಹಣೆ ಮಾಡಲಾಗಿದೆ. ಈ ಯೋಜನೆಯಿಂದ ಭೂ ಕುಸಿತ, ಭೂಕಂಪನದಂತಹ ಅಪಾಯಗಳು, ಜೀವ ವೈವಿಧ್ಯತೆಗೆ ಧಕ್ಕೆ, ಭೂಮಿಯ ಸ್ಥಿರತೆಯ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ ಎಂಬುದನ್ನು ವೈಜ್ಞಾನಿಕವಾಗಿ ತಿಳಿದುಕೊಂಡೇ ಯೋಜನೆಗೆ ಅನುಮತಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

1972ರ ವನ್ಯಜೀವಿ ಕಾಯ್ದೆ ಸೆಕ್ಷನ್ 29ರ ಪ್ರಕಾರ ವನ್ಯಜೀವಿ ಧಾಮದಲ್ಲಿ ಯಾವುದೇ ಅಭಿವೃದ್ಧಿ ಯೋಜನೆಯನ್ನು ಕೈಗೊಳ್ಳಬಾರದು ಎಂದಿದೆ. ಅಲ್ಲದೇ, ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ವೈಪರೀತ್ಯ ಇಲಾಖೆಯ ಅಧಿಕಾರಿ ಹಾಗೂ ತಜ್ಞರಾದ ಪ್ರಣೀತಾ ಪೌಲ್ ಅವರು ಅಳಿವಿನ ಅಂಚಿನಲ್ಲಿರುವ ಸಿಂಗಳೀಕ, ಮಂಗಟ್ಟೆ ಮೊದಲಾದ ವನ್ಯಜೀವಿಗಳ ವಾಸಸ್ಥಾನ ಆಗಿರುವ ಶರಾವತಿ ಕೊಳ್ಳದಲ್ಲಿ ಇಂತಹ ಯೋಜನೆಗಳನ್ನು ಜಾರಿಗೊಳಿಸುವುದು ಸಮಂಜಸವಲ್ಲ ಎಂಬ ಅಭಿಪ್ರಾಯ ನೀಡಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇಲ್ಲಿ ಉತ್ಪಾದಿಸಲಾಗುವ 2 ಸಾವಿರ ಮೆಗಾವ್ಯಾಟ್ ವಿದ್ಯುತ್ ಸರಬರಾಜು ಮಾಡಲು ‘ಒನ್ ನೇಷನ್ ಒನ್ ಗ್ರಿಡ್’ನಡಿ ಇರುವ ವಿದ್ಯುತ್ ಸರಬರಾಜು ವ್ಯವಸ್ಥೆಯನ್ನೇ ಬಳಸಲಾಗುವುದು ಎಂದರು.

ಅಧಿಕಾರಿಗಳಾದ ಶಿಲ್ಪಾ, ವಿಜಯ್, ಸುರೇಶ್ ಕೆ. ಮೊದಲಾದವರು ಇದ್ದರು.