ಕೊಪ್ಪಳ: ಜಗದ್ಗುರು ರೇಣುಕಾಚಾರ್ಯರ ತತ್ವ ಇಂದಿನ ಸಮಾಜದ ಸಮಾನತೆ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಪ್ರಗತಿಗೆ ದಾರಿ ದೀಪವಾಗಿದ್ದು, ಅವರ ತತ್ವಾದರ್ಶ ಎಲ್ಲರೂ ಜೀವನದಲ್ಲಿ ಅಳವಡಿಸಿಕೋಳ್ಳಬೇಕು ಎಂದು ಸಂಸದ ಕೆ.ರಾಜಶೇಖರ ಹಿಟ್ನಾಳ್ ಹೇಳಿದರು.
ಅವರು ಭಾನುವಾರ ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಕೊಪ್ಪಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಶ್ರೀಜಗದ್ಗುರು ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ರೇಣುಕಾಚಾರ್ಯರು ಸಮಾಜದಲ್ಲಿ ಸಮಾನತೆ, ಧರ್ಮನಿಷ್ಠೆ ಹಾಗೂ ನೀತಿಯ ಜೀವನ ಮೌಲ್ಯ ಸಾರಿದ ಮಹಾನ್ ಸಂತರು. ಅವರು ಸ್ಥಾಪಿಸಿದ ವೀರಶೈವ ಧರ್ಮದ ತತ್ವ ಇಂದಿಗೂ ಸಮಾಜಕ್ಕೆ ದಿಕ್ಕು ತೋರಿಸುತ್ತಿವೆ. ಯುವಕರು ಅವರ ಆದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.ಇಷ್ಟಲಿಂಗ ಧಾರಣೆಯ ಮೂಲಕ ಭಗವಂತನ ಆರಾಧನೆ ಮಾಡಿ ಶಿವನನ್ನು ತಲುಪಬಹುದು ಎಂದು ರೇಣುಕಾಚಾರ್ಯರು ಸಾರಿದ್ದಾರೆ. ಇಂದು ಶೈವ ತತ್ವ ಸಮಾಜದಲ್ಲಿ ಗಟ್ಟಿಯಾಗಿ ಉಳಿಯಲು ಜಂಗಮ ಸಮುದಾಯದ ಕೊಡುಗೆ ಬಹಳ ದೊಡ್ಡದಿದೆ ಎಂದು ಹೇಳಿದರು.
ವಿಪ ಸದಸ್ಯೆ ಹೇಮಲತಾ ನಾಯಕ ಮಾತನಾಡಿ,ರಂಭಾಪುರಿ ಪೀಠದ ಸ್ಥಾಪಕರು ಅಜ್ಞಾನದ ಕಾಲದಲ್ಲಿ ಸಮಾಜಕ್ಕೆ ಜ್ಞಾನದ ದೀವಿಗೆಯಾದರು. ಇಂದಿನ ದಿನಗಳಲ್ಲಿ ಲಿಂಗಧಾರಣೆ ಮಾಡುವವರ ಸಂಖ್ಯೆ ಕ್ಷೀಣಿಸುತ್ತಿರುವುದು ಕಳವಳಕಾರಿ.ಭಕ್ತಿಗೆ ಯಾವುದೇ ಭೇದಭಾವವಿಲ್ಲ. ದೇಹದಷ್ಟೇ ಮನಸ್ಸು ಕೂಡ ಸದೃಢವಾಗಿರಬೇಕು ಎಂದು ಅಭಿಪ್ರಾಯಪಟ್ಟರು.ಶಿವಮೊಗ್ಗ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಹಾ.ಮಾ.ನಾಗಾರ್ಜುನ ಶ್ರೀಜಗದ್ಗುರು ಶ್ರೀ ರೇಣುಕಾಚಾರ್ಯ ಕುರಿತು ವಿಶೇಷ ಉಪನ್ಯಾಸ ನೀಡಿ, ರೇಣುಕಾಚಾರ್ಯರು ನೀಡಿದ ಸಿದ್ಧಾಂತ ಶಿಖಾಮಣಿ ಗ್ರಂಥವು ಕೇವಲ ಶೈವ ಧರ್ಮಕ್ಕೆ ಸೀಮಿತವಾಗಿಲ್ಲ, ಅದು ಇಡೀ ವಿಶ್ವಕ್ಕೆ ಅನುಕೂಲವಾಗುವ ಅಂಶ ಒಳಗೊಂಡಿದೆ. ಶೈವ ಧರ್ಮವು ಮೂಲತಃ ಜಾತ್ಯತೀತವಾದುದು ಎಂದರು.
ಮೈನಳ್ಳಿಯ ಮರುಳಸಿದ್ದೇಶ್ವರ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದರು.
ಈ ಸಂದರ್ಭದಲ್ಲಿ ಕೊಪ್ಪಳ ಜಂಗಮ ಸಮುದಾಯದ ತಾಲೂಕಾಧ್ಯಕ್ಷ ಹಂಪಯ್ಯ ಜನ್ನಿಮಠ, ಶಿವಮೂರ್ತಿ ಸ್ವಾಮಿ ಅಳವಂಡಿ, ಗವಿಸಿದ್ದಲಿಂಗ ಬಸಯ್ಯ, ವಿರುಪಾಕ್ಷಯ್ಯ, ಶಿವಕುಮಾರ, ವಿಜಯ, ಬಸಯ್ಯ ಹಿರೇಮಠ ಹಾಗೂ ಮತ್ತಿತರರು ಮತ್ತು ಕೊಪ್ಪಳ ತಹಸೀಲ್ದಾರ ಕಚೇರಿಯ ಮಹಾವೀರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕ್ರತಿಯ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಸ್ವಾಗತಿಸಿದರು. ಜಗದೀಶ್ ಹಿರೇಮಠ ನಿರೂಪಿಸಿದರು.