ಅನುದಾನಿತ ಶಾಲೆಗಳಲ್ಲಿ ಶಿಕ್ಷಕರು ಪಿಂಚಣಿ ವಂಚಿತರಾಗಿದ್ದು, ಅವರಿಗೆ ಹಳೆಯ ಪಿಂಚಣಿ ಜಾರಿಗೊಳಿಸಬೇಕು. ಸರ್ಕಾರಿ ಶಾಲೆಗಳಿಗೆ ದೊರೆಯುವ ಸೌಲಭ್ಯಗಳು ಅನುದಾನಿತ ಶಾಲೆಗಳಿಗೂ ದೊರೆಯುವಂತಾಗಬೇಕೆಂದು ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಅನುದಾನಿತ ಶಾಲೆಗಳಲ್ಲಿ ಶಿಕ್ಷಕರು ಪಿಂಚಣಿ ವಂಚಿತರಾಗಿದ್ದು, ಅವರಿಗೆ ಹಳೆಯ ಪಿಂಚಣಿ ಜಾರಿಗೊಳಿಸಬೇಕು. ಸರ್ಕಾರಿ ಶಾಲೆಗಳಿಗೆ ದೊರೆಯುವ ಸೌಲಭ್ಯಗಳು ಅನುದಾನಿತ ಶಾಲೆಗಳಿಗೂ ದೊರೆಯುವಂತಾಗಬೇಕೆಂದು ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಆಗ್ರಹಿಸಿದರು.ನಗರದ ಕಂದಗಲ್ಲ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಜರುಗಿದ ರಾಜ್ಯಮಟ್ಟದ ಶಿಕ್ಷಕರ ದಿನಾಚಾರಣೆ ಹಾಗೂ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಹೋರಾಟ ಮಾಡದೆ ಯಾವುದೇ ಸೌಲಭ್ಯಗಳನ್ನು ಪಡೆಯಲು ಅನುದಾನಿತ ನೌಕರರಿಗೆ ಸಾಧ್ಯವಿಲ್ಲ. ನವೆಂಬರ್ 17ರಿಂದ ನಡೆಯುವ ಹೋರಾಟದಲ್ಲಿ ಎಲ್ಲ ಅನುದಾನಿತ ಶಿಕ್ಷಕರು ಭಾಗವಹಿಸಿ ಸೌಲಭ್ಯಗಳನ್ನು ಪಡೆಯಲು ಹೋರಾಡೋಣ ಎಂದರು.
ಸಕ್ಕರೆ ಮತ್ತು ಜವಳಿ ಖಾತೆ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, ಅನುದಾನಿತ ನೌಕರರ ಎಲ್ಲ ಸಮಸ್ಯೆಗಳನ್ನು ಸರ್ಕಾರದ ಗಮನ ಸೆಳೆದು ಎಲ್ಲ ಅನುದಾನಿತ ನೌಕರರಿಗೆ ಸರ್ಕಾರದ ಸೌಲಭ್ಯಗಳು ಸಿಗುವಂತೆ ಸರ್ಕಾರಕ್ಕೆ ಮನವರಿಕೆ ಮಾಡುತ್ತೇನೆಂದು ಭರವಸೆ ನೀಡಿದರು.ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಮಾತನಾಡಿದರು. 30 ರಾಜ್ಯ ಪ್ರಶಸ್ತಿ ಶಿಕ್ಷಕರನ್ನು, 11 ಜಿಲ್ಲಾ ಪ್ರಶಸ್ತಿ ಶಿಕ್ಷಕರನ್ನು ಹಾಗೂ 40 ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಲೇಖಕ ಎನ್.ಆರ್. ಕುಲಕರ್ಣಿ ಬರೆದಿರುವ ಮಕ್ಕಳ ಲೋಕದ ಅಕ್ಷರ ಸಂತರು ಎಂಬ ಪುಸ್ತಕ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷ ಶಿವಾನಂದ ಹಿರೇಕುರಬರ, ಗೌರವಾಧ್ಯಕ್ಷ ಕೆ.ಹಣಮಂತಪ್ಪ, ರಾಜ್ಯ ಸಂಚಾಲಕ ಸೋ.ಫಾಲನೇತ್ರ, ರಾಜ್ಯ ಕಾರ್ಯಾಧ್ಯಕ್ಷ ಎನ್.ರಾಜಗೋಪಾಲ, ಉಪನಿರ್ದೇಶಕ ಮಂಜುನಾಥ ಗುಳೇದಗುಡ್ಡ, ಜಿ.ಹನುಮಂತಪ್ಪ, ಬಿಇಒ ಆರ್.ವಿ. ಹೊಸೂರ, ಅನುದಾನಿತ ಶಿಕ್ಷಕರು ಭಾಗವಹಿಸಿದ್ದರು. ಗೀತಾ ಬಿರಾದಾರ, ಜ್ಯೋತಿ ನಿರೂಪಿಸಿದರು. ವಿಜಕುಮಾರ ಒಪ್ಪಾರಿ ವಂದಿಸಿದರು.