ತಾಲೂಕಿನಲ್ಲಿ ಜಾರಿಯಲ್ಲಿರುವ ಕಾಮಗಾರಿಗಳನ್ನು ನಿಗದಿತ ಕಾಲಾವಧಿಯಲ್ಲಿ ಗುಣಮಟ್ಟದೊಂದಿಗೆ ಪೂರ್ಣಗೊಳಿಸಬೇಕು. ಈ ನಿಟ್ಟಿನಲ್ಲಿ ಯಾವುದೇ ಯೋಜನೆಗಳ ಅನುದಾನ ಸರ್ಕಾರಕ್ಕೆ ಮರಳಿ ಹೋಗದಂತೆ ಅಧಿಕಾರಿಗಳು ಸಮರೋಪಾದಿಯಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸೂಚಿಸಿದರು.
ಕನ್ನಡಪ್ರಭ ವಾರ್ತೆ ಹುಕ್ಕೇರಿ
ತಾಲೂಕಿನಲ್ಲಿ ಜಾರಿಯಲ್ಲಿರುವ ಕಾಮಗಾರಿಗಳನ್ನು ನಿಗದಿತ ಕಾಲಾವಧಿಯಲ್ಲಿ ಗುಣಮಟ್ಟದೊಂದಿಗೆ ಪೂರ್ಣಗೊಳಿಸಬೇಕು. ಈ ನಿಟ್ಟಿನಲ್ಲಿ ಯಾವುದೇ ಯೋಜನೆಗಳ ಅನುದಾನ ಸರ್ಕಾರಕ್ಕೆ ಮರಳಿ ಹೋಗದಂತೆ ಅಧಿಕಾರಿಗಳು ಸಮರೋಪಾದಿಯಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸೂಚಿಸಿದರು.ಪಟ್ಟಣದ ತಾಲೂಕು ಪಂಚಾಯತಿ ಸಭಾಭವನದಲ್ಲಿ ಮಂಗಳವಾರ ನಡೆದ ತಾಪಂನ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಸಕ್ತ ಸಾಲಿನ ಆರ್ಥಿಕ ಅವಧಿ ಕೊನೆಗೊಳ್ಳಲು ಎರಡು ತಿಂಗಳು ಮಾತ್ರ ಬಾಕಿ ಇದ್ದು ಈ ಅವಧಿಯಲ್ಲಿ ಎಲ್ಲ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಸರ್ಕಾರದ ಅನುದಾನ ಸದ್ಬಳಕೆಯಾಗುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದರು.ಜಲಜೀವನ ಮಿಷನ್ (ಜೆಜೆಎಂ) ಕಾಮಗಾರಿಗಳ ಅನುಷ್ಠಾನ ವೇಳೆ ಅಗೆದಿರುವ ಗುಂಡಿಗಳನ್ನು ಮುಚ್ಚಿಲ್ಲ. ಇದರಿಂದ ರಸ್ತೆಗಳು ಹಾಳಾಗಿದ್ದು ಜನ ಹಾಗೂ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಸರಿಯಾಗಿ ನಳ ಜೋಡಣೆ ಮಾಡಿಲ್ಲ ಎಂಬುದು ಸೇರಿದಂತೆ ಜೆಜೆಎಂ ಗುಣಮಟ್ಟದ ಕುರಿತು ಜನರಿಂದ ದೂರುಗಳು ಕೇಳಿ ಬಂದಿವೆ. ಹಾಗಾಗಿ ಶೀಘ್ರವೇ ಈ ಇಲಾಖೆಯ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಪ್ರತ್ಯೇಕ ಸಭೆ ನಡೆಸಿ ಜನರ ಸಮಸ್ಯೆಗಳನ್ನು ಪರಿಹರಿಸುವಂತೆ ಅವರು ಸೂಚಿಸಿದರು.ಅಂಗನವಾಡಿ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ವಹಿಸಬೇಕು. ನೈಸರ್ಗಿಕ ಬೆಳೆಯ ಕುರಿತು ಜಾಗೃತಿ ಮೂಡಿಸಬೇಕು. ಡಿಸಿಸಿ ಬ್ಯಾಂಕ್‌ನ ಜಾನುವಾರು ಸಾಲ ಕುರಿತು ರೈತರಿಗೆ ಅರಿವು ಮೂಡಿಸಬೇಕು. ನರೇಗಾ ಯೋಜನೆ ಅನುಷ್ಠಾನದಲ್ಲಿ ಪಾರದರ್ಶಕತೆ ಕಾಯ್ದುಕೊಂಡು ಸರ್ಕಾರಿ ಆಸ್ತಿಗಳನ್ನು ಸೃಜಿಸಬೇಕು. ಕಾಮಗಾರಿಯಲ್ಲಿ ಶಾಲಾ-ಅಂಗನವಾಡಿ ದುರಸ್ತಿ ಕಾಮಗಾರಿಗಳನ್ನು ಶೀಘ್ರವೇ ಮುಕ್ತಾಯಗೊಳಿಸಬೇಕು ಎಂದರು.ಅರ್ಹರಿಗೆ ಗ್ಯಾರಂಟಿ ಯೋಜನೆಗಳನ್ನು ತಲುಪಿಸಬೇಕು. ಕಲಿಕಾ ಗುಣಮಟ್ಟದಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಅಗತ್ಯ ಕ್ರಮ ವಹಿಸಬೇಕು. ಬಡಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಬೇಕು. ಸರಕಾರಿ ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸುವವರ ವಿರುದ್ಧ ನಿರ್ಧಾಕ್ಷೀಣ್ಯ ಕ್ರಮ ವಹಿಸಲಾಗುವುದು. ಸೇವೆಯಲ್ಲಿ ಉದಾಸೀನತೆ ಕಂಡು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.ತಹಸೀಲ್ದಾರ್ ಬಲರಾಮ ಕಟ್ಟಿಮನಿ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಟಿ.ಆರ್.ಮಲ್ಲಾಡದ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಶಾನೂಲ್ ತಹಶೀಲ್ದಾರ, ಕೆಡಿಪಿ ಜಿಲ್ಲಾ ಸಮಿತಿ ಸದಸ್ಯ ಬಸವರಾಜ ಕೋಳಿ, ತಾಲೂಕು ಸಮಿತಿ ಸದಸ್ಯ ಲಕ್ಷ್ಮಣ ಹೂಲಿ, ತಾಪಂ ಮ್ಯಾನೇಜರ್ ಅವಿನಾಶ ಹೊಳೆಪ್ಪಗೋಳ, ಯೋಜನಾಧಿಕಾರಿ ಪ್ರಶಾಂತ ಮುನ್ನೋಳಿ, ಮುಖಂಡರಾದ ಮಹಾಂತೇಶ ಮಗದುಮ್ಮ, ಕಿರಣ ರಜಪೂತ, ಇಲಿಯಾಸ್ ಇನಾಮದಾರ, ದಯಾನಂದ ಪಾಟೀಲ, ಮೌನೇಶ ಪೋತದಾರ, ಅಕ್ಷಯ ವೀರಮುಖ, ಮಹೇಶ ಹಟ್ಟಿಹೊಳಿ, ಭೀಮಗೌಡ ಅಮ್ಮಣಗಿ, ಸಂಜು ಜೀವಣ್ಣವರ, ಚಂದು ಗಂಗಣ್ಣವರ, ಕೆಂಪಣ್ಣಾ ಶಿರಹಟ್ಟಿ, ಕಿರಣ ಬಾಗೇವಾಡಿ ಮತ್ತಿತರರು ಉಪಸ್ಥಿತರಿದ್ದರು.