ನ್ಯಾ.ಸದಾಶಿವ ಆಯೋಗದ ವರದಿ ಜಾರಿ ಮಾಡಿ

| Published : Nov 22 2023, 01:00 AM IST

ಸಾರಾಂಶ

ರಾಜ್ಯದಲ್ಲಿ ನ್ಯಾ.ಸದಾಶಿವ ಆಯೋಗದ ವರದಿ ಜಾರಿ ಮಾಡಿ ಒಳಮೀಸಲಾತಿ ಕಲ್ಪಿಬೇಕು ಎಂದು ಆಗ್ರಹಿಸಿ ಬಿಎಸ್‍ಪಿ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿತು. ನಗರದ ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ದಾರಿಯ ಮಧ್ಯದಲ್ಲಿ ಡಾ.ಬಿ.ಆರ್. ಆಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಹಾರ ಹಾಕಿ ನಮಿಸಿದರು.

ಒಳಮೀಸಲಾಗಿ ಕಲ್ಪಿಸಲು ಬಿಎಸ್‌ಪಿ ಆಗ್ರಹ । ಚಿತ್ರದುರ್ಗದಲ್ಲಿ ಬೃಹತ್‌ ಪ್ರತಿಭಟನಾ ಮೆರವಣಿಗೆಕನ್ನಡಪ್ರಭ ವಾರ್ತೆ ಚಿತ್ರದುರ್ಗ

ರಾಜ್ಯದಲ್ಲಿ ನ್ಯಾ.ಸದಾಶಿವ ಆಯೋಗದ ವರದಿ ಜಾರಿ ಮಾಡಿ ಒಳಮೀಸಲಾತಿ ಕಲ್ಪಿಬೇಕು ಎಂದು ಆಗ್ರಹಿಸಿ ಬಿಎಸ್‍ಪಿ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿತು. ನಗರದ ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ದಾರಿಯ ಮಧ್ಯದಲ್ಲಿ ಡಾ.ಬಿ.ಆರ್. ಆಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಹಾರ ಹಾಕಿ ನಮಿಸಿದರು.

ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಯ 101 ಜಾತಿಗಳ ಪೈಕಿ ಮಾದಿಗ ಮತ್ತು ಮಾದಿಗೆ ಸಂಬಂಧಿತ 49 ಜಾತಿಗಳ ಜನಸಂಖ್ಯೆ ಹೆಚ್ಚಾಗಿರುತ್ತದೆ. ಕೆಲವು ಐತಿಹಾಸಿಕ ಕಾರಣಗಳಿಂದ ಈ ಸಮಾಜಕ್ಕೆ ಶಿಕ್ಷಣ, ಸರ್ಕಾರಿ ಸೇವೆ ಮತ್ತು ರಾಜಕೀಯ ಮತ್ತಿತರರ ಎಲ್ಲಾ ರಂಗಗಳಲ್ಲಿ ಸೂಕ್ತ ಪ್ರಾತಿನಿಧ್ಯ ಇಲ್ಲದೆ ತೀರ ಹಿಂದುಳಿದಿವೆ. ಈ ಅನ್ಯಾಯವನ್ನು ಪ್ರತಿಭಟಿಸಿ ಮಾದಿಗ ಮತ್ತು ಮಾದಿಗೆ ಸಂಬಂಧಿತ ಜಾತಿಗಳಿಗೆ ಇವರ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ಕಲ್ಪಿಸಬೇಕೆಂದು ಕರ್ನಾಟಕದಲ್ಲಿ ಕಳೆದ 30 ವರ್ಷಗಳಿಂದ ಹಲವಾರು ಬಗೆಯ ಚಳುವಳಿಗಳು, ಪಾದಯಾತ್ರೆಗಳು ನಡೆದಿವೆ. ತದನಂತರ ಮಾದಿಗರ ಹೋರಾಟಕ್ಕೆ ಮಣಿದು ಧರ್ಮಸಿಂಗ್ ಸರ್ಕಾರ 2005ರಲ್ಲಿ ನ್ಯಾಯಮೂರ್ತಿ ಸದಾಶಿವ ಆಯೋಗವನ್ನು ರಚಿಸಿತು. ಈ ಆಯೋಗವು ಸತತವಾಗಿ 7 ವರ್ಷಗಳು ಅಧ್ಯಯನ ನಡೆಸಿ 2012ರಲ್ಲಿ ಬಿಜೆಪಿಯ ಸದಾನಂದಗೌಡ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಿತು ಎಂದು ತಿಳಿಸಿದರು.

ಕಾಂಗ್ರೆಸ್, ಜೆಡಿಎಸ್, ಬಿಜೆಪಿಯಿಂದ ಮಾದಿಗರಿಗೆ ದ್ರೋಹ:

ಚುನಾವಣೆ ಸಮಯದಲ್ಲಿ ಮಾದಿಗೆ ಮತ್ತು ಮಾದಿಗ ಸಂಬಂಧಿತ ಜಾತಿಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ಸದಾಶಿವ ಆಯೋಗದ ವರದಿಯನ್ನು ಜಾರಿಮಾಡುವುದಾಗಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳು ತಮ್ಮ ಪ್ರಣಾಳಿಕೆಗಳಲ್ಲಿ ಘೋಷಣೆ ಮಾಡಿ, ಗೆದ್ದ ನಂತರ ಮೌನ ವಹಿಸಿ ಈ ಸಮಾಜಕ್ಕೆ ನಿರಂತರವಾಗಿ ದ್ರೋಹ ಮಾಡುತ್ತಾ ಬಂದಿವೆ. ಕಾಂಗ್ರೆಸ್‌ ಸರ್ಕಾರದ ಮೌನ ಖಂಡನೀಯ:

2023ರ ಚುನಾವಣಾ ಪೂರ್ವದಲ್ಲಿ ತಮ್ಮ ಪ್ರನಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮೊದಲನೇ ಸಚಿವ ಸಂಪುಟದಲ್ಲಿ ಚರ್ಚಿಸಿ ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುವುದಾಗಿ ಘೋಷಣೆ ಮಾಡಿರುತ್ತದೆ. ಆದರೆ ಗೆದ್ದು ಅಧಿಕಾರಕ್ಕೆ ಬಂದು 6 ತಿಂಗಳು ಕಳೆಯುತ್ತಿದ್ದರೂ ಇದೂವರೆಗೂ ಈ ಬಗ್ಗೆ ಮೌನವಹಿಸಿರುವುದು ಖಂಡನೀಯ, ಪರಿಶಿಷ್ಟ ಜಾತಿಯ ಮೀಸಲಾತಿ ಹಂಚಿಕೆಯಲ್ಲಿ ತಾರತಮ್ಯ ಸೃಷ್ಟಿಗೆ ಕಾರಣ 75 ವರ್ಷಗಳು ರಾಜ್ಯವಾಳಿದ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳೇ ಹೊಣೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ ಎಂದಿದ್ದಾರೆ.

ಸರ್ಕಾರದ ಈ ನಿರ್ಲಕ್ಷತೆ ಬಗ್ಗೆ ಮೀಸಲಾತಿ-ವಂಚಿತ ಓಬಿಸಿ ಸಮುದಾಯಗಳು ಮತ್ತು ಬಹುಜನ ಸಮಾಜ ಪಾರ್ಟಿಯು ಕಾಂತರಾಜ್ ವರದಿ ಜಾರಿಗಾಗಿ ಒತ್ತಾಯಕ್ಕೆ ಮುಂದಾದವು. ಈ ನಡುವೆ, ಲಿಂಗಾಯತ-ಒಕ್ಕಲಿಗ ಸ್ವಾಮೀಜಿಗಳು ಮತ್ತು ರಾಜಕಾರಣಿಗಳು ಈ ವರದಿಯನ್ನು ಜಾರಿ ಮಾಡದಿರುವಂತೆ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಜನಸಂಖ್ಯೆಯ ವರದಿಯು ತಪ್ಪಾಗಿದೆ ಎನ್ನುತ್ತಾ, ಮತ್ತೊಮ್ಮೆ ವೈಜ್ಞಾನಿಕವಾಗಿ ಜನಗಣತಿ ನಡೆಯಬೇಕೆನ್ನುತ್ತಿದ್ದಾರೆ.

ಹೀಗೆ ಸರ್ಕಾರಗಳು ಹಿಂದುಳಿದ ಜಾತಿಗಳಿಗೆ ವಂಚನೆ ಮುಂದುವರೆಸಲು ಏನೇನೋ ಸಬೂಬು ಹೇಳುತ್ತಾ ಚಳ್ಳೆಹಣ್ಣು ತಿನ್ನಿಸುತ್ತಾ ಬಂದಿವೆ. ಆಯೋಗಗಳ ಮೇಲೆ ಆಯೋಗಗಳನ್ನು ರಚಿಸುತ್ತ, ಸಾರ್ವಜನಿಕರ ಹಣವನ್ನು ಪೋಲು ಮಾಡುತ್ತಾ ಅತಿ ಹಿಂದುಳಿದ ನೂರಾರು ಜಾತಿಗಳನ್ನು ಕಳೆದ 75 ವರ್ಷಗಳಿಂದ ವಂಚಿಸಿ ಮಂಗ ಮಾಡುತ್ತಿದ್ದಾರೆ ಎಂದು ದೂರಿದರು.ಪರಿಶಿಷ್ಟ ಜಾತಿಯ ಮೀಸಲಾತಿ ಹಂಚಿಕೆಯಲ್ಲಿ ತಾರತಮ್ಯ ಸೃಷ್ಟಿಗೆ ಕಾರಣ 75 ವರ್ಷಗಳು ರಾಜ್ಯವಾಳಿದ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳೇ ಹೊಣೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸಂವಿಧಾನದ ಆಶಯದಂತೆ ಸಾಮಾಜಿಕ ನ್ಯಾಯ ಎತ್ತಿಹಿಡಿಯುವ ಕಾಂತರಾಜು ಆಯೋಗದ ವರದಿ ಮತ್ತು ಸದಾಶಿವ ಆಯೋಗದ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಿ, ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಕರ್ನಾಟಕ ಸರ್ಕಾರವನ್ನು ಆಗ್ರಹಿಸಲಾಯಿತು.

ಪ್ರತಿಭಟನೆಯಲ್ಲಿ ಬಿಎಸ್‌ಪಿ ಜಿಲ್ಲಾ ಸಂಯೋಜಕರಾದ ಕೆ.ಎನ್. ದೊಡ್ಡಟ್ಟಪ್ಪ, ಹೆಚ್.ಎನ್. ಶಿವಮೂರ್ತಿ, ಜಿಲ್ಲಾಧ್ಯಕ್ಷರಾದ ಎನ್.ಪ್ರಕಾಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತರಾಯ್ ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ್, ಜಗದೀಶ್, ಉಪಾಧ್ಯಕ್ಷರಾದ ಲಕ್ಷ್ಮಮ್ಮ, ಹಿರಿಯೂರು ತಾ.ಅಧ್ಯಕ್ಷ ಮಹಲಿಂಗಪ್ಪ, ಮೊಳಕಾಲ್ಮೂರು ತಾ.ಅಧ್ಯಕ್ಷ ಶಿವಕುಮಾರ್ ಹೊಳಲ್ಕೆರೆ ತಾ.ಅಧ್ಯಕ್ಷ ಆಕಾಶ್, ಹೊಸದುರ್ಗ ತಾ.ಆಧ್ಯಕ್ಷ ಕರಿಬಸಪ್ಪ ಚಳ್ಳಕೆರೆ ತಾ.ಅಧ್ಯಕ್ಷ ನರಸಿಂಹಮೂರ್ತಿ ಸೇರಿದಂತೆ ಇತರರು ಭಾಗವಹಿಸಿದ್ದರು.

----------------------

ಸದಾಶಿವ ವರದಿ ಗಂಭೀರವಾಗಿ ಪರಿಗಣಿಸದ ಸರ್ಕಾಗಳುಈ ವರದಿಯ ಸೋರಿಕೆಯಾದ ಅಂಶಗಳ ಪ್ರಕಾರ ಮಾದಿಗ ಮತ್ತು ಮಾದಿಗೆ ಸಂಬಂಧಿತ 49 ಜಾತಿಗಳಿಗೆ ಶೇ. 6% ಹೊಲೆಯ ಮತ್ತು ಹೊಲೆಯ ಸಂಬಂಧಿತ 29 ಜಾತಿಗಳಿಗೆ ಶೇ. 5% ಮತ್ತು ಭೋವಿ, ಬಂಜಾರ, ಕೊರಮ, ಕೊರಚ ಇತ್ಯಾದಿ 13 ಸ್ಪೃಶ್ಯ ಜಾತಿಗಳಿಗೆ 3% ಮತ್ತು 11 ಅಸ್ಪೃಶ್ಯ ಅಲೆಮಾರಿ ಜಾತಿಗಳಿಗೆ ಶೇ. 1% ಮೀಸಲಾತಿಯನ್ನು ಕಲ್ಪಿಸಲಾಗಿತ್ತು. ಆದರೆ ಇದವರೆಗೂ ಸದಾಶಿವ ಆಯೋಗದ ವರದಿಯನ್ನು ಸರ್ಕಾರಗಳು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಜಾತಿವ್ಯವಸ್ಥೆಯಲ್ಲಿ ಅತ್ಯಂತ ತಳಸಮುದಾಯವಾದ ಮಾದಿಗ ಮತ್ತು ಮಾದಿಗ ಸಂಬಂಧಿತ ಜಾತಿಗಳ ಕಣ್ಣೀರು ಒರೆಸಲು ಮೇಲ್ಜಾತಿ ಪಕ್ಷಗಳ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಲೋ, ಅಸಹಾಯಕತೆ ಯಿಂದಲೋ ಅಥವಾ ಅಸಮರ್ಥತೆಯಿಂದಲೋ ಪರಿಹರಿಸಲು ಮುಂದಾಗುತ್ತಿಲ್ಲ. ಈ ಪ್ರಕರಣವನ್ನು ಜೀವಂತವಾಗಿ ಉಳಿಸಿ ಕೊಂಡು ಪರಿಶಿಷ್ಟ ಜಾತಿಗಳ ಮಧ್ಯೆ ವೈರುಧ್ಯವನ್ನು ಮುಂದುವರಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.