ಸಾರಾಂಶ
ವೈದ್ಯರ ಮೇಲಿನ ಹಲ್ಲೆ, ದೌರ್ಜನ್ಯ ತಡೆಗೆ ಎಲ್ಲಾ ಜಿಲ್ಲೆಗಳಲ್ಲೂ ಕಾರ್ಯಪಡೆ ರಚಿಸುವುದು, ವೈದ್ಯರ ರಕ್ಷಣೆಗೆ ತುರ್ತು ಎಚ್ಚರಿಕೆ ಗಂಟೆ ಅಳವಡಿಸುವಂತೆ ವೈದ್ಯರ ರಕ್ಷಣೆಗಾಗಿ ರಚನೆಗೊಂಡಿರುವ ರಾಜ್ಯ ಕಾರ್ಯಪಡೆ ನಿರ್ಣಯ ಕೈಗೊಂಡಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ವೈದ್ಯರ ಮೇಲಿನ ಹಲ್ಲೆ, ದೌರ್ಜನ್ಯ ತಡೆಗೆ ಎಲ್ಲಾ ಜಿಲ್ಲೆಗಳಲ್ಲೂ ಕಾರ್ಯಪಡೆ ರಚಿಸುವುದು, ವೈದ್ಯರ ರಕ್ಷಣೆಗೆ ತುರ್ತು ಎಚ್ಚರಿಕೆ ಗಂಟೆ ಅಳವಡಿಸುವಂತೆ ವೈದ್ಯರ ರಕ್ಷಣೆಗಾಗಿ ರಚನೆಗೊಂಡಿರುವ ರಾಜ್ಯ ಕಾರ್ಯಪಡೆ ನಿರ್ಣಯ ಕೈಗೊಂಡಿದೆ.ಸುಪ್ರೀಂ ಕೋರ್ಟ್ ಆದೇಶದಂತೆ ರಚನೆಯಾದ ರಾಷ್ಟ್ರೀಯ ಕಾರ್ಯಪಡೆ ನೀಡಿರುವ ಮಾರ್ಗಸೂಚಿಯನ್ನು ಜಾರಿಗೆ ತರುವಂತೆ ಸೋಮವಾರ ನಡೆದ ಕಾರ್ಯಪಡೆಯ ಮೊದಲ ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೂಚಿಸಿದರು.
ಆಸ್ಪತ್ರೆ, ವೈದ್ಯಕೀಯ ಸಂಸ್ಥೆಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಿಸಿಕೊಳ್ಳಬೇಕು. ವೈದ್ಯರಿಗೆ ಮತ್ತು ವೈದ್ಯ ಸಿಬ್ಬಂದಿಗೆ ವೃತ್ತಿಪರ ತರಬೇತಿ ನೀಡಿ ರೋಗಿ ಮತ್ತು ರೋಗಿ ಸಂಬಂಧಿಕರಿಗೆ ಸಮಾಲೋಚನೆ ನಡೆಸಲು ಕ್ರಮ ವಹಿಸಬೇಕು. ಲೈಂಗಿಕ ದೌರ್ಜನ್ಯ ತಡೆಗಟ್ಟುವ ಬಗ್ಗೆ ಕ್ರಮಕೈಗೊಳ್ಳುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ.ಎಲ್ಲಾ ಆಸ್ಪತ್ರೆಗಳ ಆವರಣದಲ್ಲಿ ಪೊಲೀಸ್ ಚೌಕಿ ಹಾಗೂ ಪೊಲೀಸ್ ಗಸ್ತು ಕಡ್ಡಾಯಗೊಳಿಸುವ ಸಂಬಂಧ ಬಗ್ಗೆ ಗೃಹ ಇಲಾಖೆ ಜೊತೆ ಸಮಾಲೋಚಿಸಿ ಕ್ರಮ ಕೈಗೊಳ್ಳುವಂತೆ ನಿರ್ಣಯ ಕೈಗೊಳ್ಳಲಾಯಿತು. ಜಿಲ್ಲಾ ಕಾರ್ಯಪಡೆ ರಚಿಸುವ ಕುರಿತೂ ಚರ್ಚಿಸಲಾಯಿತು. ಆಸ್ಪತ್ರೆಗಳಲ್ಲಿ ತುರ್ತು ಎಚ್ಚರಿಕೆ ಗಂಟೆಯನ್ನು ಅಳವಡಿಸುವ ಬಗ್ಗೆ ತಿಳಿಸಬೇಕು ಎಂದು ಸೂಚಿಸಿದರು.
ಅಗತ್ಯ ಇರುವಲ್ಲಿ ಸಿಸಿ ಟಿವಿ ಕಣ್ಗಾವಲು ಹೆಚ್ಚಿಸಬೇಕು. ಕರ್ತವ್ಯದ ಅವಧಿಯ ಸಮಯ ನಿಗದಿಪಡಿಸಬೇಕು. ನಿಗದಿತ ವ್ಯವಸ್ಥಿತ ಕರ್ತವ್ಯದ ಕೊಠಡಿಗಳನ್ನು ನಿಗದಿಸಬೇಕು. ಹಾಗೂ ನಿರ್ಬಂಧಿತ ಪ್ರದೇಶವನ್ನು ರೂಪಿಸಿಕೊಳ್ಳಬೇಕು. ಹಾಗೂ ವೈದ್ಯರ ಮೇಲಿನ ಹಲ್ಲೆ, ದೌರ್ಜನ್ಯಕ್ಕಿರುವ ಶಿಕ್ಷೆ ಬಗ್ಗೆ ಎಲ್ಲ ಆಸ್ಪತ್ರೆಗಳಲ್ಲಿ ಫಲಕ ಅಳವಡಿಸುವಂತೆ ಸಭೆ ನಿರ್ಣಯ ಕೈಗೊಂಡಿದೆ.