ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಅಟಲ್ ಪಿಂಚಣಿ ಯೋಜನೆಯನ್ನು ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಮರ್ಪಕವಾಗಿ ಅನುಷ್ಠಾನಕ್ಕೆ ತಂದಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ ಬ್ಯಾಂಕ್) ಸಾಧನೆಗೆ ಭಾರತ ಸರ್ಕಾರದ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಪ್ರಶಂಸೆ ವ್ಯಕ್ತಪಡಿಸಿದೆ.
ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ 2023-24ನೇ ಸಾಲಿಗೆ ಎಸ್‌ಸಿಡಿಸಿಸಿ ಬ್ಯಾಂಕ್ ಪ್ರತಿ ಶಾಖೆಗೆ 20 ಚಂದಾದಾರರ ದಾಖಲಾತಿಯನ್ನು ನೀಡಿದ್ದು, ಅದರಂತೆ ಬ್ಯಾಂಕ್ ತನ್ನ 111 ಶಾಖೆಗಳಿಗೆ ಒಟ್ಟು 2,220 ಚಂದಾದಾರರನ್ನು ನೊಂದಾಯಿಸುವ ಗುರಿ ನೀಡಿತ್ತು. ಆದರೆ ಈ ಬ್ಯಾಂಕ್ ತನ್ನ ಎಲ್ಲ ಶಾಖೆಗಳ ಮುಖಾಂತರ ಒಟ್ಟು 2,960 ಚಂದಾದಾರರನ್ನು ನೊಂದಾಯಿಸಿ ಗುರಿ ಮೀರಿದ ಸಾಧನೆ ಮಾಡಿದೆ.ಎಸ್‌ಸಿಡಿಸಿಸಿ ಬ್ಯಾಂಕ್ ತನ್ನ ಸಾಮೂಹಿಕ ಪ್ರಯತ್ನ ಮತ್ತು ಅನುಕರಣೀಯ ಕಾರ್ಯನಿರ್ವಹಣೆಯಿಂದಾಗಿ ಅಟಲ್ ಪಿಂಚಣಿ ಯೋಜನೆಯಲ್ಲಿ ನಿಗದಿಪಡಿಸಲಾದ ವಾರ್ಷಿಕ ದಾಖಲಾತಿ ಗುರಿಯನ್ನು ಸಾಧಿಸಿದ್ದಕ್ಕಾಗಿ ಭಾರತ ಸರ್ಕಾರದ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ಅಭಿನಂದಿಸಿದೆ.
ಭಾರತ ಸರ್ಕಾರದ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಬ್ಯಾಂಕಿಗೆ ಪ್ರಶಂಸನಾ ಪತ್ರ ಬಂದಿದ್ದು, ಈ ಪತ್ರದಲ್ಲಿ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರ ನಾಯಕತ್ವ ಮತ್ತು ಕಾರ್ಯತಂತ್ರದ ವಿಧಾನ ಈ ಸಾಧನೆಯ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದೆ ಎಂದು ತಿಳಿಸಿದೆ.ಭಾರತ ಸರ್ಕಾರದ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಕೋರಿಕೆಯಂತೆ ಎಸ್‌ಸಿಡಿಸಿಸಿ ಬ್ಯಾಂಕ್ 2019ರ ಜನವರಿ -11ರಂದು ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ ನೋಂದಾಯಿಸಲ್ಪಟ್ಟಿದ್ದು ಅದರಂತೆ ಬ್ಯಾಂಕಿನ ಪ್ರತಿ ಶಾಖೆಯಲ್ಲೂ ಅಟಲ್ ಪಿಂಚಣಿ ಯೋಜನೆಗೆ ಚಂದಾದಾರರನ್ನು ನೊಂದಾಯಿಸುವ ಗುರಿಯನ್ನು ಪ್ರತಿ ವರ್ಷ ನೀಡಲಾಗಿತ್ತು.
ಗಣನೀಯ ಪ್ರಗತಿ ಸಾಧನೆ2019-20 , 2020-21, 2021-22 ಹಾಗೂ 2022 -23ನೇ ಹಣಕಾಸು ವರ್ಷದಲ್ಲಿ ಅಟಲ್ ಪಿಂಚಣಿ ಯೋಜನೆಗೆ ಚಂದಾದಾರರನ್ನು ನೋಂದಾಯಿಸುವಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ಗಣನೀಯ ಪ್ರಗತಿಯನ್ನು ಸಾಧಿಸಿದೆ. 2023-24ನೇ ಸಾಲಿನಲ್ಲೂ ಚಂದಾದಾರರನ್ನು ನೋಂದಾಯಿಸುವಲ್ಲಿ ಬ್ಯಾಂಕ್ ದಾಖಲೆ ನಿರ್ಮಿಸಿದೆ. ಇದುವರೆಗೆ ಒಟ್ಟು 9,454 ಎಪಿವೈ ಚಂದಾದಾರರ ನೋಂದಣಿಯೊಂದಿಗೆ ಎಸ್‌ಸಿಡಿಸಿಸಿ ಬ್ಯಾಂಕ್ ದಾಖಲೆ ನಿರ್ಮಿಸಿದೆ ಎಂದು ಬ್ಯಾಂಕಿನ ಪ್ರಕಟಣೆ ತಿಳಿಸಿದೆ.