ಶೇಕಡ 30 ಶಿಕ್ಷಣ ಸಂಸ್ಥೆಗಳಲ್ಲಿ ಮಾತ್ರ ಮಕ್ಕಳ ರಕ್ಷಣಾ ನೀತಿ ಜಾರಿ!

| Published : Dec 18 2024, 12:48 AM IST

ಶೇಕಡ 30 ಶಿಕ್ಷಣ ಸಂಸ್ಥೆಗಳಲ್ಲಿ ಮಾತ್ರ ಮಕ್ಕಳ ರಕ್ಷಣಾ ನೀತಿ ಜಾರಿ!
Share this Article
  • FB
  • TW
  • Linkdin
  • Email

ಸಾರಾಂಶ

ಕೇವಲ ಆಧಾರ್ ಕಾರ್ಡ್‌ ವಯಸ್ಸಿನ ಪುರಾವೆಗೆ ಸಾಲದು. ವಯಸ್ಸಿನ ಪರಿಶೀಲನೆಗೆ ಜನ್ಮ ಪ್ರಮಾಣ ಪತ್ರ ಅತ್ಯಗತ್ಯ. ಈ ಬಗ್ಗೆ 2018-19ರಲ್ಲಿ ಮಹಿಳಾ ಮತ್ತು ಮಕ್ಕಳ ಸಮಿತಿ ರಚನೆಗೆ ನಿರ್ದೇಶನ ನೀಡಿದ್ದರೂ ಇದುವರೆಗೂ ಜಾರಿಯಾಗಿಲ್ಲ ಎಂದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ 2016ರಲ್ಲಿ ಅಸ್ತಿತ್ವಕ್ಕೆ ಬಂದರೂ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಕೆಎಸ್‌ಸಿಪಿಸಿಆರ್)ದ ಸದಸ್ಯ ತಿಪ್ಪೇಸ್ವಾಮಿ ಕೆ.ಟಿ. ಹೇಳಿದ್ದಾರೆ.ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಮಕ್ಕಳ ರಕ್ಷಣಾ ನೀತಿ ಅನುಷ್ಠಾನ ಕುರಿತು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶೇ.30ರಷ್ಟು ಮಾತ್ರ ಜಾರಿ!: ಸರ್ಕಾರವು 2016ರ ನೀತಿಯನ್ನು 2023ರಲ್ಲಿ ತಿದ್ದುಪಡಿ ಮಾಡಿತ್ತು. ಆರು ತಿಂಗಳೊಳಗೆ ನೀತಿ ಜಾರಿಗೆ ತರಲು ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ ಎಂದ ತಿಪ್ಪೇಸ್ವಾಮಿ, ಶಿಕ್ಷಣ ಸಂಸ್ಥೆಗಳು ಮಕ್ಕಳ ರಕ್ಷಣಾ ಸಮಿತಿಗಳನ್ನು ಹೊಂದಿರಬೇಕು. ಆದರೆ ಕೇವಲ ಶೇ.30ರಷ್ಟು ಸಂಸ್ಥೆಗಳು ಮಾತ್ರ ಜಾರಿಗೆ ತಂದಿವೆ. ಕೆಲವು ಶಾಲೆಗಳಲ್ಲಿ ಹೆಸರಿಗಷ್ಟೇ ಸಮಿತಿ ರಚಿಸಲಾಗಿದೆ, ಆದರೆ ನೀತಿಯನ್ನು ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಪಂಗೊಂದು ವಿಜಿಲೆನ್ಸ್‌ ಕಮಿಟಿ: ಮಕ್ಕಳ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಪರಿಶೀಲಿಸಲು ಪ್ರತಿ ಗ್ರಾಮ ಪಂಚಾಯಿತಿಗೆ ಮಹಿಳಾ ಮತ್ತು ಮಕ್ಕಳ ಕಾವಲು ಸಮಿತಿ (ವಿಜಿಲೆನ್ಸ್ ಕಮಿಟಿ) ಇರುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಆನಂದ್ ಕೆ. ಅವರಿಗೆ ಹೇಳಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುವ ಮಕ್ಕಳ ಸಂಪೂರ್ಣ ಮಾಹಿತಿ ಹೊಂದಿರುವುದು ಸಮಿತಿಯ ಜವಾಬ್ದಾರಿ. ಜನನ ಪ್ರಮಾಣಪತ್ರ ವಿತರಣೆ, ಲಸಿಕೆ ವಿವರಗಳು, ವಿಶೇಷ ಅಗತ್ಯವುಳ್ಳ ಮಕ್ಕಳು, ಒಂಟಿ ಪೋಷಕರಿರುವ ಮಕ್ಕಳು, ಅನಾಥ ಮಕ್ಕಳು ಹೀಗೆ ವಿವರಗಳನ್ನು ಸಂಗ್ರಹಿಸಲು ಸರ್ಕಾರ ಈಗಾಗಲೇ ಆರು ಪುಟಗಳ ಸ್ವರೂಪವನ್ನು ಸಿದ್ಧಪಡಿಸಿದೆ. ಪೋಕ್ಸೊ ಪ್ರಕರಣ ಅಥವಾ ಹದಿಹರೆಯದ ಗರ್ಭಧಾರಣೆಯ ಪ್ರಕರಣ ವರದಿಯಾದಾಗಲೆಲ್ಲ ಮಗುವಿನ ವಯಸ್ಸನ್ನು ಪತ್ತೆ ಹಚ್ಚಲು ಈ ವಿವರಗಳು ಸಹಾಯ ಮಾಡುತ್ತವೆ. ಆದರೆ ರಾಜ್ಯದ 5,970 ಗ್ರಾಪಂಗಳ ಪೈಕಿ ಒಂದರಲ್ಲೂ ಶೇ. 100ರಷ್ಟು ಜನನ ಪ್ರಮಾಣಪತ್ರ ನೀಡಿದ್ದನ್ನು ಖಾತ್ರಿಪಡಿಸಿಲ್ಲ ಎಂದು ಖೇದ ವ್ಯಕ್ತಪಡಿಸಿದರು.

ಕೇವಲ ಆಧಾರ್ ಕಾರ್ಡ್‌ ವಯಸ್ಸಿನ ಪುರಾವೆಗೆ ಸಾಲದು. ವಯಸ್ಸಿನ ಪರಿಶೀಲನೆಗೆ ಜನ್ಮ ಪ್ರಮಾಣ ಪತ್ರ ಅತ್ಯಗತ್ಯ. ಈ ಬಗ್ಗೆ 2018-19ರಲ್ಲಿ ಮಹಿಳಾ ಮತ್ತು ಮಕ್ಕಳ ಸಮಿತಿ ರಚನೆಗೆ ನಿರ್ದೇಶನ ನೀಡಿದ್ದರೂ ಇದುವರೆಗೂ ಜಾರಿಯಾಗಿಲ್ಲ ಎಂದರು.

ಕಾರ್ಯಪಡೆ ಅನುಷ್ಠಾನ ಶೇ.5: ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಶಿಕ್ಷಣ ಕಾರ್ಯಪಡೆ ಸ್ಥಾಪಿಸಬೇಕು. ಇದು ಶಾಲೆಗಳಲ್ಲಿ ಮಕ್ಕಳ ಶೈಕ್ಷಣಿಕ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೆ ಪದೇ ಪದೆ ಗೈರು ಹಾಜರಾಗಲು ಅಥವಾ ಶಾಲೆ ಬಿಡಲು ಕಾರಣಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಈ ಕಾರ್ಯಪಡೆಯ ಅನುಷ್ಠಾನವು ರಾಜ್ಯಾದ್ಯಂತ ಕೇವಲ ಶೇ.5ರಷ್ಚು ಮಾತ್ರ ಆಗಿರುವುದು ದುರದೃಷ್ಟಕರ ಎಂದು ಅವರು ಹೇಳಿದರು.

ಸಾವಿರಕ್ಕೂ ಹೆಚ್ಚು ಪ್ರಕರಣಗಳು: ಆಯೋಗದ ಮುಂದೆ ಮಕ್ಕಳ ಸಂಬಂಧಿತ 1000ಕ್ಕೂ ಅಧಿಕ ಪ್ರಕರಣಗಳಿವೆ ಎಂದು ತಿಳಿಸಿದ ತಿಪ್ಪೇಸ್ವಾಮಿ, ವಿಜಯಪುರ, ಯಾದಗಿರಿ, ಕೋಲಾರ, ಮಂಡ್ಯ, ಬೆಂಗಳೂರು ಗ್ರಾಮಾಂತರದಲ್ಲಿ ಹೆಚ್ಚುತ್ತಿರುವ ಭ್ರೂಣ ಹತ್ಯೆ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ಆಯೋಗವು ಕೆಲವು ಸ್ಕ್ಯಾನಿಂಗ್ ಕೇಂದ್ರಗಳಿಗೆ ಭೇಟಿ ನೀಡಿದ್ದು, ಉಲ್ಲಂಘನೆಗಳಿಗೆ ಅಗತ್ಯ ಕ್ರಮಕ್ಕೆ ಶಿಫಾರಸು ಮಾಡಿದೆ ಎಂದರು.

ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಆನಂದ ಕೆ., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಉಸ್ಮಾನ್, ಮಕ್ಕಳ ರಕ್ಷಣಾಧಿಕಾರಿ ಕುಮಾರ್ ಇದ್ದರು.