ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಮಾ.28ರಂದು ಚುನಾವಣೆ ಅಧಿಸೂಚನೆಯನ್ನು ಹೊರಡಿಸಲಾಗುವುದು. ನಾಮಪತ್ರ ಸಲ್ಲಿಕೆಗೆ ಏ.4ರಂದು ಕೊನೆಯ ದಿನವಾಗಿದ್ದು, ಏ.5ರಂದು ನಾಮಪತ್ರ ಪರಿಶೀಲನೆ ನಡೆದು, ಏ.8 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ. ಏ.26ರಂದು ಚುನಾವಣೆ ನಡೆಯಲಿದ್ದು, ಜೂ.4ರಂದು ಮತ ಎಣಿಕೆ ನಡೆಯಲಿದೆ. ಜೂ.6ರ ವರೆಗೆ ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಮಾಹಿತಿ ನೀಡಿದರು.ಉಡುಪಿ ಜಿಲ್ಲೆಯ ಕುಂದಾಪುರ, ಉಡುಪಿ, ಕಾಪು ಮತ್ತು ಕಾರ್ಕಳ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಮೂಡಿಗೆರೆ, ತರೀಕೆರೆ ಮತ್ತು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ 15,72,958 ಮಂದಿ ಮತದಾರರಿದ್ದಾರೆ.ಕ್ಷೇತ್ರದಲ್ಲಿ 17,959 ವಿಕಲಚೇತನರು, 21,521 ಹಿರಿಯ ನಾಗರಿಕರು ಮತ್ತು 29,909 ಯುವ ಮತದಾರರಿದ್ದಾರೆ. 100 ವರ್ಷ ಮೇಲ್ಪಟ್ಟ 536 ಮಂದಿ ಇದ್ದು, ಆ ಪೈಕಿ 331 ಮಂದಿ ಮಹಿಳೆಯರು ಮತ್ತು 205 ಪುರುಷರಿದ್ದಾರೆ.
ಕ್ಷೇತ್ರದಲ್ಲಿ ಒಟ್ಟು 1,842 ಮತಗಟ್ಟೆಗಳಿವೆ. ಉಡುಪಿ ಜಿಲ್ಲೆಯ ಕುಂದಾಪುರ 222, ಉಡುಪಿ 226 ಹಾಗೂ ಕಾಪು ಮತ್ತು ಕಾರ್ಕಳ ತಲಾ 209 ಹಾಗೂ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ 256, ಮೂಡಿಗೆರೆ 231, ಚಿಕ್ಕಮಗಳೂರು 261 ಮತ್ತು ತರೀಕೆರೆಗಳಲ್ಲಿ 228 ಮತಗಟ್ಟೆಗಳಿವೆ.ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ತಲಾ 4 ಮಂದಿ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ. 15 ಮಂದಿ ನೋಡೆಲ್ ಅಧಿಕಾರಿಗಳು ಕಾರ್ಯನಿರ್ವಹಿಸುವರು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ಶೇ.40 ಮೇಲ್ಪಟ್ಟ ವಿಕಲಚೇತನರು ಅಪೇಕ್ಷಿಸಿದಲ್ಲಿ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೂ ಮತಗಟ್ಟೆಗೇ ಬಂದು ಮತ ಚಲಾಯಿಸುವಲ್ಲಿ ಒಲವು ತೋರಿಸುವುದು ಪಾರದರ್ಶಕ ಮತದಾನ ಪ್ರಕ್ರಿಯೆಗೆ ಪೂರಕವಾಗುತ್ತದೆ ಎಂದವರು ತಿಳಿಸಿದರು.ಚುನಾವಣೆ ಪ್ರಕ್ರಿಯೆಗಳಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಬಳಸುವಂತಿಲ್ಲ. ಪಾರದರ್ಶಕ ಮತ್ತು ಶಾಂತಿಯುತ ಮತದಾನಕ್ಕಾಗಿ ಚುನಾವಣೆ ಆಯೋಗ ಸಿದ್ಧಪಡಿಸಿರುವ ಆ್ಯಪ್‌ಗಳನ್ನು ಬಳಸುವಂತೆ ಸೂಚಿಸಿದರು.
ಮಾದರಿ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಖಾಸಗಿ ಹಾಗೂ ಸಾರ್ವಜನಿಕ ಮತ್ತು ಧಾರ್ಮಿಕ ಕಾರ್ಯಕ್ರಮ ಆಯೋಜನೆ, ಬ್ಯಾನರ್ ಅಳವಡಿಕೆ ಇತ್ಯಾದಿಗಳಿಗೆ ಸುವಿಧಾ ಆ್ಯಪ್ ಮೂಲಕ ಅನುಮತಿ ಕಡ್ಡಾಯ ಎಂದರು.* 14 ಚೆಕ್ ಪೋಸ್ಟ್ ಸ್ಥಾಪನೆಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಮಾತನಾಡಿ, ಜಿಲ್ಲೆಯ ಗಡಿಭಾಗದಲ್ಲಿ ಒಟ್ಟು 14 ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗುತ್ತದೆ. ಶಿರೂರು, ಕೊಲ್ಲೂರು, ಹೊಸಂಗಡಿ, ಸಾಬ್ರಕಟ್ಟೆ, ಗುಡ್ಡೆಯಂಗಡಿ/ ಮಣಿಪುರ ಕ್ರಾಸ್, ಉದ್ಯಾವರ, ಹೆಜಮಾಡಿ, ಪಲಿಮಾರು, ಮಾಳ, ಮುಂಡ್ಕೂರು (ಸಚ್ಚರಿಪೇಟೆ), ನಾಡ್ಪಾಲು ( ಸೋಮೆಶ್ವರ), ಮುಡಾರು ಬಜಗೋಳಿ, ಸಾಣೂರು, ಹೊಸ್ಮಾರು/ ನಲ್ಲೂರಿನಲ್ಲಿ ಚೆಕ್ ಪೋಸ್ಟ್ ತೆರೆಯಲಾಗುತ್ತದೆ ಎಂದರು.
ಚುನಾವಣೆ ಪ್ರಕ್ರಿಯೆಗಾಗಿ 6 ಡಿವೈಎಸ್ಪಿ, 18 ಪೊಲೀಸ್ ಇನ್‌ಸ್ಪೆಕ್ಟರ್, 51 ಪಿ.ಎಸ್.ಐ., 101 ಎ.ಎಸ್.ಐ, 480 ಹೆಡ್ ಕಾನ್‌ಸ್ಟೆಬಲ್, 622 ಪೊಲೀಸ್ ಕಾನ್‌ಸ್ಟೆಬಲ್, 588 ಹೋಮ್ ಗಾರ್ಡ್‌ಗಳನ್ನು ನಿಯೋಜಿಸಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಮಮತಾದೇವಿ, ಜಿ.ಪಂ ಸಿಇಒ ಪತ್ರೀಕ್ ಬಾಯಲ್ ಉಪಸ್ಥಿತರಿದ್ದರು.