ವಚನ ಸಾಹಿತ್ಯದಿಂದ ಬದುಕು ಸುಂದರ: ಪ್ರೊ. ಕೆ. ಎನ್. ಧನಲಕ್ಷ್ಮಿ

| Published : Mar 17 2024, 02:06 AM IST

ಸಾರಾಂಶ

ವಚನ ಸಾಹಿತ್ಯ ಜೀನವದ ಅವಿಭಾಜ್ಯ ಅಂಗವಾದಲ್ಲಿ ಪ್ರತಿಯೊಬ್ಬರ ಬದುಕು ಸುಂದರವಾಗಿ ರೂಪುಗೊಳ್ಳುತ್ತದೆ ಎಂದು ಪ್ರೊ. ಕೆ. ಎನ್‌. ಧನಲಕ್ಷ್ಮೀ ಹೇಳಿದರು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ವಚನ ಸಾಹಿತ್ಯ ಜೀವನದ ಅವಿಭಾಜ್ಯ ಅಂಗವಾದಲ್ಲಿ ಪ್ರತಿಯೊಬ್ಬರ ಬದುಕು ಸುಂದರವಾಗಿ ರೂಪುಗೊಳ್ಳುತ್ತದೆ ಎಂದು ಇಲ್ಲಿನ ಬಿಟಿಸಿಜಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಎನ್. ಧನಲಕ್ಷ್ಮಿ ಹೇಳಿದರು.ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಶುಕ್ರವಾರ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಯಜಮಾನ್ ಪುಟ್ಟಮಲ್ಲಪ್ಪ ಚೆನ್ನವೀರಮ್ಮ ಸ್ಮರಣಾರ್ಥ ಕಾಫಿ ಬೆಳೆಗಾರ ಸೋಮವಾರಪೇಟೆಯ ಎ.ಪಿ.ಶಂಕರಪ್ಪ ಅವರು ಸ್ಥಾಪಿಸಿರುವ ದತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳು ಪಠ್ಯದ ಜೊತೆಗೆ ವಚನ ಸಾಹಿತ್ಯವನ್ನು ತಪ್ಪದೇ ಅಧ್ಯಯನ ಮಾಡುವ ಮೂಲಕ ಸಮಾಜದಲ್ಲಿ ಸತ್ಪ್ರಜೆಗಳಾಗಬೇಕು ಎಂದು ಕರೆಕೊಟ್ಟರು.

ದತ್ತಿ ಕಾರ್ಯಕ್ರಮ ಉದ್ಘಾಟಿಸಿದ ಸೋಮವಾರಪೇಟೆ ಜಾನಪದ ಪರಿಷತ್‍ನ ಕಾರ್ಯದರ್ಶಿ ವಿಜಯ ಹಾನಗಲ್ ಮಾತನಾಡಿ, ಮನುಷ್ಯನ ಬದುಕಿಗೆ ದಾರಿದೀಪವಾಗಿರುವ ವಚನ ಸಾಹಿತ್ಯವನ್ನು ಇಂದಿನ ಪೀಳಿಗೆಗೆ ಹೆಚ್ಚಾಗಿ ತಿಳಿಸುವ ಕೆಲಸವಾಗಬೇಕಿದೆ. ವೈಜ್ಞಾನಿಕವಾಗಿ ನಾವು ಎಷ್ಟೇ ಮುಂದುವರೆದರೂ ಕೂಡ, ನಿಸರ್ಗ ನಮಗೆ ನೀಡಿರುವ ಅಮೂಲ್ಯ ನೀರು, ಗಾಳಿ, ಮಣ್ಣು ಮೊದಲಾದ ಸಂಪತ್ತನ್ನು ನಾಶ ಮಾಡದ ಹಾಗೆ ಸಂರಕ್ಷಣೆ ಮಾಡಿದಲ್ಲಿ ಮಾತ್ರ ಮನುಷ್ಯ ನೆಮ್ಮದಿಯಿಂದ ಬದುಕಲು ಸಾಧ್ಯ ಎಂದ ಅವರು ವಿದ್ಯಾರ್ಥಿಗಳು ದೇಶ ಭಕ್ತಿಯನ್ನು ಮೈಗೂಡಿಸಿಕೊಂಡು ಉತ್ತಮ ಸಂಸ್ಕಾರಗಳೊಂದಿಗೆ ಬದುಕು ಕಟ್ಟಲು ಕರೆ ಕೊಟ್ಟರು.

‘ಶರಣ ಸಂಸ್ಕೃತಿ ಪ್ರಸಾರ’ ದತ್ತಿ ಉಪನ್ಯಾಸ ನೀಡಿದ ಐಗೂರು ಪಿಯು ಕಾಲೇಜು ಕನ್ನಡ ಉಪನ್ಯಾಸಕ ನಿಶ್ಚಯ್, ಹನ್ನೆರಡನೇ ಶತಮಾನದಲ್ಲಿ ಅಂದಿನ ಜನ ಸಾಮಾನ್ಯರಲ್ಲಿ ಮೇಲ್ವರ್ಗದ ಮಂದಿ ನೀಡುತ್ತಿದ್ದ ಮೇಲು ಕೀಳು, ಭೇದ ಬಾವಗಳನ್ನು ಮೆಟ್ಟಿನಿಲ್ಲುವ ಮೂಲಕ ನೊಂದ ಜನರ ಧ್ವನಿಯಾದ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮ, ಅಂಬಿಗರ ಚೌಡಯ್ಯ ಮೊದಲಾದ ಬಸವಾದಿ ಶರಣರ ಹೋರಾಟ ಹಾಗೂ ಕಾಯಕದ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ಕಾಲೇಜು ಪ್ರಾಂಶುಪಾಲರಾದ ಧನಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು.

ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಜವರ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಕಾಲೇಜಿನ ಪ್ರಾಧ್ಯಾಪಕರಾದ ಡಾ. ಕೆ.ಎನ್.ಕುಸುಮ, ಡಾ. ಗೀತಾ, ಎಂ.ಎಂ.ಸುನೀತಾ, ಎಂ.ಎಸ್.ಶಿವಮೂರ್ತಿ, ಕೋಮಲ, ಗಾಯಿತ್ರಿ ಇದ್ದರು.