ಸಾರಾಂಶ
ಧಾರವಾಡ: ದೇಶದಲ್ಲಿಯೇ ಪ್ರಥಮ ಬಾರಿಗೆ ರಾಜ್ಯ ಸರ್ಕಾರವು ಡಾ. ಪುನೀತ್ ರಾಜಕುಮಾರ ನೆನಪಿಗಾಗಿ ಹೃದಯ ಜ್ಯೋತಿ ಯೋಜನೆ ಅನುಷ್ಠಾನಗೊಳಿಸುತ್ತಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ್ ಹೇಳಿದರು.
ಇಲ್ಲಿಯ ಸತ್ತೂರಿನ ಡಾ. ಡಿ. ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಆರೋಗ್ಯ ಇಲಾಖೆಯು ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಈ ಯೋಜನೆಗೆ ಚಾಲನೆ ನೀಡಿದ ಅವರು, ಅನೇಕ ಸಂದರ್ಭಗಳಲ್ಲಿ ತಾಲೂಕು ಆಸ್ಪತ್ರೆಗಳಲ್ಲಿ ಹೃದಯ ಸಂಬಂಧಿಸಿದ ಕಾಯಿಲೆಗಳಿಗೆ ತುರ್ತಾಗಿ ಸರಿಯಾದ ಚಿಕಿತ್ಸೆ ಲಭಿಸದೆ ಸಾವು ಸಂಭವಿಸುತ್ತವೆ.
ಇದನ್ನು ತಡೆಗಟ್ಟಲು ತಾಲೂಕು ಆಸ್ಪತ್ರೆಗಳಿಗೂ ಹೃದಯ ಸಂಬಂಧಿ ಆರೋಗ್ಯ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ವಿಸ್ತರಿಸಲು ಹೃದಯ ಜ್ಯೋತಿ ಯೋಜನೆ ಜಾರಿಗೊಳಿಸಿದೆ ಎಂದರು.
ಈ ಯೋಜನೆಯನ್ನು ಮೊದಲ ಹಂತದಲ್ಲಿ ರಾಜ್ಯದ 71 ತಾಲೂಕು ಆಸ್ಪತ್ರೆ ಮತ್ತು 15 ಜಿಲ್ಲಾ ಆಸ್ಪತ್ರೆಗಳಲ್ಲಿ ಅನುಷ್ಠಾನಗೊಳಿಸಿದ್ದು, ಬರುವ ವರ್ಷ ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳಿಗೆ ಯೋಜನೆ ವಿಸ್ತರಿಸಲಾಗುತ್ತದೆ.
ವಿವಿಧ ಜಿಲ್ಲಾಸ್ಪತ್ರೆಗಳ 65 ಹೃದಯ ತಜ್ಞ ವೈದ್ಯರು ಈ ಸೇವೆ ಅನುಷ್ಠಾನದಲ್ಲಿ ಆನ್‌ಲೈನ್ ಸಂಪರ್ಕದಲ್ಲಿದ್ದು ರೋಗಿಯ ಆರೋಗ್ಯ ಮತ್ತು ಜೀವ ರಕ್ಷಣೆಗೆ ತಮ್ಮ ಸಲಹೆ, ಮಾರ್ಗದರ್ಶನ ನೀಡಲಿದ್ದಾರೆ.
ಯಾವುದೇ ವ್ಯಕ್ತಿಗೆ ಹೃದಯಾಘಾತ ಸಂಭವಿಸಿದರೆ ತಕ್ಷಣ ₹ 30 ಸಾವಿರ ಮೊತ್ತದ ಇಂಜೆಕ್ಷನ್ ಉಚಿತವಾಗಿ ನೀಡಲಾಗುತ್ತದೆ. ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಅತೀ ಜನನಿಬಿಡ ಪ್ರದೇಶಗಳಲ್ಲಿನ ಜನರಿಗೆ ಹೃದಯ ಸಂಬಂಧಿ ಕಾಯಿಲೆ ಕಂಡುಬಂದಾಗ ತಕ್ಷಣ ಪ್ರಾಥಮಿಕ ಚಿಕಿತ್ಸೆ ನೀಡಲು ಸರ್ಕಾರ ಕ್ರಮವಹಿಸಲಿದೆ ಎಂದು ಹೇಳಿದರು.
ರಾಜ್ಯದ ಎಲ್ಲ ಜನರಿಗೆ ಗುಣಮಟ್ಟದ ಆರೋಗ್ಯ ಆರೈಕೆ ಸಿಗಬೇಕೆಂಬುದು ಸರ್ಕಾರದ ಗುರಿ. ಈ ನಿಟ್ಟಿನಲ್ಲಿ ಆಸ್ಪತ್ರೆಗಳನ್ನು ಮೇಲ್ದೇರ್ಜೆಗೆ ಏರಿಸುವ, ಸುಧಾರಿತ ಆಧುನಿಕ ವೈದ್ಯಕೀಯ ಉಪಕರಣಗಳ ಪೂರೈಕೆ ಮತ್ತು ಅನೇಕ ಸುಧಾರಣಾ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಸಚಿವ ದಿನೇಶ ಗುಂಡೂರಾವ್ ಹೇಳಿದರು.
ಹೃದಯ ಜ್ಯೋತಿ ಯೋಜನೆಯ ತರಬೇತಿ ಪುಸ್ತಕ ಬಿಡುಗಡೆ ಮಾಡಿದ ಕಾರ್ಮಿಕ ಸಚಿವ ಸಂತೋಷ ಲಾಡ್, ಇದೊಂದು ರಾಷ್ಟ್ರ ಮಾದರಿ ಯೋಜನೆ. ಅಸಹಾಯಕರ, ಬಡವರ ಅಭಿವೃದ್ಧಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದರು.ಶಾಸಕ ಎನ್.ಎಚ್. ಕೋನರಡ್ಡಿ, ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್, ಜಿಲ್ಲಾಧಿಕಾರಿ ದಿವ್ಯ ಪ್ರಭು.
ಅಪರ ನಿರ್ದೇಶಕ ಡಾ. ಉಮಾ ಬುಗ್ಗಿ, ಉಪ ನಿರ್ದೇಶಕ ಡಾ. ಶ್ರೀನಿವಾಸ ಜಿ.ಎ., ಜಿಪಂ ಸಿಇಒ ಸ್ವರೂಪ ಟಿ.ಕೆ., ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಸಂಗಪ್ಪ ಗಾಬಿ ಮತ್ತಿತರರು ಇದ್ದರು. ಸುಜಾತಾ ಹಸವಿಮಠ ನಿರೂಪಿಸಿದರು. ಡಾ. ನವೀನ್ ಭಟ್ ವಂದಿಸಿದರು. ಡಾ. ಕೆ.ಎನ್. ತನುಜಾ ಸ್ವಾಗತಿಸಿದರು.