ಸಾರಾಂಶ
ಕುಸುಮ್ ಯೋಜನೆ ಜೊತೆಗೆ ರೈತರ ಪಂಪ್ ಸೆಟ್‌ಗಳಿಗೆ ಸೌರಶಕ್ತಿಯ ವಿದ್ಯುತ್ ಸರಬರಾಜು ಮಾಡುವ ಕುಸುಮ್ ಸಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಮೊದಲ ಅಂತದ ಯೋಜನೆ ಪ್ರಗತಿಯಲ್ಲಿದ್ದು, ಎರಡನೇ ಹಂತದಲ್ಲಿ ಫೀಡರ್ ಮಟ್ಟದ ಸೌರೀಕರಣ ಮೂಲಕ 1200 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಿ ರೈತರಿಗೆ ನೀಡಲು ನಿರ್ಧರಿಸಲಾಗಿದೆ.
ಕನ್ನಡಪ್ರಭ ವಾರ್ತೆ ಮದ್ದೂರು
ರೈತರಿಗೆ ಸೌರ ಪಂಪ್ ಸೆಟ್‌ಗಳನ್ನೂ ಒದಗಿಸುವ ಕುಸುಮ್ ಬಿ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಮಂಗಳವಾರ ಹೇಳಿದರು.ಮಂಡ್ಯದಲ್ಲಿ ಇಂಧನ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಳ್ಳಲು ಹೆಲಿಕಾಪ್ಟರ್ ಮೂಲಕ ತಾಲೂಕಿನ ಗೆಜ್ಜಲಗೆರೆಗೆ ಆಗಮಿಸಿದ್ದ ಸಚಿವರು ಚೆಸ್ಕಾಂ ಅಧ್ಯಕ್ಷ ರಮೇಶ ಬಂಡಿಸಿದ್ದೇಗೌಡ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಹಾಗೂ ಜಿಲ್ಲಾಡಳಿತದಿಂದ ಅಭಿನಂದನೆ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಕುಸುಮ್ ಯೋಜನೆ ಜೊತೆಗೆ ರೈತರ ಪಂಪ್ ಸೆಟ್‌ಗಳಿಗೆ ಸೌರಶಕ್ತಿಯ ವಿದ್ಯುತ್ ಸರಬರಾಜು ಮಾಡುವ ಕುಸುಮ್ ಸಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಮೊದಲ ಅಂತದ ಯೋಜನೆ ಪ್ರಗತಿಯಲ್ಲಿದ್ದು, ಎರಡನೇ ಹಂತದಲ್ಲಿ ಫೀಡರ್ ಮಟ್ಟದ ಸೌರೀಕರಣ ಮೂಲಕ 1200 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಿ ರೈತರಿಗೆ ನೀಡಲು ನಿರ್ಧರಿಸಲಾಗಿದೆ ಎಂದರು.ಈ ಎರಡು ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಿದರೆ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಸಾಕಷ್ಟು ಬಗೆಹರಿಯುತ್ತದೆ. ಯೋಜನೆಯನ್ನು ಅನುಷ್ಠಾನಗೊಳಿಸಲು ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹೆಚ್ಚು ಆದ್ಯತೆ ನೀಡುವಂತೆ ಸೂಚಿಸಲಾಗಿದೆ ಎಂದರು.
ಇಂಧನ ಇಲಾಖೆ ಅಧಿಕಾರಿಗಳು ಮತ್ತು ನೌಕರರ ನ್ಯಾಯ ಬದ್ಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಬದ್ಧವಾಗಿದೆ. ಇಲಾಖೆಯಲ್ಲಿ ಹಿರಿತನದ ಆಧಾರದ ಮೇಲೆ ಕಾಲಕಾಲಕ್ಕೆ ಬಡ್ತಿ, ಖಾಲಿ ಇರುವ ಹುದ್ದೆಗಳ ಭರ್ತಿ ಮತ್ತು ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರುಅವಘಡಗಳಲ್ಲಿ ಗಾಯಗೊಂಡ ಇಲಾಖೆ ಸಿಬ್ಬಂದಿಗೆ 5 ಲಕ್ಷ ರು.ವರೆಗಿನ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯವನ್ನು ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಅನುಷ್ಠಾನಗೊಳಿಸುವಂತೆ ಕೆಪಿಟಿಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಈ ವೇಳೆ ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಕ್ ತನ್ವೀರ್ ಆಸಿಫ್, ಜಿಲ್ಲಾ ಕಾಂಗ್ರೆಸ್ ವಕ್ತಾರ ಸಿ.ಎಂ.ದ್ಯಾವಪ್ಪ, ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೇಶಹಳ್ಳಿ ಮೋಹನ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಅಜ್ಜಹಳ್ಳಿ ರಾಮಕೃಷ್ಣ, ಮುಖಂಡ ಪುಟ್ಟರಾಮು, ಸೇರಿದಂತೆ ಸೆಸ್ಕಾಂ ನ ಅಧಿಕಾರಿಗಳು ಇದ್ದರು.