ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಇಡೀ ರಾಜ್ಯಕ್ಕೇ ಒಂದು ಅಬಕಾರಿ ನೀತಿಯಾದರೆ, ನಮ್ಮ ತಾಲೂಕಿಗೇ ಒಂದು ಅಬಕಾರಿ ನೀತಿ ಜಾರಿಯಾದಂತಿದೆ ಎಂದು ರಾಜ್ಯ ಅಬಕಾರಿ ಅಧಿಕಾರಿಗಳ ವಿರುದ್ಧ ಶಾಸಕ ಎಚ್.ಟಿ.ಮಂಜು ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನ ಅಬಕಾರಿ ನೀತಿ ವಿರೋಧಿಸಿ ಮದ್ಯ ಮಾರಾಟ ಮಾಡುತ್ತಿರುವುದರ ವಿರುದ್ಧ ಹಾಗೂ ಸಮರ್ಪಕ ದಾಖಲೆಗಳಿದ್ದರೂ ಬಾರ್ ಲೈಸನ್ಸ್ ನೀಡಲು ವಿಳಂಬ ಮಾಡುತ್ತಿರುವ ಅಬಕಾರಿ ಉಪನಿರ್ದೆಶಕರು ಹಾಗೂ ಅಧಿಕಾರಿಗಳ ಉದಾಸೀನತೆ ವಿರುದ್ಧ ಕಿಡಿಕಾರಿದರು.
ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಸೋಮನಹಳ್ಳಿ ರೈತರ ಮಗ ಸುಂದರ್ ಮದ್ಯದಂಗಡಿ ಆರಂಭಿಸಲು ಸಾಲ- ಸೋಲ ಮಾಡಿ ಒಂದು ಕೋಟಿ ರು.ಗೂ ಹೆಚ್ಚು ಬೆಲೆಬಾಳುವ ಕಟ್ಟಡವನ್ನು ನಿರ್ಮಿಸಿ, ಅಬಕಾರಿ ಇಲಾಖೆ ನಿಗದಿಪಡಿಸಿದ್ದ ಎಲ್ಲಾ ನಿಯಮಗಳನ್ನು ಪಾಲಿಸಿದ್ದರೂ ಮದ್ಯದಂಗಡಿ ಆರಂಭ ಮಾಡಲು ಅಧಿಕಾರಿಗಳು ಒಂದು ವರ್ಷದಿಂದಲೂ ಸಬೂಬು ಹೇಳಿಕೊಂಡು ಬರುತ್ತಿದ್ದಾರೆ ಎಂದು ದೂರಿದರು.ಲೈಸನ್ಸ್ ನೀಡದ ಹಿಂದೆ ಸ್ಥಳೀಯ ವ್ಯಕ್ತಿ ಕೈವಾಡವಿದೆ. ಅವರ ಮಾತಿನಂತೆ ಅಧಿಕಾರಿಗಳು ಕುಣಿಯುತ್ತಿರುವುದು ಹಾಸ್ಯಾಸ್ಪದ. ಇಡೀ ರಾಜ್ಯಕ್ಕೇ ಒಂದು ನೀತಿಯಾದರೆ ಮುಖ್ಯಮಂತ್ರಿಗಳಿಗೆ, ಅಬಕಾರಿ ಮಂತ್ರಿಗಳಿಗೆ ಅಥವಾ ಅವರ ಸಂಬಂಧಿಕರಿಗೆ ವಿಶೇಷವಾದ ಕಾನೂನುಗಳಿವೆಯೇ ಎಂದು ಪ್ರಶ್ನಿಸಿದರು.
ತಾಲೂಕಿನ ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಬಗ್ಗೆ ಅಬಕಾರಿ ಡೀಸಿ ಮತ್ತು ಆಯುಕ್ತರಿಗೆ ಮನವಿ ನೀಡಲಾಗಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಸೋಮನಹಳ್ಳಿಯಲ್ಲಿರುವ ಸಮೃದ್ಧಿ ವೈನ್ಸ್ ಅಂಗಡಿಯನ್ನು ತೆರವುಗೊಳಿಸಿ ಗ್ರಾಮದ ಹೊರಗಡೆಗೆ ಸ್ಥಳಾಂತರಿಸಬೇಕು ಎಂದು ಗ್ರಾಪಂ ಸದಸ್ಯರು, ಸ್ಥಳೀಯರು ತೀರ್ಮಾನಿದ್ದಾರೆ. ಗ್ರಾಮಸ್ಥರಲ್ಲದೇ ನಿಯಮಬಾಹಿರವಾಗಿ ಮದ್ಯ ಮಾರಾಟ ಮಾಡುವ ವೀಡಿಯೋ ಕೂಡ ಲಭ್ಯವಿದೆ ಎಂದರು.
ಅಲ್ಲದೇ ಪಟ್ಟಣದ ಕೃತಿಕ ವೈನ್ಸ್, ಭೀಮಾವೈನ್ಸ್ ಬಲ್ಲೇನಹಳ್ಳಿ, ಪಟ್ಟಣದ ಸುಜಾತ ಬೋರ್ಡಿಂಗ್ ಆ್ಯಂಡ್ ಲಾಡ್ಜಿಂಗ್, ಆರ್ಯ ರೆಸಿಡೆನ್ಸಿ ಹೊಸಹೊಳಲು, ಸುರವರ್ಧಕ ಬೋರ್ಡಿಂಗ್ ಆ್ಯಂಡ್ ಲಾಡ್ಜಿಂಗ್ ಕೋಡಿಮಾರನಹಳ್ಳಿ, ಲೀಲಾ ರೆಸಿಡೆನ್ಸಿ ಬೀರವಳ್ಳಿ ಸೇರಿದಂತೆ ಅನೇಕ ಮದ್ಯದಂಗಡಿಗಳಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಮದ್ಯ ಮಾರಾಟ ಮಾಡುತ್ತಿರುವುದನ್ನು ದಾಖಲೆ ಸಮೇತ ಮೇಲಿನ ಹಂತದ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದರು.ಅಬಕಾರಿ ನಿಯಮಗಳನ್ನು ಗಾಳಿಗೆ ತೂರಿ ಯಾರೇ ನಡೆದುಕೊಂಡರೂ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾದುದು ಅವರ ಕರ್ತವ್ಯ. ಆದರೆ, ಸರ್ಕಾರದ ಮುಖ್ಯಸ್ಥರು ಮತ್ತು ಅಧಿಕಾರಿಗಳು ಇದಾವುದಕ್ಕೂ ಕ್ಯಾರೆ ಎನ್ನುತ್ತಿಲ್ಲ. ಕೂಡಲೇ ಅಬಕಾರಿ ಅಧಿಕಾರಿಗಳು ತಮ್ಮ ಕಾರ್ಯಶೈಲಿಯನ್ನು ಬದಲಿಸಿಕೊಂಡು ಕಾನೂನು ವ್ಯಾಪ್ತಿಯಲ್ಲಿ ಏನಿದೆಯೋ ಅದನ್ನು ಅನುಷ್ಠಾನ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾ ಉಪನಿರ್ದೇಶಕರ ಕಚೇರಿಯ ಎದುರು ಧರಣಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಉಪಾದ್ಯಕ್ಷ ಎಚ್.ಕೆ.ಅಶೋಕ್, ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕಿ ರಾಮು ಸೇರಿದಂತೆ ಹಲವರಿದ್ದರು.