ಆಸ್ತಿ ದಾಖಲೆಗಳ ನಕ್ಷಾ ಯೋಜನೆಗೆ ಚಾಲನೆ

| Published : Feb 19 2025, 12:48 AM IST

ಸಾರಾಂಶ

ನಕ್ಷಾ ಯೋಜನೆ ಕೇಂದ್ರ ಸರ್ಕಾರದ ಬಹುಪಯೋಗಿ ಕಾರ್ಯಕ್ರಮವಾಗಿದೆ, ಈ ಯೋಜನೆಯಲ್ಲಿ ನಾಗರೀಕರು ಹೊಂದಿರುವ ಆಸ್ತಿಯ ದಾಖಲೆಗಳನ್ನು ಡಿಜಿಟಲೀಕರಣ ಮಾಡಿ ಮಾಲೀಕತ್ವದ ಸ್ಮಾರ್ಟ್ ಕಾರ್ಡ್ ವಿತರಿಸಲಾಗುತ್ತದೆ. ಇದರಿಂದ ಆಸ್ತಿಗಳ ದಾಖಲೆಗಳು ತಿರುಚಲು ಸಾಧ್ಯವಿಲ್ಲ. ಯಾರು ಸಹ ಈ ಯೋಜನೆಯಿಂದ ದೂರ ಉಳಿಯುವಂತಾಗಬಾರದು.

ಕನ್ನಡಪ್ರಭ ವಾರ್ತೆ ಕೋಲಾರನಗರ ಪ್ರದೇಶದಲ್ಲಿ ಆಸ್ತಿ ಹೊಂದಿರುವ ನಾಗರಿಕರಿಗೆ ಆಸ್ತಿಯ ಮಾಲೀಕತ್ವ ಪ್ರಮಾಣ ಪತ್ರವನ್ನು ಸರ್ಕಾರದಿಂದ ನೀಡಲಾಗುತ್ತಿದೆ, ಇದರಿಂದ ಪ್ರತಿ ಆಸ್ತಿಯ ಪಾರದರ್ಶಕ ಮತ್ತು ಸ್ಪಷ್ಟವಾದ ಮಾಲೀಕತ್ವ ಪ್ರಮಾಣ ಪತ್ರವಾಗಲಿದೆ ಎಂದು ಸಂಸದ ಎಂ.ಮಲ್ಲೇಶ್ ಬಾಬು ಹೇಳಿದರು. ಇಲ್ಲಿನ ನಗರಸಭೆ ಕಛೇರಿಯಲ್ಲಿ ಕೇಂದ್ರ ಸರ್ಕಾರದಿಂದ ಕೋಲಾರ ನಗರದ ಆಸ್ತಿಗಳನ್ನು ಡಿಜಿಟಲೀಕರಣ ಮಾಡುವ ನಕ್ಷಾ ಯೋಜನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ದಾಖಲೆಗಳ ಸ್ಮಾರ್ಟ್ ಕಾರ್ಡ್

ನಕ್ಷಾ ಯೋಜನೆ ಕೇಂದ್ರ ಸರ್ಕಾರದ ಬಹುಪಯೋಗಿ ಕಾರ್ಯಕ್ರಮವಾಗಿದೆ, ಈ ಯೋಜನೆಯಲ್ಲಿ ನಾಗರೀಕರು ಹೊಂದಿರುವ ಆಸ್ತಿಯ ದಾಖಲೆಗಳನ್ನು ಡಿಜಿಟಲೀಕರಣ ಮಾಡಿ ಮಾಲೀಕತ್ವದ ಸ್ಮಾರ್ಟ್ ಕಾರ್ಡ್ ವಿತರಿಸಲಾಗುತ್ತದೆ. ಇದರಿಂದ ಆಸ್ತಿಗಳ ದಾಖಲೆಗಳು ತಿರುಚಲು ಸಾಧ್ಯವಿಲ್ಲ. ಸರ್ವೇ ಇಲಾಖೆ ಅಧಿಕಾರಿಗಳು ಹಾಗೂ ನಗರಸಭೆ ಅಧಿಕಾರಿಗಳು ಒಟ್ಟಿಗೆ ಸೇರಿ ನಕ್ಷಾ ಯೋಜನೆಯನ್ನು ಕೋಲಾರದಲ್ಲಿ ಜಾರಿಗೆ ತರಬೇಕು. ಯಾರು ಸಹ ಈ ಯೋಜನೆಯಿಂದ ದೂರ ಉಳಿಯುವಂತಾಗಬಾರದು ಎಂದರು.

ನಕ್ಷಾ ಯೋಜನೆ ಮೂಲಕ ಕೋಲಾರ ನಗರವನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದು ಒಳ್ಳೆಯ ರೂಪವನ್ನು ನೀಡಬಹುದಾಗಿದೆ. ಅದಕ್ಕೆ ಅದಕ್ಕೆ ಅಧಿಕಾರಿಗಳು ಹಾಗೂ ಸ್ಥಳಿಯ ಜನಪ್ರತಿನಿಧಿಗಳ ಸಹಕಾರ ಅಗತ್ಯ. ನಕ್ಷಾ ಯೋಜನೆಯನ್ನು ಕೇಂಧ್ರ ಸರ್ಕಾರದ ಭೂ ಸಂಪನ್ಮೂಲ ಇಲಾಖೆಯು ಆರಂಭಿಸಿದ್ದು ಕೇಂದ್ರ ಬಜೆಟ್ ನಲ್ಲಿ ನಗರ ಪ್ರದೇಶಗಳಲ್ಲಿ ಭೂ ಸಂಬಂಧಿತ ಸುಧಾರಣೆಗಳು ಮತ್ತು ಕ್ರಮಗಳನ್ನು ಹಣಕಾಸಿನ ಬೆಂಬಲದ ಮೂಲಕ ಮುಂದಿನ ಮೂರು ವರ್ಷಗಳಲ್ಲಿ ಪೂರ್ಣಗೊಳಿಸಲು ತಿಳಿಸಲಾಗಿದೆ. ಪ್ರಾಯೋಗಿಕವಾಗಿ ದೇಶದ ೧೫೨ ನಗರ ಪಟ್ಟಣಗಳಲ್ಲಿ ಈ ನಕ್ಷಾ ಯೋಜನೆಯನ್ನು ಜಾರಿಗೆ ತರಲಾಗಿದ್ದು ಕೋಲಾರ ನಗರವು ಒಂದಾಗಿದೆ ಎಂದರು.

ಅಧಿಕಾರಿಗಳ ಪಾತ್ರ ಮುಖ್ಯ

ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ರಮೇಶ್ ಮಾತನಾಡಿ, ಕೇಂದ್ರ ಸರ್ಕಾರದಿಂದ ನಕ್ಷಾ ಯೋಜನೆಯಲ್ಲಿ ಕೋಲಾರ ನಗರವನ್ನು ಆಯ್ಕೆ ಮಾಡಿಕೊಂಡಿರುವುದು ಕೋಲಾರ ಜನತೆಗೆ ಸಿಕ್ಕ ಕೊಡುಗೆ ಇದನ್ನು ಅಧಿಕಾರಿಗಳು ಉತ್ತಮ ರೀತಿಯಲ್ಲಿ ಜಾರಿಗೊಳಿಸಬೇಕು. ನಕ್ಷಾ ಯೋಜನೆಯಿಂದ ಸರ್ಕಾರಿ ಜಾಗ ಭೂಗಳ್ಳರ ಪಾಲಾಗುವುದಿಲ್ಲ ಅಧಿಕಾರಿಗಳು ಕೇಳುವ ದಾಖಲೆಗಳನ್ನು ನೀಡಿ ಸಾರ್ವಜನಿಕರು ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಸಂಗೀತ ಜಗದೀಶ್, ಭೂ ದಾಖಲೆಗಳ ಸಹಾಯಕ ನಿರ್ದೇಶಕ ಹನುಮಂತರಾಯಪ್ಪ, ನಗರಸಭೆ ಸದಸ್ಯ ರಾಕೇಶ್ ಇದ್ದರು.