ಕಾಮಗಾರಿ ಅನುಷ್ಠಾನ ಅಭಿವೃದ್ಧಿ ಎನಿಸಿಕೊಳ್ಳುವುದಿಲ್ಲ

| Published : Jan 15 2024, 01:45 AM IST

ಕಾಮಗಾರಿ ಅನುಷ್ಠಾನ ಅಭಿವೃದ್ಧಿ ಎನಿಸಿಕೊಳ್ಳುವುದಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ನಾನೇನು ಕೊಡಬಹುದು ಎಂಬುದು ವಿಷಯ. ಆದರೆ, ಎಲ್ಲರನ್ನೂ ಸಹ ಒಂದೇ ತಕ್ಕಡಿಯಲ್ಲಿಟ್ಟು ತೂಗುವ ಮಾನಸಿಕತೆ ಇತ್ತೀಚಿನ ಸಮಾಜದಲ್ಲಿ ಬೆಳೆದುಬಂದಿದೆ. ಜಿಲ್ಲೆಗೆ ನೀವೇನು ಮಾಡಿದ್ದೀರಿ ಎಂಬುದು ಸಾಮಾನ್ಯವಾಗಿ ಕೇಳಿ ಬರುವ ಪ್ರಶ್ನೆ. ಗ್ರಾಪಂಯಿಂದ ಕೇಂದ್ರ ಸರ್ಕಾರದವರೆಗಿನ ಐದು ಸ್ಥರಗಳಲ್ಲಿ ಯಾರ್ಯಾರು ಏನೇನು ಮಾಡಬೇಕು ಎಂಬುದು ಸ್ಪಷ್ಟವಿದೆ.

ಶಿರಸಿ: ಸರ್ಕಾರ ಕೊಟ್ಟ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವುದೊಂದೆ ಅಭಿವೃದ್ಧಿ ಎನಿಸಿಕೊಳ್ಳುವುದಿಲ್ಲ. ಸಾಂಸ್ಕೃತಿಕ, ಸಾಮಾಜಿಕ ಅಭಿವೃದ್ಧಿ ಒಳಗೊಂಡ ಸಮಗ್ರ ಅಭಿವೃದ್ಧಿ ನಮ್ಮದಾಗಬೇಕು ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಮಾಧ್ಯಮದೊಂದಿಗೆ ಅನೌಪಚಾರಿಕವಾಗಿ ಮಾತನಾಡಿದರು.ತಂದಿರುವ ಹಣ, ಖರ್ಚು ಮಾಡುವಿಕೆ ಅಥವಾ ಉದ್ಘಾಟನೆಗೆ ಮಾತ್ರ ನಮ್ಮ ಅಭಿವೃದ್ಧಿ ವ್ಯಾಖ್ಯಾನ ಸೀಮಿತಗೊಳ್ಳುತ್ತಿದೆ. ಅಭಿವೃದ್ಧಿಯ ವ್ಯಾಖ್ಯಾನ ಊರಿಂದ ಊರಿಗೆ ಬದಲಾಗುತ್ತದೆ.ಕೇವಲ ಹಣ ವ್ಯಕ್ತಿಯ ವ್ಯಕ್ತಿತ್ವ ರೂಪಿಸುವುದಿಲ್ಲ.ಅಭಿವೃದ್ಧಿಯ ವ್ಯಾಖ್ಯಾನ ದೊಡ್ಡದಾಗಿದ್ದು, ಅದನ್ನು ಮೂರ್ತ ರೂಪದಲ್ಲಿ ಹಿಡಿದಿಡಲು ಸಾಧ್ಯವಿಲ್ಲ ಎಂದರು.

ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ನಾನೇನು ಕೊಡಬಹುದು ಎಂಬುದು ವಿಷಯ. ಆದರೆ, ಎಲ್ಲರನ್ನೂ ಸಹ ಒಂದೇ ತಕ್ಕಡಿಯಲ್ಲಿಟ್ಟು ತೂಗುವ ಮಾನಸಿಕತೆ ಇತ್ತೀಚಿನ ಸಮಾಜದಲ್ಲಿ ಬೆಳೆದುಬಂದಿದೆ. ಜಿಲ್ಲೆಗೆ ನೀವೇನು ಮಾಡಿದ್ದೀರಿ ಎಂಬುದು ಸಾಮಾನ್ಯವಾಗಿ ಕೇಳಿ ಬರುವ ಪ್ರಶ್ನೆ. ಗ್ರಾಪಂಯಿಂದ ಕೇಂದ್ರ ಸರ್ಕಾರದವರೆಗಿನ ಐದು ಸ್ಥರಗಳಲ್ಲಿ ಯಾರ್ಯಾರು ಏನೇನು ಮಾಡಬೇಕು ಎಂಬುದು ಸ್ಪಷ್ಟವಿದೆ. ಕೇಳುಗರಿಗೆ ಈ ವ್ಯಾಪ್ತಿ ಅರ್ಥ ಆಗದೇ ಇರಬಹುದು, ಆದರೆ ವ್ಯವಸ್ಥೆಯಲ್ಲಿ ಎಲ್ಲರೂ ಇದರ ಅಡಿಯಲ್ಲಿಯೇ ಕೆಲಸ ಮಾಡಬೇಕಾಗುತ್ತದೆ. ದೇಶದ ಆರ್ಥಿಕ, ಸಾಂಸ್ಕೃತಿಕ ಅಭಿವೃದ್ಧಿ ಮತ್ತು ನೀತಿ ನಿಯಮ ರೂಪಿಸಲು ಕೇಂದ್ರ ಸರ್ಕಾರ ಯಾವತ್ತೂ ಕೆಲಸ ಮಾಡುತ್ತದೆ ಎಂದರು.

ಔಷಧಿಯ ವಿಭಾಗದಲ್ಲಿ ನ್ಯಾನೋ ತಂತ್ರಜ್ಞಾನ ಪ್ರಮುಖವಾಗಿದೆ. ಜಗತ್ತಿನ ಉಳಿದೆಲ್ಲ ಔಷಧ ಪದ್ಧತಿಗಳು ತಕ್ಷಣ ಪರಿಹಾರ ನೀಡಿದರೂ ರೋಗ ಹೋಗಲಾಡಿಸುವಿಕೆಗಿಂತ ಸೈಡ್ ಇಫೆಕ್ಟ್ ಗಳೇ ಜಾಸ್ತಿ. ಹೀಗಾಗಿ ಔಷಧದಲ್ಲಿ ನ್ಯಾನೋ ತಂತ್ರಜ್ಞಾನ ಅಭಿವೃದ್ಧಿಗಾಗಿ ನಾನು ಶ್ರಮಿಸಿದ್ದೇನೆ ಎಂದ ಅನಂತಕುಮಾರ ಹೆಗಡೆ, ಇಡಿ ಸಮಗ್ರ ಜಿಲ್ಲೆಯನ್ನು ಕಲ್ಪನೆಯಲ್ಲಿಟ್ಟುಕೊಂಡು ಆರ್ಥಿಕ ಪ್ರಗತಿ ಹೇಗೆ ಆಗಬೇಕು ಎಂದು ಚರ್ಚೆ ಮಾಡುವುದಿಲ್ಲ. ಸಣ್ಣ ಕಲ್ಪನೆಯಿಟ್ಟು ಚರ್ಚಿಸುವವರೇ ಜಾಸ್ತಿ. ಕಾರವಾರ, ಭಟ್ಕಳ ಶಿರಸಿ, ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿಯ ಹಂದರದಲ್ಲಿ ಬೆಸೆಯಲ್ಪಟ್ಟಿದೆ. ಜಿಲ್ಲೆಯ ಪ್ರಮುಖ ನಗರಗಳು ಈಗ ಹೆದ್ದಾರಿ ವ್ಯಾಪ್ತಿಯಲ್ಲಿದೆ. ಹೆದ್ದಾರಿ ಜಾಲ ಉತ್ತರ ಕನ್ನಡ ವ್ಯಾಪಿಸಿದೆ. ಜಿಲ್ಲೆಯ ಮುಖ್ಯ ರಸ್ತೆಗಳು ಪಿಎಂಜಿಎಸ್ ವೈ ಯೋಜನೆಯಲ್ಲಿ ಜೋಡಿಸಲ್ಪಟ್ಟಿವೆ. ಗ್ರಾಮೀಣ ಭಾಗದ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ನಿಬಂಧನೆಯ ಚೌಕಟ್ಟಿನಲ್ಲಿ ಇದೆ. ಉಳಿದ ಜಿಲ್ಲೆಗಳಿಗೆ ಹೋಲಿಸಿ ಇಂಡಸ್ಟ್ರಿ ಬರಬೇಕು ಎಂಬುದು ಎಲ್ಲರ ಆಗ್ರಹ. ಉದ್ದಿಮೆಗಳು ಬರಬೇಕೆಂದರೆ ಖಾಸಗಿಯವರು ಭಾಗಿಯಾಗಬೇಕು. ಉತ್ಪಾದನೆಯಾದ ವಸ್ತುಗಳ ಸಾಗಾಟ, ಕಚ್ಚಾವಸ್ತು ಸಾಗಾಟಕ್ಕೆ ರೈಲ್ವೆ, ಪೋರ್ಟ್ ಮಂಜೂರಿಗೆ ಎಷ್ಟೊಂದು ವಿರೋಧ ವ್ಯಕ್ತವಾದವು. ರಾಷ್ಟ್ರೀಯ ಹೆದ್ದಾರಿಗೆ ಹಿಂಬಾಗಿಲಿನಿಂದ ಸ್ಟೇ ತಂದು ಅಭಿವೃದ್ಧಿ ಆಗಿಲ್ಲ ಎಂದು ಅವರೇ ಹೇಳ್ತಿದಾರೆ. ಶಿರಸಿ ಹಾವೇರಿ, ಕಾರವಾರ ಅಂಕೋಲಾ ನಡುವೆ ರೈಲ್ವೆಮಾರ್ಗಕ್ಕೆ ಸರ್ವೆ ನಡೆದಿದೆ. ನಾನು ಮೊದಲ ಬಾರಿ ಎಂಪಿ ಆದಾಗಲೇ ಹಾಕಿಕೊಂಡ ಯೋಜನೆಗಳಿವು. ಹೊನ್ನಾವರ ಬಂದರು ಸರಿಯಾಗಿ ಆರಂಭ ಆದರೆ, ಈಗಿರುವ ರಸ್ತೆ ಮಾರ್ಗ ಸಾಕಾಗುವುದಿಲ್ಲ. ರೈಲ್ವೆ ಸಂಪರ್ಕ ಅತ್ಯಗತ್ಯವಾಗುತ್ತದೆ ಎಂದರು.

ಪರಿಸರ ವ್ಯವಸ್ಥೆಯನ್ನೂ ನಾವು ಕಾಯ್ದುಕೊಳ್ಳಬೇಕಿದೆ.ಇತ್ತೀಚಿನ ವರ್ಷಗಳಲ್ಲಿ ಸೃಷ್ಠಿ ಚಕ್ರ ಎಲ್ಲೋ ಒಂದು ಕಡೆ ದಾರಿ ತಪ್ಪುತ್ತಿದೆ. ನೆಲ್ಲಿ ಕಾಯಿಗಳು ಬಿಡುತ್ತಿಲ್ಲ, ಕೆಲ ವಿಧದ ಇರುವೆಗಳು ಕಾಣಿಸುತ್ತಿಲ್ಲ. ಕೆಲ ವಿಧದ ಗಿಡಗಳು ಬೀಜ ಬಿಡುತ್ತಿಲ್ಲ. ಗ್ಲೊಬಲ್ ವಾರ್ಮಿಂಗ್ ಪರಿಣಾಮವನ್ನು ಸಮರ್ಥವಾಗಿ ಎದುರಿಸದಿದ್ದರೆ ಮುಂದೆ ಕಷ್ಟವಾಗಲಿದೆ ಎಂದರು.

ಇದೇ ವೇಳೆ ಜಿಲ್ಲಾ ಪತ್ರಿಕಾ ಸಂಘದ ಅಧ್ಯಕ್ಷ ಜಿ ಸು ಭಟ್ ಪತ್ರಿಕಾ ಸಂಘದ ಸುವರ್ಣ ಮಹೋತ್ಸವ ಆಮಂತ್ರಣ ಪತ್ರಿಕೆಯನ್ನು ಅನಂತಕುಮಾರ ಹೆಗಡೆ ಅವರಿಗೆ ನೀಡಿದರು. ಪತ್ರಕರ್ತರಾದ ಬಸವರಾಜ ಪಾಟೀಲ, ಸಂದೇಶ ಭಟ್ ಬೆಳಖಂಡ, ಸುಮಂಗಲಾ ಅಂಗಡಿ, ಅನಂತ ದೇಸಾಯಿ ಇತರರಿದ್ದರು.

ರಾಜಕಾರಣವನ್ನು ದಂಧೆಯಾಗಿಸಿಕೊಂಡು, ಪ್ರತಿಷ್ಠೆಗಾಗಿ ಇಲ್ಲಿ ಬರುವವರು ಜಾಸ್ತಿ. ಜನಪ್ರತಿನಿಧಿಯಾಗುವುದು ಏನೋ ಒಂದು ಥರಾ ಥ್ರಿಲ್ ಎಂದೇ ಅನೇಕರು ಭಾವಿಸಿದ್ದಾರೆ. ನಮ್ಮಿಂದ ಲಾಭ ತೆಗೊಂಡವರೇ ಮುಂದೆ ನಮ್ಮ ವಿರುದ್ಧ ಮಾತಾಡ್ತಾರೆ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.