ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಗಾಂಧೀಜಿ ಅವರ ತತ್ವ, ಸಿದ್ಧಾಂತಗಳನ್ನು ರಾಜ್ಯಾದ್ಯಂತ ವಿಸ್ತರಿಸಲಾಗಿದೆ. ಸ್ವ-ಸಹಾಯ ಸಂಘಗಳ ಮೂಲಕ ಮಹಿಳೆಯರಿಗೆ ಆರ್ಥಿಕ ಸಬಲೀಕರಣ, ಸುಜ್ಞಾನನಿಧಿ ವಿದ್ಯಾರ್ಥಿ ವೇತನದ ಮೂಲಕ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡಲಾಗುತ್ತಿದೆ.
ಹುಬ್ಬಳ್ಳಿ:
ಮಹಾತ್ಮ ಗಾಂಧೀಜಿ ತತ್ವಗಳನ್ನು ಸಮಾಜದಲ್ಲಿ ಅನುಷ್ಠಾನಗೊಳಿಸುವ ಜತೆಗೆ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತೆ ಎಂದು ಜನಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ರಾಜಣ್ಣ ಕೊರವಿ ಹೇಳಿದರು.ಮಹಾತ್ಮ ಗಾಂಧೀಜಿ ಜಯಂತಿ ಅಂಗವಾಗಿ ಮಂಗಳವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಹಾಗೂ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಆಶ್ರಯದಲ್ಲಿ ನಗರದ ವಿದ್ಯಾನಗರದ ಮರಾಠಾ ಭವನದಲ್ಲಿ ಗಾಂಧಿಸ್ಮೃತಿ, ಜನಜಾಗೃತಿ ಸಮಾವೇಶ ಹಾಗೂ ಪಾನಮುಕ್ತ ಸದಸ್ಯರ ಅಭಿನಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಗಾಂಧೀಜಿ ಅವರ ತತ್ವ, ಸಿದ್ಧಾಂತಗಳನ್ನು ರಾಜ್ಯಾದ್ಯಂತ ವಿಸ್ತರಿಸಲಾಗಿದೆ. ಸ್ವ-ಸಹಾಯ ಸಂಘಗಳ ಮೂಲಕ ಮಹಿಳೆಯರಿಗೆ ಆರ್ಥಿಕ ಸಬಲೀಕರಣ, ಸುಜ್ಞಾನನಿಧಿ ವಿದ್ಯಾರ್ಥಿ ವೇತನದ ಮೂಲಕ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡಲಾಗುತ್ತಿದೆ. ಜ್ಞಾನ ದೀಪ ಕಾರ್ಯಕ್ರಮದಡಿ ಸರ್ಕಾರಿ ಶಾಲೆಗಳಿಗೆ ಅಗತ್ಯ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಮಣಕವಾಡದ ಅನ್ನದಾನೇಶ್ವರ ಸಂಸ್ಥಾನ ಮಠದ ಅಭಿನವ ಮೃತ್ಯುಂಜಯ ಶ್ರೀ ಮಾತನಾಡಿ, ಗಾಂಧೀಜಿ ಕಂಡ ರಾಮರಾಜ್ಯದ ಕನಸನ್ನು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಸಾಕಾರಗೊಳಿಸುತ್ತಿದ್ದಾರೆ. ಮದ್ಯವರ್ಜನ ಶಿಬಿರಗಳ ಮೂಲಕ ಪಾನಮುಕ್ತರಾಗಿ ನವಜೀವನ ನಡೆಸಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.
ಪ್ರೊ. ಕೆ.ಎಸ್. ಕೌಜಲಗಿ ದಿಕ್ಸೂಚಿ ಭಾಷಣ ಮಾಡಿದರು. ಇದೇ ವೇಳೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಜಿ.ಎಂ. ಚಿಕ್ಕಮಠ ಅವರನ್ನು ಗೌರವಿಸಲಾಯಿತು. ಪಾನಮುಕ್ತ ಸದಸ್ಯರಿಗೆ ಅಭಿನಂದನೆ ಸಲ್ಲಿಸಿ, ಆಯ್ದ ವಿದ್ಯಾರ್ಥಿಗಳಿಗೆ ಸುಜ್ಞಾನನಿಧಿ ವಿದ್ಯಾರ್ಥಿವೇತನ ಮಂಜೂರಾತಿ ಪತ್ರ ವಿತರಿಸಲಾಯಿತು.ಜಗಜಾಗೃತಿ ಜಾಥಾ:
ಕಾರ್ಯಕ್ರಮಕ್ಕೂ ಮುನ್ನ ಕೆಎಂಸಿಆರ್‌ಐನ ಮುಖ್ಯದ್ವಾರದ ಮುಂಭಾಗದಲ್ಲಿರುವ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಬಳಿಕ ಅಲ್ಲಿಂದ ಭಾರತಿ ಕಲ್ಯಾಣ ಮಂಟಪದ ವರೆಗೆ ಜನಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿತು.ಧಾರವಾಡ ಜಿಲ್ಲಾ ನಿರ್ದೇಶಕ ಹನುಮಂತ ನಾಯ್ಕ, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ವಸಂತ ಅರ್ಕಾಚಾರ, ಯೋಜನಾಧಿಕಾರಿ ಭಾಸ್ಕರ್ ಎನ್. ಮತ್ತಿತರರು ಇದ್ದರು.