ಯಾರಿಗೂ ಅನ್ಯಾಯ ಆಗದಂತೆ ಜಾತಿಗಣತಿ ಜಾರಿ

| Published : Dec 18 2023, 02:00 AM IST

ಯಾರಿಗೂ ಅನ್ಯಾಯ ಆಗದಂತೆ ಜಾತಿಗಣತಿ ಜಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಯಾವ ಸಮುದಾಯಕ್ಕೂ ಅನ್ಯಾಯ ಆಗದಂತೆ ಜಾತಿ ಗಣತಿಯನ್ನು ಜಾರಿಗೆ ತರಲಾಗುವುದು.

ರಾಯಚೂರು: ಯಾವ ಸಮುದಾಯಕ್ಕೂ ಅನ್ಯಾಯ ಆಗದಂತೆ ಜಾತಿ ಗಣತಿಯನ್ನು ಜಾರಿಗೆ ತರಲಾಗುವುದು ಎಂದು ಆಹಾರ ಮತ್ತು ನಾಗರೀಕ ಸರಬರಾಜು ಖಾತೆ ಸಚಿವ ಕೆ.ಎಚ್‌. ಮುನಿಯಪ್ಪ ತಿಳಿಸಿದರು.

ಸಮೀಪದ ಯರಮರಸ್‌ನ ಸರ್ಕ್ಯೂಟ್‌ ಹೌಸ್‌ನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಗಣತಿ ಅವಶ್ಯಕತೆ ಬಗ್ಗೆ ಎಐಸಿಸಿಗೆ ಮನವರಿಕೆಯಾಗಿದೆ, ಎಲ್ಲ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಿಕೊಡಬೇಕಾಗಿದೆ. ಯಾವ ಜಾತಿಗೂ ಅನ್ಯಾಯ ಆಗಬಾರದು, ಎಲ್ಲರಿಗೂ ಸಮಾನವಾಗಿ ಸಾಮಾಜಿಕ ನ್ಯಾಯ ಸಿಗುವ ನಿಟ್ಟಿನಲ್ಲಿ ಕಾನೂನಿನ ಇತಿಮಿತಿಯೊಳಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

20 ಸೀಟ್‌ ಗೆಲ್ಲುವ ಆಶಯ:

ರಾಜ್ಯದಲ್ಲಿ ಲೋಕಸಭೆಯ 28 ಕ್ಷೇತ್ರಗಳಲ್ಲಿ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ಆಶಾಭಾವನೆಯನ್ನು ಹೊಂದಲಾಗಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಅನುಕೂಲವಾಗಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವೂ ದಾಖಲೆ ಸೃಷ್ಟಿಸಿದೆ, ಅಧಿಕಾರಕ್ಕೆ ಬಂದ ಕಡಿಮೆ ಅವಧಿಯಲ್ಲಿಯೇ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದು ಅದೇ ವಿಶ್ವಾಸದಿಂದ ಎಂಪಿ ಎಲೆಕ್ಷನ್‌ನಲ್ಲಿ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುತ್ತೇವೆ ಎಂದರು.

ಸಮರ್ಪಕ ಪಡಿತರ ವಿತರಣೆಗೆ ಸೂಚನೆ:

ಸರ್ಕಾರ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ವಿತರಣೆಯಲ್ಲಿ ಅಲ್ಪಸ್ವಲ್ಪ ಲೋಪದೋಷಗಳು ಇರುವುದು ಬಗ್ಗೆ ಮಾಹಿತಿ ಇದೆ. ಯಾವುದೇ ಕಾರಣಕ್ಕೂ ಅಕ್ಕಿಯನ್ನು ಕಾಳ ಸಂತೆಯಲ್ಲಿ ಮಾರಾಟ ಅವಕಾಶ ನೀಡದಂತೆ ಕ್ರಮ ತೆಗೆದುಕೊಳ್ಳಲಾಗುವುದು. ಬಡವರಿಗೆ ಸಮರ್ಪಕವಾಗಿ ಅಕ್ಕಿ ವಿತರಣೆಯಾಗುವ ನಿಟ್ಟಿನಲ್ಲಿ ಇಲಾಖೆಯು ಅಗತ್ಯ ಕ್ರಮ ತೆಗೆದುಕೊಳ್ಳಲಿದೆ. ಯಾವುದೇ ಕಾರಣಕ್ಕೂ ತೂಕದಲ್ಲಿ ಲೋಪದೋಷವಾಗದಂತೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದ್ದು,ಈ ಬಗ್ಗೆ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ. ಈಗಾಗಲೇ ತೆಲಂಗಾಣ, ಆಂಧ್ರ ಪ್ರದೇಶ ಹಾಗೂ ಛತ್ತಿಸ್‌ಗಡ್ ಸೇರಿದಂತೆ ಅನೇಕ ರಾಜ್ಯಗಳಿಗೆ ಅಕ್ಕಿ ಸಂಗ್ರಹಣೆಗಾಗಿ ಸಂಪರ್ಕ ಮಾಡಲಾಗಿದೆ. ಈಗಾಗಲೇ 5 ಕೆಜಿ ಅಕ್ಕಿ ಬದಲಾಗಿ ಹಣ ನೀಡಲಾಗುತ್ತಿದೆ. ಶೇ.90 ರಷ್ಟು ಜನರ ಖಾತೆಗೆ ಹಣ ಜಮಾಗೊಳ್ಳುತ್ತಿದೆ. ನವೀಕರಣ, ತಾಂತ್ರಿಕ ಲೋಪದೋಷಗಳಿಂದಾಗಿ ಉಳಿದವರಿಗೆ ಹಣ ತಲುಪಿಲ್ಲ ಅದನ್ನು ಸರಿಪಡಿಸಿ ಹಣ ನೀಡಲಾಗುವುದು. ಅಕ್ಕಿ ದೊರಯುವ ತನಕ ಹಣ ನೀಡಲಾಗುವುದು ನಂತರ ಅಕ್ಕಿ ವಿತರಿಸಲು ಸಿದ್ಧವಿದ್ದು, ಶೀಘ್ರದಲ್ಲಿ ಕ್ರಮವಹಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಚಿವ ಎನ್.ಎಸ್ ಬೋಸರಾಜು,ಶಾಸಕ ಹಂಪಯ್ಯನಾಯಕ, ಅಧಿಕಾರಿಗಳು, ಮುಖಂಡದರು ಇದ್ದರು.

ಮಂತ್ರಾಲಯ ಮಠಕ್ಕೆ ಸಚಿವರ ಭೇಟಿ: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ಆಹಾರ ಮತ್ತು ನಾಗರೀಕ ಸರಬರಾಜು ಖಾತೆ ಸಚಿವ ಕೆ.ಎಚ್‌.ಮುನಿಯಪ್ಪ ಅವರು ಭಾನುವಾರ ಭೇಟಿ ನೀಡಿದರು. ಸುಕ್ಷೇತ್ರದ ಗ್ರಾಮ ದೇವತೆ ಮಂಚಾಲಮ್ಮ ದೇವಿಗೆ ಪೂಜೆ ಸಲ್ಲಿಸಿದ ಸಚಿವರು ನಂತರ ಶ್ರೀಗುರುರಾಯರ ಮೂಲ ಬೃಂದಾವನದ ದರ್ಶನ ಪಡೆದರು. ಬಳಿಕ ಶ್ರೀಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಸಚಿವರಿಗೆ ಫಲ-ಮಂತ್ರಾಕ್ಷತೆ, ಕಾಣಿಕೆಯನ್ನು ನೀಡಿ ಸನ್ಮಾನಿಸಿ ಆಶೀರ್ವದಿಸಿದರು.