ಸಾರಾಂಶ
ರಾಯಚೂರು: ಮಾದಿಗ ಸಮಾಜದ ಒಳ ಮೀಸಲಾತಿ ಹೋರಾಟಕ್ಕೆ ಪ್ರಧಾನಿ ನರೇಂದ್ರ ಮೋದಿ ಸಮುದಾಯದ ಜೊತೆಗೆ ನಿಲ್ಲುತ್ತೇನೆ ಎಂದು ಭರವಸೆ ನೀಡಿದ್ದು, ಅವರು ಕೊಟ್ಟ ಮಾತಿಗೆ ಹಿಂದೆ ಸರಿಯುವವರಲ್ಲ, ಸಮಾಜದವರು ವಿಶ್ವಾಸ ಇಡಬೇಕು ಎಂದು ವಿಜಯಪುರ ಸಂಸದ ಹಾಗೂ ಕೇಂದ್ರದ ಮಾಜಿ ಸಚಿವ ರಮೇಶ ಜಿಗಜಿಣಗಿ ತಿಳಿಸಿದರು.
ಸ್ಥಳೀಯ ಖಾಸಗಿ ಹಬ್‌ನ ಸಭಾಂಗಣದಲ್ಲಿ ಜಿಲ್ಲಾ ಮಾದಿಗ ಸಮಾಜದಿಂದ ಹಮ್ಮಿಕೊಂಡಿದ್ದ ಮಾದಿಗ ಮುನ್ನಡೆ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮಾದಿಗ ಸಮುದಾಯದವರು ಮೂರು ದಶಕಗಳಿಂದ ಒಳ ಮೀಸಲಾತಿಗಾಗಿ ನಿರಂತರ ಹೋರಾಟ ನಡೆಸುತ್ತಾ ಬಂದಿದ್ದು, ಅದರ ಫಲವಾಗಿ ಇಂದು ಬೇಡಿಕೆಯು ಕೊನೆ ಹಂತಕ್ಕೆ ಬಂದು ತಲುಪಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಹ ಹೈದರಾಬಾದ್‌ನಲ್ಲಿ ನಡೆದ ವಿಶ್ವರೂಪ ಸಮಾವೇಶದಲ್ಲಿ ಒಳ ಮಿಸಲಾತಿ ಜಾರಿ ಮಾಡುವುದಾಗಿ ಹೇಳಿ ಬದ್ಧತೆ ತೋರಿಸಿದ್ದಾರೆ ಎಂದರು.ಮಾದಿಗ ಜನಾಂಗ ರಾಜಕೀಯವಾಗಿ ಇನ್ನಷ್ಟು ಬಲಿಷ್ಠಗೊಳ್ಳಬೇಕಾಗಿದೆ ಅದನ್ನು ಸಾಧಿಸಬೇಕಾದರೆ ಸಂಘಟಿತರಾಗಬೇಕು. ರಾಯಚೂರಿನಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿರುವ ಮಾದಿಗ ಸಮುದಾಯದವರು ಮುಂದಿನ ದಿನಗಳಲ್ಲಿ ಸಮಾಜದವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿ ರಾಜಕೀಯ ಶಕ್ತಿಯನ್ನು ಹೆಚ್ಚಿಸಬೇಕು ಎಂದರು.
ಸಾಮಾಜಿಕ ಕಾರ್ಯಕರ್ತ ವಾದಿರಾಜ ಮಾತನಾಡಿ, ಕಾಂಗ್ರೆಸ್ ನಿರ್ಲಕ್ಷ್ಯತನದಿಂದ ಇಷ್ಟು ದಿನಗಳ ಕಾಲ ಒಳ ಮೀಸಲಾತಿ ಜಾರಿ ಕಾರ್ಯಸಾಧುಗೊಂಡಿಲ್ಲ, ಬಿಜೆಪಿ ಆಡಳಿತದಲ್ಲಿ ಸಮಾಜಕ್ಕೆ ಮೀಸಲಾತಿ ಹೆಚ್ಚಿಸುವುದರ ಜೊತೆಗೆ ಸಂಪುಟ ಸಮಿತಿ ರಚಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದು, ಪ್ರಧಾನಿ ಸಹ ನೀಡಿದ ಭರವಸೆಯನ್ನು ಈಡೇರಿಸಲಿದ್ದಾರೆ ಎನ್ನುವ ನಂಬಿಕೆಯಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಹಗರಿಬೋಮ್ಮನಹಳ್ಳಿ ಪರಾಜಿತ ಬಿಜೆಪಿ ಅಭ್ಯರ್ಥಿ ರಾಮಣ್ಣ ಬಳ್ಳಾಹುಣಸಿ, ಬಿಜೆಪಿ ಬಳ್ಳಾರಿ ವಿಭಾಗದ ಸಂಘಟನಾ ಕಾರ್ಯದರ್ಶಿ ಪೂಜಪ್ಪ, ಬಿಜೆಪಿ ಯುವ ಮೊರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯೆ ಮಹಾಲಕ್ಷ್ಮೀ ಕಂದಾರಿ, ಶಾಸಕ ಡಾ.ಶಿವರಾಜ ಪಾಟೀಲ, ಬಿಜೆಪಿ ಮುಖಂಡ ರವೀಂದ್ರ ಜಲ್ದಾರ್, ಮಾದಿಗ ದಂಡೋರ ಮಾದಿಗ ಮೀಸಲಾತಿ ಹೊರಾಟ ಸಮಿತಿಯ ರಾಜ್ಯಾಧ್ಯಕ್ಷ ನರಸಪ್ಪ ದಂಡೋರ, ಮಾದಿಗ ಮಹಾಸಭಾ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು, ಸಮಾಜದ ಜನಪ್ರತಿನಿಧಿಗಳು, ಜಿಲ್ಲಾ ಮುಖಂಡರು ಇದ್ದರು.