ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಇಂದಿನ ಡಿಜಿಟಲ್ ಕ್ರಾಂತಿಯಲ್ಲಿ ಶೈಕ್ಷಣಿಕವಾಗಿ ವಿದ್ಯಾರ್ಥಿಗಳನ್ನು ಆನ್‌ಲೈನ್‌ನಲ್ಲಿ ತೊಡಗಿಸುವುದು ಬಹಳ ಮುಖ್ಯವಾಗಿದೆ ಎಂದು ಮಹಿಳಾ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಗುರುರಾಜ ಪ್ರಭು ತಿಳಿಸಿದರು.ಕಾಲೇಜಿನಲ್ಲಿ ಹೊಸದಾಗಿ ಬಿಎ, ಬಿಎಸ್ಸಿ, ಬಿಕಾಂ, ಬಿಸಿಎ, ಬಿಎಫ್‌ಎಸ್‌ಐ ಪ್ರಥಮ ವರ್ಷದ ಪದವಿಗಳಿಗೆ ದಾಖಲಾದ ವಿದ್ಯಾರ್ಥಿಗಳಿಗೆ ಕಾಲೇಜಿನ ವತಿಯಿಂದ ಅಭಿ ವಿನ್ಯಾಸ ಕಾರ್ಯಕ್ರಮದಡಿ ಕ್ಯೂಆರ್‌ಕೋಡ್ ಬಿಡುಗಡೆಗೊಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಕ್ಯೂಆರ್‌ಕೋಡ್‌ನ್ನು ವಿದ್ಯಾರ್ಥಿಗಳು ತಮ್ಮ ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿದರೆ ವಿಷಯವಾರು ಪ್ರಶ್ನೆ ಪತ್ರಿಕೆಗಳು, ಪಠ್ಯಕ್ರಮಗಳು ಸಿಗುತ್ತವೆ. ಮುಂದಿನ ದಿನದಲ್ಲಿ ಆಡಿಯೋ-ವಿಡಿಯೋ ಪಾಠಗಳನ್ನು ಅಪ್ಲೋಡ್ ಮಾಡಲಾಗುತ್ತದೆ ಎಂದು ವಿವರಿಸಿದರು.ಮಹಿಳಾ ಸರ್ಕಾರಿ ಕಾಲೇಜು ಒಂದು ಸುಂದರ ಪ್ರಕೃತಿಯ ತಾಣವಾಗಿದ್ದು, ಇಲ್ಲಿ ನಿಮ್ಮ ಭವಿಷ್ಯದ ಬದುಕನ್ನು ಕಟ್ಟಿಕೊಳ್ಳುವಂತಹ ಜ್ಞಾನವನ್ನು ಸಂಪಾದಿಸಿಕೊಳ್ಳಬೇಕು. ಸರ್ಕಾರ ನೀಡುವಂತಹ ಸೌಲಭ್ಯಗಳನ್ನು ಸಕಾಲದಲ್ಲಿ ಪಡೆದು ಶೈಕ್ಷಣಿಕ ಪ್ರಗತಿ ಸಾಧಿಸಬೇಕು ಎಂದು ಸಲಹೆ ನೀಡಿದರು.
ಸುಮಾರು ೫೦೦ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಸೇರಿದ ವಿದ್ಯಾರ್ಥಿಗಳಿಗೆ ಕಾಲೇಜಿನ ವಿವಿಧ ಸೌಲಭ್ಯಗಳು, ಕಾಲೇಜಿನಲ್ಲಿರುವ ಇತರೆ ವಿಷಯದ ಪ್ರಾಧ್ಯಾಪಕರ ಪರಿಚಯ, ಈ ಶೈಕ್ಷಣಿಕ ವರ್ಷದಲ್ಲಿ ನಿರ್ವಹಿಸಬೇಕಾದ ಕೆಲಸ ಕಾರ್ಯಗಳು, ಹೊಸದಾಗಿ ಬಂದಂತಹ ವಿದ್ಯಾರ್ಥಿಗಳು ಕಾಲೇಜಿನ ನಿಯಮಕ್ಕನುಸಾರವಾಗಿ ಮಾಡಬೇಕಾದಂತಹ ಕಾರ್ಯಗಳ ಕುರಿತು ತಿಳಿಸಿಕೊಡಲಾಯಿತು.ಕಾಲೇಜಿನಲ್ಲಿ ಸಾಂಸ್ಕೃತಿಕ ಸಂಘ, ರಾಷ್ಟ್ರೀಯ ಸೇವಾ ಯೋಜನೆ, ಸ್ಕೌಟ್ಸ್ ಮತ್ತು ಗೈಡ್ಸ್, ರೆಡ್ ಕ್ರಾಸ್, ವಿದ್ಯಾರ್ಥಿ ವೇತನ ಸೌಲಭ್ಯದ ಸಹಾಯವಾಣಿ, ಕ್ರೆಡಾ ವಿಭಾಗ, ಗ್ರಂಥಾಲಯ, ಮಹಿಳಾ ಸಬಲೀಕರಣ, ಇಕೋ ಕ್ಲಬ್, ಆಪ್ತಸಮಾಲೋಚನೆ, ಕಲಾವೇದಿಕೆ, ವಿಜ್ಞಾನ ವೇದಿಕೆ, ವಾಣಿಜ್ಯ ವೇದಿಕೆ, ಪ್ಲೇಸ್‌ಮೆಂಟ್ ಸೆಲ್, ನೆಲದ ಸಿರಿ ಹೀಗೆ ಹಲವಾರು ಸಮಿತಿಗಳಿದ್ದು ಈ ಸಮಿತಿಗಳ ಮೂಲಕ ವಿದ್ಯಾರ್ಥಿಗಳನ್ನು ಎಲ್ಲಾ ರಂಗದಲ್ಲೂ ಪಾಲ್ಗೊಳ್ಳುವಂತೆ ಕಾಲೇಜು ಕಾರ್ಯಪ್ರವೃತ್ತವಾಗಿದೆ ಎಂದರು.
ಕಾಲೇಜಿನ ವಿಭಾಗದ ಮುಖ್ಯಸ್ಥರು ಸಮಿತಿಗಳ ಸಂಚಾಲಕರು ಸಮಗ್ರ ವಿಷಯವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲಾಯಿತು ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲ ಪ್ರಾಧ್ಯಾಪಕರು ಆಡಳಿತ ಸಿಬ್ಬಂದಿ ವರ್ಗ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳು ಭಾಗವಹಿಸಿದ್ದರು.ನಿವೇಶನ ಹಂಚಿಕೆ ಅರ್ಜಿ ಆಹ್ವಾನ
ಮಳವಳ್ಳಿ:ಪುರಸಭೆ ವ್ಯಾಪ್ತಿ ವಾಸಿಸುತ್ತಿರುವ ಮನೆ ಮತ್ತು ನಿವೇಶನ ರಹಿತ ಬಿಪಿಎಲ್ ಕುಟುಂಬ ವರ್ಗದವರಿಂದ ಪಟ್ಟಣದ ಶಾಂತಿ ಕಾಲೇಜು ಮುಂಭಾಗದ 33 ಎಕರೆ ಪ್ರದೇಶದಲ್ಲಿ ನಿವೇಶನಗಳ ಹಂಚಿಕೆ ಸಂಬಂಧ ಪುರಸಭೆಯಿಂದ ಅರ್ಜಿ ಆಹ್ವಾನಿಸಲಾಗಿದೆ.
ಜು.10ರಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಶ್ರಮ ಸಮಿತಿ ಸಭೆ ತೀರ್ಮಾನದಂತೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯಲ್ಲಿ ಕೋರಿರುವ ದಾಖಲಾತಿಗಳೊಂದಿಗೆ 2025ರ ಆಗಸ್ಟ್ 18ರೊಳಗೆ ಪುರಸಭೆ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು. ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ವಸತಿ ಶಾಖೆ ವಿಷಯ ನಿರ್ವಹಕರನ್ನು ಸಂಪರ್ಕಿಸಬಹುದು ಎಂದು ಪುರಸಭೆ ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ ತಿಳಿಸಿದ್ದಾರೆ.