ಜೀವಜಾಲದ ಪ್ರಮುಖ ವಸ್ತು ಮಣ್ಣು: ಗಜೇಂದ್ರ

| Published : Mar 01 2024, 02:18 AM IST

ಸಾರಾಂಶ

ಮಣ್ಣು ಚಿನ್ನಕ್ಕಿಂತ ಮಿಗಿಲಾಗಿದ್ದು, ಜೀವಜಾಲದ ಪ್ರಮುಖ ವಸ್ತುವೇ ಮಣ್ಣಾಗಿದೆ ಎಂದು ಪರಿಸರವಾದಿ ಗಜೇಂದ್ರ ಗೊರಸುಕೊಡಿಗೆ ಹೇಳಿದರು.

- ಪಟ್ಟಣದ ಲಯನ್ಸ್ ಭವನದಲ್ಲಿ ಆಯೋಜಿಸಿದ್ದ ಮಣ್ಣು ಪರೀಕ್ಷಾ ಶಿಬಿರ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಮಣ್ಣು ಚಿನ್ನಕ್ಕಿಂತ ಮಿಗಿಲಾಗಿದ್ದು, ಜೀವಜಾಲದ ಪ್ರಮುಖ ವಸ್ತುವೇ ಮಣ್ಣಾಗಿದೆ ಎಂದು ಪರಿಸರವಾದಿ ಗಜೇಂದ್ರ ಗೊರಸುಕೊಡಿಗೆ ಹೇಳಿದರು.

ಪಟ್ಟಣದ ಲಯನ್ಸ್ ಭವನದಲ್ಲಿ ಲಯನ್ಸ್ ಕ್ಲಬ್ ಹಾಗೂ ನೆಟ್‌ಸರ್ಫ್ ಕಮ್ಯೂನಿಕೇಶನ್ ನಿಂದ ಗುರುವಾರ ಆಯೋಜಿಸಿದ್ದ ಮಣ್ಣು ಪರೀಕ್ಷಾ ಶಿಬಿರದಲ್ಲಿ ಮಾತನಾಡಿದರು. ಕೃಷಿಕರು ಇಂದು ಕವಲು ದಾರಿಯಲ್ಲಿ ಇದ್ದು, ಶೇ.99 ಕೃಷಿಕರಿಗೆ ಕೃಷಿ ಹೊರತುಪಡಿಸಿ ಬೇರೆ ಉದ್ಯೋಗ ಗೊತ್ತಿಲ್ಲ. ಕೃಷಿಯಲ್ಲಿ ಬದುಕುವ ಅನಿವಾರ್ಯ ಪರಿಸ್ಥಿತಿ ಎದುರಿಗಿದೆ. 60 ವರ್ಷಗಳ ಹಿಂದೆ ಕೃಷಿಕರಿಗೆ ಅಪ್ಯಾಯಮಾನವಾಗಿ ಬಂದಿರುವುದೇ ರಾಸಾಯನಿಕ ಕೃಷಿ ಪದ್ಧತಿಯಾಗಿದೆ. ರಾಸಾಯನಿಕ ಕೃಷಿ ಪದ್ಧತಿ ಕ್ರಮೇಣವಾಗಿ ನಮ್ಮ ಮಣ್ಣನ್ನು ಸಾಯಿಸುತ್ತಿದ್ದು, ರೈತರ ಕುತ್ತಿಗೆಗೆ ಉರುಳಾಗುತ್ತಿದೆ. ಮಣ್ಣು ರೈತನಿಗೆ ಉರುಳಾಗದಂತೆ ಬಳಸಬೇಕಿದೆ.

ಮಣ್ಣನ್ನು ಬದುಕಿಸುವ ಕೆಲಸವಾಗಬೇಕಿದೆ. ಹಾವು ಕಚ್ಚಿದರೂ ಮನುಷ್ಯ ಬದುಕಬಹುದು. ಆದರೆ ಮಣ್ಣು ವಿಷಪೂರಿತವಾದರೆ ಕೃಷಿಕರು ಬದುಕಲು ಸಾಧ್ಯವಿಲ್ಲ. ಸ್ವಿಚ್ ಹಾಕಿದರೆ ಚಾರ್ಜ್ ಆಗಲು ನಾವು ಯಂತ್ರವಲ್ಲ. ನಮಗೆ ಭೂಮಿಯಿಂದಲೇ ಆಹಾರ ಬರಬೇಕಿದೆ. ಈ ಹಿನ್ನೆಲೆಯಲ್ಲಿ ಮಣ್ಣಿನ ರಕ್ಷಣೆಗೆ ನಾವು ಮುಂದಾಗಬೇಕಿದೆ.

ಎಲ್ಲ ಸ್ಪರ್ಧೆಗಳ ನಡುವೆ ಇಂದು ಕೃಷಿ ಗೆಲ್ಲಬೇಕಿದೆ. ದೇಶದಲ್ಲಿ ಇಂದು ಜನಸಂಖ್ಯೆ ನಾಗಾಲೋಟದಲ್ಲಿ ಓಡುತ್ತಿದ್ದು, ಜನರ ಹೊಟ್ಟೆ ತುಂಬಿಸುವ ಕೃಷಿಭೂಮಿ ಕಡಿಮೆಯಾಗುತ್ತಿದೆ. ರಾಸಾಯನಿಕ ಮುಕ್ತ ಕೃಷಿಯ ಕಡೆಗೆ ಗಮನಹರಿಸಬೇಕಿದ್ದು, ವೈಜ್ಞಾನಿಕ ಕೃಷಿ ಚಟುವಟಿಕೆಗಳು ನಡೆಯಬೇಕಿದೆ.

ಕೇಂದ್ರ ಸರ್ಕಾರದಿಂದ ಸಾಯಿಲ್ ಕಾಡ್‌ ಗಳನ್ನು ರೈತರಿಗೆ ವಿತರಣೆ ಮಾಡಿದ್ದರೂ ಸಹ ಹಲವರು ಇದರ ಪ್ರಯೋಜನ ಪಡೆದುಕೊಂಡಿಲ್ಲ. ಇದರ ಕುರಿತು ಬೃಹತ್ ಜಾಗೃತಿ ಅಭಿಯಾನ ನಡೆಯಬೇಕಿದೆ. ಈ ಹಿಂದೆ ಮುಚ್ಚಿದ ಕೋಣೆಯೊಳಗೆ ನಡೆಯುತ್ತಿದ್ದ ಮಣ್ಣು ಪರೀಕ್ಷೆ ಎಂದು ತೆರೆದ ಮನೆಯಾಗಿ ಪರಿವರ್ತನೆಯಾಗಿದೆ. ರೈತರಿಗೆ ಸಕಾಲದಲ್ಲಿ ಮಣ್ಣು ಪರೀಕ್ಷೆಯ ವರದಿಗಳು ದೊರೆಯುತ್ತಿವೆ.ಕೃಷಿಯಲ್ಲಿ ಹಲವು ದೇಶಗಳು ಇಂದು ನ್ಯಾನೋ ತಂತ್ರಜ್ಞಾನ ಅಳವಡಿಸಿಕೊಂಡಿದ್ದು, ಭಾರತ ಸಹ ಇತ್ತೀಚೆಗೆ ಈ ತಂತ್ರಜ್ಞಾನಕ್ಕೆ ಕಾಲಿಟ್ಟಿದೆ ಎಂದರು.

ನೆಟ್‌ಸರ್ಪ್ ಕಂಪೆನಿ ಮುಖ್ಯಸ್ಥ ಕಿರಣ್ ಮಾತನಾಡಿ, ಮಣ್ಣು ಪರೀಕ್ಷೆ ನಡೆಸುವುದರಿಂದ ರೈತರಿಗೆ ತಮ್ಮ ಜಮೀನುಗಳ ಮಣ್ಣಿನ ಸಾರ ತಿಳಿಯಲಿದ್ದು, ಪ್ರತಿಯೊಬ್ಬ ರೈತರೂ ಇದನ್ನು ಮಾಡಬೇಕಿದೆ. ನೆಟ್‌ಸರ್ಪ್ ಸಂಸ್ಥೆ ನ್ಯಾನೋ ತಂತ್ರಜ್ಞಾನದ ಮೂಲಕ ಮಣ್ಣು ಪರೀಕ್ಷೆ ನಡೆಸುವ ಹೊಸ ಆವಿಷ್ಕಾರ ಮಾಡಿದೆ ಎಂದು ತಿಳಿಸಿದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಎಂ.ಡಿ.ಶಿವರಾಮ್, ಪ್ರಾಂತೀಯ ಅಧ್ಯಕ್ಷ ಎಂ.ಆರ್.ಮಂಜುನಾಥ್, ವಲಯ ಅಧ್ಯಕ್ಷ ಎನ್.ಸುಬ್ರಮಣ್ಯ, ಎಂ.ವಿ.ಶ್ರೀನಿವಾಸಗೌಡ, ಪ್ರಶಾಂತ್ ಶಾಸ್ತಿç ಮತ್ತಿತರರು ಇದ್ದರು.೨೯ಬಿಹೆಚ್‌ಆರ್ ೧:

ಬಾಳೆಹೊನ್ನೂರಿನ ಲಯನ್ಸ್ ಕ್ಲಬ್ ಆಯೋಜಿಸಿದ್ದ ಮಣ್ಣು ಪರೀಕ್ಷಾ ಶಿಬಿರದಲ್ಲಿ ಪರಿಸರವಾದಿ ಗಜೇಂದ್ರ ಗೊರಸುಕೊಡಿಗೆ ಮಾತನಾಡಿದರು. ಕಿರಣ್, ಶಿವರಾಮ್, ಮಂಜುನಾಥ್, ಸುಬ್ರಮಣ್ಯ ಇದ್ದರು.