ಮೃತಪಟ್ಟ ರಾಸುಗಳಿಗೆ ನೀಡಲಾಗುವ ವಿಮೆ ಹಣದಿಂದ ಮತ್ತೊಂದು ರಾಸು ತಂದು ಹೈನುಗಾರಿಕೆಯನ್ನು ಉತ್ತಮಪಡಿಸಿಕೊಳ್ಳಬೇಕೆಂದು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಸಿ.ವಿ.ಮಹಲಿಂಗಯ್ಯ ರೈತಾಪಿಗಳಿಗೆ ಕರೆ ನೀಡಿದರು.
ಕನ್ನಡಪ್ರಭ ವಾರ್ತೆ ತುರುವೇಕೆರೆ
ಮೃತಪಟ್ಟ ರಾಸುಗಳಿಗೆ ನೀಡಲಾಗುವ ವಿಮೆ ಹಣದಿಂದ ಮತ್ತೊಂದು ರಾಸು ತಂದು ಹೈನುಗಾರಿಕೆಯನ್ನು ಉತ್ತಮಪಡಿಸಿಕೊಳ್ಳಬೇಕೆಂದು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಸಿ.ವಿ.ಮಹಲಿಂಗಯ್ಯ ರೈತಾಪಿಗಳಿಗೆ ಕರೆ ನೀಡಿದರು.ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ನಂದಿನಿ ಕ್ಷೀರಭವನ ಸಭಾಂಗಣದಲ್ಲಿ ಹಲವಾರು ಹೈನುಗಾರರಿಗೆ ಚೆಕ್ ವಿತರಣೆ ಮಾಡಿ ಅವರು ಮಾತನಾಡುತ್ತಿದ್ದರು. ಹಲವಾರು ಕಾರಣಗಳಿಂದ ರಾಸುಗಳು ಮೃತಪಡುತ್ತವೆ. ರೈತಾಪಿಗಳಿಗೆ ಆರ್ಥಿಕವಾಗಿ ತೊಂದರೆಯಾಗಬಾರದೆಂಬ ಉದ್ದೇಶದಿಂದ ರೈತರ ರಾಸುಗಳಿಗೆ ಉಚಿತವಾಗಿ ವಿಮೆ ಮಾಡಿಕೊಡಲಾಗುತ್ತಿದೆ. ರಾಸು ನೀಡುತ್ತಿದ್ದ ಹಾಲಿನ ಗುಣಮಟ್ಟದ ಮೇರೆಗೆ ವಿಮೆ ಹಣ ನಿಗದಿಪಡಿಸಲಾಗುವುದು. ಸದ್ಯಕ್ಕೆ 10 ಸಾವಿರದಿಂದ 75 ಸಾವಿರ ರುಗಳವರೆಗೂ ವಿಮೆ ಹಣ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಪ್ರತಿ ವರ್ಷ ಸುಮಾರು 2 ಲಕ್ಷ ರಾಸುಗಳಿಗೆ ವಿಮೆ ಮಾಡಿಸಲಾಗುತ್ತಿದೆ. ಇದಕ್ಕಾಗಿ ಸುಮಾರು 33 ಕೋಟಿ ವಿನಿಯೋಗಿಸಲಾಗಿದೆ ಎಂದರು.
ಹೈನುಗಾರರು ಅಕಾಲಿಕವಾಗಿ ಮರಣ ಹೊಂದಿದರೂ ಸಹ 50 ಸಾವಿರ ಹಣ ನೀಡಲಾಗುತ್ತಿದೆ. ಹಾಲು ಒಕ್ಕೂಟಕ್ಕೆ ಹಾಲು ಹಾಕುವ ರೈತಾಪಿಗಳಿಗೆ ಹತ್ತು ಹಲವಾರು ಯೋಜನೆಗಳು ಇದ್ದು ರಿಯಾಯಿತಿ ದರದಲ್ಲಿ ಸಲಕರಣೆಗಳನ್ನು ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಸುಮಾರು 1400 ಕ್ಕೂ ಹೆಚ್ಚು ಸಹಕಾರ ಸಂಘಗಳು ಇವೆ. ಈ ಬಾರಿ ಸುಮಾರು 30 ಸಾವಿರಕ್ಕೂ ಹೆಚ್ಚು ಮ್ಯಾಟ್ ಗಳಿಗೆ ಬೇಡಿಕೆ ಇದೆ. ಇದನ್ನೂ ಸಹ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತಿದೆ. ರಿಯಾಯಿತಿ ದರದಲ್ಲಿ ಬೀಜ ವಿತರಣೆ, ಬಹು ಬೇಗನೇ ಹುಲ್ಲು ಬೆಳೆಯುವ ಬೀಜಗಳ ವಿತರಣೆ ಮಾಡಲಾಗುತ್ತಿದೆ. ನಮ್ಮ ಒಕ್ಕೂಟದ ವತಿಯಿಂದ ಸುಮಾರು 224 ವಿದ್ಯಾರ್ಥಿನಿಯರಿಗೆ ಉಚಿತ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. ಇಂದು 23 ರಾಸುಗಳ ಮೃತಪಟ್ಟ ವಾರಸುದಾರರಿಗೆ ಸುಮಾರು 12 ಲಕ್ಷದಷ್ಟು ಮೌಲ್ಯದ ಚೆಕ್ ನ್ನು ವಿತರಣೆ ಮಾಡಲಾಗಿದೆ. ರೈತಾಪಿಗಳು ಕೃಷಿಯೊಂದಿಗೆ ಹೈನುಗಾರಿಕೆಯನ್ನೂ ಸಹ ಮುಂದುವರೆಸಿಕೊಂಡರೆ ಉತ್ತಮ ಆರ್ಥಿಕಾಭಿವೃದ್ಧಿ ಹೊಂದಲು ಸಾಧ್ಯವಾಗಲಿದೆ ಎಂದು ಸಿ.ವಿ.ಮಹಲಿಂಗಯ್ಯ ಹೇಳಿದರು. ಈ ಸಂದರ್ಭದಲ್ಲಿ ವಿಸ್ತೀರಣಾಧಿಕಾರಿಗಳಾದ ಕಿರಣ್ ಕುಮಾರ್, ದಿವಾಕರ್, ಸುನಿಲ್, ಡಾ.ಲೋಹಿತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.