ಯೋಗಾಭ್ಯಾಸದ ಮೂಲಕ ಆರೋಗ್ಯ ವೃದ್ಧಿಸಿಕೊಳ್ಳಿ: ರವಿ

| Published : Jul 30 2025, 12:45 AM IST

ಸಾರಾಂಶ

ಮಹಿಳೆಯರು ಎಲ್ಲಾ ರಂಗದಲ್ಲೂ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ. ಆದರೆ, ಕುಟುಂಬದ ಆರೋಗ್ಯ ಕಾಳಜಿ ವಹಿಸುವ ಹೆಣ್ಣುಮಕ್ಕಳು ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರಿಸುವುದು ಸರಿಯಲ್ಲ .

ಕನ್ನಡಪ್ರಭ ವಾರ್ತೆ ಮಂಡ್ಯ

ಮಹಿಳೆಯರು ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕಾಗಿ ಯೋಗ ಅಭ್ಯಾಸ ಮಾಡುವುದು ಉತ್ತಮ ಎಂದು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಜಿಲ್ಲಾ ಸಂಚಾಲಕ ರವಿ ಹೇಳಿದರು.

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಪರಿಸರ ರೂರಲ್ ಡೆವಲಪ್ ಮೆಂಟ್ ಸೊಸೈಟಿ, ಮಮತೆಯ ಮಡಿಲು ಮಂಗಲ ಹಾಗೂ ಮಹಾ ಮಾಯಾ ಚೈಲ್ಡ್ ಕೇರ್ ವತಿಯಿಂದ ಮಹಿಳೆಯರಿಗೆ ಆಯೋಜಿಸಿದ್ದ ಉಚಿತ ಯೋಗ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ದೈಹಿಕ ಚಟುವಟಿಕೆ ಕಡಿಮೆಯಾಗಿ ಮಾನಸಿಕ ಒತ್ತಡವನ್ನು ಎದುರಿಸುತ್ತಿರುವ ಮಹಿಳೆಯರು ಚಿಕ್ಕವಯಸ್ಸಿಗೆ ವಿವಿಧ ರೋಗಗಳಿಗೆ ಗುರಿಯಾಗುತ್ತಿರುವುದು ವಿಪರ್ಯಾಸ. ಆದ್ದರಿಂದ ಪ್ರತಿಯೊಬ್ಬರೂ ಯೋಗ ಮೂಲಕ ಆರೋಗ್ಯ ವೃದ್ಧಿಸಿಕೊಳ್ಳಬೇಕು ಎಂದರು.

ಮಹಾಮಾಯ ಚೈಲ್ಡ್ ಕೇರ್ ಮುಖ್ಯಸ್ಥರಾದ ಗೀತಾ ಕಾಮತ್ ಮಾತನಾಡಿ, ಸನಾತನ ಕಾಲದಲ್ಲಿ ಮಹಿಳೆಯರು ದಿನನಿತ್ಯದ ಚಟುವಟಿಕೆ ಮೂಲಕ ಯೋಗ ಚಟುವಟಿಕೆಗಳನ್ನು ಅಳವಡಿಸಿಕೊಂಡಿದ್ದರು. ಅವರ ಆಯಸ್ಸಿನ ಮಟ್ಟ ಹೆಚ್ಚಿತ್ತು. ಉತ್ತಮ ಆರೋಗ್ಯಕ್ಕಾಗಿ ಯೋಗಾಭ್ಯಾಸ ಮಾಡಿ ಎಂದು ಕರೆ ನೀಡಿದರು.

ಪರಿಸರ ರೂರಲ್ ಡೆವಲಪ್ ಮೆಂಟ್ ಸೊಸೈಟಿ ಕಾರ್ಯದರ್ಶಿ ಕೆ.ಪಿ.ಅರುಣಕುಮಾರಿ ಮಾತನಾಡಿ, ಮಹಿಳೆಯರು ಎಲ್ಲಾ ರಂಗದಲ್ಲೂ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ. ಆದರೆ, ಕುಟುಂಬದ ಆರೋಗ್ಯ ಕಾಳಜಿ ವಹಿಸುವ ಹೆಣ್ಣುಮಕ್ಕಳು ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರಿಸುವುದು ಸರಿಯಲ್ಲ ಎಂದರು.

ಪ್ರಸ್ತುತ ಮಹಿಳೆಯರಲ್ಲಿ ಮಾನಸಿಕ ಒತ್ತಡ ಹೆಚ್ಚಾಗಿದೆ. ಒತ್ತಡ ನಿವಾರಣೆ ಹಾಗೂ ಆರೋಗ್ಯಕ್ಕಾಗಿ ಒಂದು ತಾಸು ಯೋಗ ಅಭ್ಯಾಸ ಅತ್ಯವಶ್ಯಕ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಮಂದಿ ಮಹಿಳೆಯರು ಸ್ವಇಚ್ಛೆಯಿಂದ ಭಾಗವಹಿಸಿದ್ದರು. ಶೃತಿ ಸ್ವಾಗತಿಸಿ, ಶ್ವೇತ ನಿರೂಪಿಸಿದರು.