ಸಾರಾಂಶ
- ಚಿಕ್ಕಮಗಳೂರಿನ ಜ್ಯೂನಿಯರ್ ಕಾಲೇಜಿನಲ್ಲಿ ರಾಗಿ ಹೆಲ್ತ್ ಮಿಕ್ಸ್ ವಿತರಣಾ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುರಾಗಿ ಮಾಲ್ಟ್ ಸೇವನೆಯಿಂದ ದೈಹಿಕವಾಗಿ ಮಕ್ಕಳ ಆರೋಗ್ಯ ವೃದ್ಧಿಯಾಗುವ ಜೊತೆಗೆ ಓದಿನಲ್ಲಿ ಚುರುಕು ಹೊಂದಿ ಶೈಕ್ಷಣಿವಾಗಿ ಬೆಳವಣಿಗೆಯಾಗಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಬಿ. ಗೋಪಾಲಕೃಷ್ಣ ಹೇಳಿದರು.ನಗರದ ಬೇಲೂರು ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಹಾಗೂ ಕೆಎಂಎಫ್ ಸಂಸ್ಥೆ ಸಹಯೋಗದಲ್ಲಿ ಗುರುವಾರ ಸಾಯಿ ಶ್ಯೂರ್ ರಾಗಿ ಹೆಲ್ತ್ ಮಿಕ್ಸ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಜಿಲ್ಲೆಯಾದ್ಯಂತ ಸರ್ಕಾರಿ ಶಾಲಾ ಮಕ್ಕಳ ಮಾನಸಿಕ ದೈಹಿಕ ಆರೋಗ್ಯಕ್ಕಾಗಿ ರಾಗಿ ಮಾಲ್ಟ್ ವಿತರಣೆ ಪ್ರಾರಂಭಿಸ ಲಾಗಿದ್ದು ಉತ್ತಮ ಪೌಷ್ಠಿಕಾಂಶ, ಶಿಕ್ಷಣಕ್ಕೆ ರಹದಾರಿಯಾಗಲಿದೆ. ಈ ಹಿಂದೆ ವಾರಕ್ಕೆರಡು ಮೊಟ್ಟೆ ಕೊಡುವ ಕಾರ್ಯಕ್ರಮ ರೂಪಿಸಿದ್ದು ಇದೀಗ ರಾಗಿ ಮಾಲ್ಟ್ ಕೊಡುವ ಕಾರ್ಯಕ್ರಮ ಇಂದಿನಿಂದ ಆರಂಭಗೊಂಡಿದೆ ಎಂದು ತಿಳಿಸಿದರು.ಮಕ್ಕಳಲ್ಲಿ ರಕ್ತಹೀನತೆ ಹಾಗೂ ಪೌಷ್ಠಿಕಾಂಶ ಕೊರತೆ ಉಂಟಾಗಬಾರದು. ಆಗ ಮಾತ್ರ ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚು ಆಸಕ್ತಿಯಿಂದ ತೊಡಗಿಸಿಕೊಂಡು ಗುಣಮಟ್ಟದ ಶಿಕ್ಷಣ ಪಡೆದುಕೊಳ್ಳಲು ಸಾಧ್ಯ. ಜಿಲ್ಲೆಯ ಸರ್ಕಾ ರಿ ಶಾಲೆ ಮಕ್ಕಳಿಗೆ ಉತ್ತಮ ಪೌಷ್ಠಿಕಾಂಶ ದೊರೆಯಬೇಕೆಂದು ಸರ್ಕಾರ ರಾಗಿಮಾಲ್ಟ್ ಯೋಜನೆ ಆರಂಭಿಸಿದ್ದು ಮಕ್ಕಳ ಅಪೌಷ್ಠಿಕತೆ ತಡೆಗಟ್ಟಲು ಮುಂದಾಗಿದೆ ಎಂದರು.ಮಕ್ಕಳು ಬಾಲ್ಯದಲ್ಲಿ ಪೌಷ್ಠಿಕ ಆಹಾರಗಳಾದ ರಾಗಿ, ಮೊಟ್ಟೆ, ಹಾಲು, ತರಕಾರಿ ಸೇರಿದಂತೆ ಇನ್ನಿತರೆ ಪದಾರ್ಥಗಳಿಗೆ ಅಸಡ್ಡೆವಹಿಸುವರು. ಕಾಲಕ್ರಮೇಣ ಅವುಗಳ ಮಹತ್ವ ತಿಳಿಯುವ ಮುನ್ನವೇ ಆರೋಗ್ಯ ಶರೀರಕ್ಕೆ ಪೌಷ್ಠಿಕ ಆಹಾರ ಸೇವಿಸುವುದು ಒಳ್ಳೆಯದು. ಇದರಿಂದ ಭವಿಷ್ಯದಲ್ಲಿ ಇನ್ನಷ್ಟು ಸದೃಢವಾಗಿರಲು ಸಾಧ್ಯ ಎಂದು ಸಲಹೆ ಮಾಡಿದರು.ಇತ್ತೀಚಿನ ದಿನಗಳಲ್ಲಿ ಶಾಲಾ ಮಕ್ಕಳಲ್ಲಿ ರಕ್ತಹೀನತೆ, ಅಪೌಷ್ಠಿಕತೆ ಕಾಡುತ್ತಿದೆ. ಇವುಗಳನ್ನು ತಡೆಗಟ್ಟುವ ಸಲುವಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿ ಮಕ್ಕಳಿಗಾಗಿ ಉಣ ಬಡಿಸಿದೆ. ಹಾಲು, ಮೊಟ್ಟೆ, ಚಿಕ್ಕಿ ಬಾಳೆಹಣ್ಣು, ಇದೀಗ ರಾಗಿ ಮಾಲ್ಟ್ ವಿತರಿಸುತ್ತಿದ್ದು ಇದನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಕಾಲೇಜು ಪ್ರಾಚಾರ್ಯ ವೀರೂಪಾಕ್ಷಪ್ಪ ಮಾತನಾಡಿ, ಆರೋಗ್ಯಕ್ಕೆ ಪೂರಕ ಪದಾರ್ಥಗಳನ್ನು ಸೇವಿಸುವುದು ಅತಿ ಮುಖ್ಯ. ವಿದ್ಯಾರ್ಥಿಗಳು ಗುಣಮಟ್ಟದ ಆಹಾರಗಳ ಬಗ್ಗೆ ಅಸಡ್ಡೆ ತೋರಬಾರದು. ರುಚಿ ಕಡಿಮೆಯಿದ್ದರೂ ಕೂಡಾ ಪರಿ ಪೂರ್ಣ ಆರೋಗ್ಯಕ್ಕೆ ಸಹಕಾರಿ. ಹೀಗಾಗಿ ಹಾಲು, ಮೊಟ್ಟೆ ಹಾಗೂ ರಾಗಿ ವಿವಿಧ ರೀತಿ ಪದಾರ್ಥಗಳನ್ನು ಸೇವಿಸುವುದು ಉತ್ತಮ ಎಂದು ಹೇಳಿದರು.ಈಚೆಗೆ ಶಾಲೆಯಲ್ಲಿ ವಿಶೇಷವಾಗಿ ಮಕ್ಕಳಿಗೆ ಆರೋಗ್ಯ ತಪಾಸಣೆ ನಡೆಸಿದ ವೇಳೆ ಸುಮಾರು 180ಕ್ಕೂ ಹೆಚ್ಚು ಮಕ್ಕಳಲ್ಲಿ ರಕ್ತ ಹೀನತೆ ಕಂಡುಬಂತು. ಇದರಲ್ಲಿ ಮೂವರು ವಿದ್ಯಾರ್ಥಿಗಳಿಗೆ ತೀವ್ರ ಸ್ವರೂಪದ ಸಮಸ್ಯೆಯಿದ್ದ ಹಿನ್ನೆಲೆಯಲ್ಲಿ ಪಾಲಕರ ಗಮನಕ್ಕೆ ತರುವ ಮೂಲಕ ಚಿಕಿತ್ಸೆ ಒದಗಿಸಲಾಗುತ್ತಿದೆ. ಹೀಗಾಗಿ ಸರ್ಕಾರ ಶಾಲೆ ಮಕ್ಕಳಿಗೆ ಅಪೌಷ್ಠಿಕತೆ ಉದ್ಬವಿಸದಂತೆ ಯೋಜನೆ ರೂಪಿಸಿದೆ ಎಂದರು.ಜಿಪಂ ಪ್ರಧಾನಮಂತ್ರಿ ಪೋಷಣ್‍ಶಕ್ತಿ ನಿರ್ಮಾಣ ಎಂಡಿಎಂ ಶಿಕ್ಷಣಾಧಿಕಾರಿ ವೈ.ಬಿ.ಸುಂದರೇಶ್ ಮಾತನಾಡಿ, ಮಕ್ಕಳಲ್ಲಿ ರಕ್ತಹೀನತೆ ಇರಕೂಡದು ಹಾಗೂ ಭವಿಷ್ಯಕ್ಕೆ ಉತ್ತಮ ಪ್ರಜೆ ನೀಡುವ ದೃಷ್ಟಿಯಿಂದ ಜಿಲ್ಲೆಯಾದ್ಯಂತ 1 ರಿಂದ 10 ತರಗತಿಯ ಸುಮಾರು 78 ಸಾವಿರ ಮಕ್ಕಳಿಗೆ ಪ್ರಸಕ್ತ ಸಾಲಿನಿಂದ ರಾಗಿ ಮಾಲ್ಟ್ ವಿತರಿಸಲಾರಂಭಿಸಿದೆ. ಮಕ್ಕಳು ಅಂಜದೇ ಮುಕ್ತವಾಗಿ ಸೇವಿಸಿ ಆರೋಗ್ಯಯುತ ಶರೀರ ನಿಮ್ಮದಾಗಿಸಿಕೊಳ್ಳಬೇಕು ಎಂದು ತಿಳಿಸಿದರು.ಇದೇ ವೇಳೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸುಮಾರು 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ರಾಗಿಮಾಲ್ಟ್ ವಿತರಣೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರಸಭಾ ಅಧ್ಯಕ್ಷ ವರಸಿದ್ದಿ ವೇಣು ಗೋಪಾಲ್ ವಹಿಸಿದ್ದರು.ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಸಿ.ರವೀಶ್, ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಆರ್. ಕಿರಣ್‍ಕುಮಾರ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎನ್.ಮಂಜುನಾಥ್, ಸಂಘಟನಾ ಕಾರ್ಯದರ್ಶಿ ಬಿ.ಕೆ. ಸದಾಶಿವಮೂರ್ತಿ, ಮಾಜಿ ಅಧ್ಯಕ್ಷ ಪ್ರಭಾಕರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಡಿ.ಪ್ರಶಾಂತಿನಿ, ಸದಸ್ಯೆ ಕುಸುಮ ಕಾಲೇಜಿನ ಉಪ ಪ್ರಾಚಾರ್ಯ ಸುಧಾ , ಶಿಕ್ಷಕರಾದ ಎನ್.ಟಿ.ಮಮತ , ಎಚ್.ಎಸ್.ಸತೀಶ್ ಉಪಸ್ಥಿತರಿದ್ದರು.22 ಕೆಸಿಕೆಎಂ 1ಚಿಕ್ಕಮಗಳೂರಿನ ಬೇಲೂರು ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಗುರುವಾರ ಸಾಯಿ ಶ್ಯೂರ್ ರಾಗಿ ಹೆಲ್ತ್ ಮಿಕ್ಸ್ ವಿತರಣಾ ಕಾರ್ಯಕ್ರಮವನ್ನು ಜಿಪಂ ಸಿಇಓ ಡಾ. ಗೋಪಾಲಕೃಷ್ಣ ಉದ್ಘಾಟಿಸಿದರು.