ಜೇನು ಸಾಕಾಣಿಕೆಯಿಂದ ರೈತರ ಆರ್ಥಿಕ ಮಟ್ಟ ಸುಧಾರಣೆಯಾಗುತ್ತದೆ.
ಕನ್ನಡಪ್ರಭ ವಾರ್ತೆ ಮುಂಡಗೋಡ
ಜೇನು ಸಾಕಾಣಿಕೆಯಿಂದ ರೈತರ ಆರ್ಥಿಕ ಮಟ್ಟ ಸುಧಾರಣೆಯಾಗುತ್ತದೆ ಎಂದು ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಕೃಷ್ಣ ಕುಳ್ಳೂರ ಹೇಳಿದರು.ಬುಧವಾರ ಪಟ್ಟಣದ ಶಿರಸಿ ಹೊರ ವಲಯ ಶಿರಸಿ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ಸಬಾಂಗಣದಲ್ಲಿ ವಿಶ್ವ ಜೇನು ದುಂಬಿ ದಿನದ ಅಂಗವಾಗಿ ತೋಟಗಾರಿಕೆ ಇಲಾಖೆಯಿಂದ ವೈಜ್ಞಾನಿಕ ಜೇನು ಬೇಸಾಯ ಪದ್ಧತಿಯ ಕುರಿತು ಜೇನುಕೃಷಿ ಆಸಕ್ತ ರೈತರಿಗೆ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೈತರಿಗೆ ಪ್ರೋತ್ಸಾಹಿಸುವ ದೃಷ್ಟಿಯಿಂದ ತೋಟಗಾರಿಕೆ ಇಲಾಖೆಯಿಂದ ಜೇನು ಸಾಕಾಣಿಕೆಗೆ ಸಬ್ಸಿಡಿ ರೂಪದಲ್ಲಿ ಆರ್ಥಿಕ ಸಹಾಯ ನೀಡಲಾಗುತ್ತದೆ. ರೈತರು ಇದರ ಸದುಪಯೋಗಪಡೆದುಕೊಂಡು ಸಬಲರಾಗಬೇಕೆಂದು ಕರೆ ನೀಡಿದರು.ನ್ಯಾಯವಾದಿ ಹಾಗೂ ಜೇನು ಕೃಷಿಕ ಸಂಗಮೇಶ ಕೊಳ್ಳಾನವರ ಮಾತನಾಡಿ ಜೇನು ಕೃಷಿಯಲ್ಲಿನ ತಮ್ಮ ಸುದೀರ್ಘ ಅನುಭವ, ಅಧ್ಯಯನ ಹಾಗೂ ಜೇನು ಕೃಷಿಯ ಲಾಭಗಳ ಕುರಿತು ರೈತರಿಗೆ ಸವಿವರವಾದ ಮಾಹಿತಿ ನೀಡಿದರು.
ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಸುರೇಶ ಕಲ್ಲೊಳ್ಳಿ ಮಾತನಾಡಿ, ಪರಿಶಿಷ್ಟ ಪಂಗಡದ ಅರಣ್ಯ ಭೂಮಿ ಹಕ್ಕು ಪತ್ರ ಹೊಂದಿರುವ ರೈತರಿಗೆ ತೋಟಗಾರಿಕೆ ಇಲಾಖೆಯಿಂದ ನೀಡಲಾದ ಜೇನು ಪೆಟ್ಟಿಗೆ ಸಹಾಯಧನದ ಕುರಿತು ಹರ್ಷ ವ್ಯಕ್ತಪಡಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಯಲ್ಲಾಪುರದ ತಿಮ್ಮಣ್ಣ ಭಟ್ ಜೇನು ಕೃಷಿಯ ಕುರಿತು ರೈತರಿಗೆ ಸಂಪೂರ್ಣವಾದ ಮಾಹಿತಿ ನೀಡಿದರು.ಜಿಲ್ಲಾ ನಾರಿಶಕ್ತಿ ಪ್ರಶಸ್ತಿ ಪುರಸ್ಕೃತರಾದ ಪುಷ್ಪಾ ಗುಲ್ಯಾನವರ, ಜೇನು ಕೃಷಿಯಲ್ಲಿನ ತಮ್ಮ ಅನುಭವ ಹಂಚಿಕೊಂಡರು.
ತಾಲೂಕಿನ ಕೃಷಿ ಸಖಿಯರು ಹಾಗೂ ಸಹಾಯಕ ತೋಟಗಾರಿಕೆ ಅಧಿಕಾರಿಗಳಾದ ರಮೇಶ ಜಮಖಂಡಿ ಹಾಗೂ ರಾಮಪ್ಪ ನಡುವಿನಮನಿ, ಕೆನರಾ ಬ್ಯಾಂಕ್ ದೇಶಪಾಂಡೆ ಆರ್.ಸೆಟ್ ಮುಂಡಗೋಡದ ಕ್ಷೇತ್ರಾಧಿಕಾರಿ ಶಾಂತಕುಮಾರ ಹಾಗೂ ಜೇನು ಕೃಷಿ ಆಸಕ್ತ ಸುಮಾರು ೫೦ಕ್ಕೂ ಅಧಿಕ ರೈತರು ಭಾಗವಹಿಸಿದ್ದರು.