ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಹತ್ತು ವರ್ಷಗಳಲ್ಲಿ ಕೇಂದ್ರ ಸಚಿವರಾದ ಬೀದರ್ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಸಾಧನೆ ಶೂನ್ಯವಾಗಿದೆ. ಖೂಬಾ ಸಾಧನೆ ಕುರಿತು ಬಹಿರಂಗ ಚರ್ಚೆ ಮಾಡಲು ನಾನು ಸಿದ್ಧ ಎಂದು ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಡಾ. ದಿನಕರ ಮೋರೆ ಚರ್ಚೆಗೆ ಪಂಥಾಹ್ವಾನ ನೀಡಿದರು.ನಗರದ ಪತ್ರಿಕಾ ಭವನದಲ್ಲಿ ಬೀದರ್ ಸ್ವಾಭಿಮಾನಿ ಆಘಾಡಿ ವತಿಯಿಂದ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಿಯಾಗಿ ಸೋಲಾರ್ ಪಾರ್ಕ್ ಸ್ಥಾಪನೆ ಮಾಡಲಿಲ್ಲ. ರಾಸಾಯನಿಕ ರಸಗೊಬ್ಬರ ಕಾರ್ಖಾನೆ ಸ್ಥಾಪನೆ ಮಾಡಲಿಲ್ಲ. ಕನಿಷ್ಠ ಒಂದು ಸಾವಿರ ಯುವಕರಿಗೆ ಖೂಬಾ ಉದ್ಯೋಗ ನೀಡಬಹುದಾಗಿತ್ತು, ಆದರೆ ನೀಡಲಿಲ್ಲ. ಯಾರೊಂದಿಗೂ ವಿನಯದಿಂದ ಮಾತನಾಡಲಿಲ್ಲ. ತನ್ನ ಅವಧಿಯಲ್ಲಿ ಖೂಬಾ ಅವರು ಮಿತ್ರರಿಗಿಂತ ಶತ್ರುಗಳನ್ನೇ ಹುಟ್ಟು ಹಾಕಿದ್ದಾರೆ. ಖೂಬಾ ಅಧಿಕಾರದ ಮದದಲ್ಲಿ ಮುಳುಗಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು.
ಭಗವಂತ ಖೂಬಾ ತಮ್ಮ ಮುಂದಿನ ಯೋಜನೆಗಳ ಬಗ್ಗೆ ಒಮ್ಮೆಯೂ ಮಾತನಾಡಿರುವುದನ್ನು ನಾನು ಎಲ್ಲಿಯೂ ಕೇಳಿಲ್ಲ. ಇನ್ನು ಖಂಡ್ರೆಯವರು ಕುಟುಂಬ ರಾಜಕಾರಣದಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ನನಗೆ ಅಧಿಕಾರಕ್ಕೆ ತಂದರೆ ಪಿಎಚ್‌ಡಿ, ಎಂಎಸ್ ಕೋರ್ಸ್‌ಗಳನ್ನು ಜಿಲ್ಲೆಗೆ ತರುವೆ. ನವಜಾತ ಶಿಶುಗಳ ಮರಣ ಪ್ರಮಾಣ ಕಡಿಮೆ ಮಾಡಿ ಮೂರು ಸಾವಿರ ರೀತಿಯ ರೋಗಗಳು ಬಾರದಂತೆ ನೋಡಿಕೊಳ್ಳುವೆ. ಐಟಿ ಹಬ್ ಸ್ಥಾಪನೆ, ಭಾಲ್ಕಿಯಲ್ಲಿ ಸ್ಟೇಡಿಯಂ ನಿರ್ಮಿಸುವ ಪ್ರಯತ್ನ ಮಾಡುವೆ ಎಂದರು.ಬಿಜೆಪಿಗೆ ಮತ ನೀಡುತ್ತ ಬಂದರೂ ಮರಾಠಿಗರಾದ ನಮಗೇ ಏಕೆ ಅನ್ಯಾಯ ಮಾಡಲಾಗುತ್ತಿದೆ. ನಾವೇನು ರೋಹಿಂಗ್ಯಾಗಳಾ? ಎಂದು ಪ್ರಶ್ನಿಸಿದರು. ಕ್ಷೇತ್ರದ ಜನತೆ ಆಶೀರ್ವದಿಸಿ ಎಂದು ಡಾ. ದಿನಕರ ಮೋರೆ ತಿಳಿಸಿದರು.
ಮರಾಠಾ ಸಮಾಜದ ಮುಖಂಡರಾದ ಪದ್ಮಾಕರ ಪಾಟೀಲ್ ಮಾತನಾಡಿ, ನಮ್ಮ ಸ್ಪರ್ಧೆ ನೇರವಾಗಿ ಕಾಂಗ್ರೆಸ್ ಜೊತೆಗಿದೆ. ಕ್ಷೇತ್ರದಲ್ಲಿ ಬಿಜೆಪಿ ಮೂರನೇ ಸ್ಥಾನದಲ್ಲಿದೆ. ಖೂಬಾ ಯುವಕರಿಗಾಗಿ ಮತ್ತು ವಿದ್ಯಾರ್ಥಿಗಳಿಗಾಗಿ ಏನೂ ಮಾಡಿಲ್ಲ. ಬರೀ ಮೋದಿ ಹೆಸರಿನ ಮೇಲೆ ಗೆದ್ದು ಲಿಂಗಾಯತ ಖೋಟಾದಡಿ ಮಂತ್ರಿ ಪದವಿ ಗಿಟ್ಟಿಸಿಕೊಂಡಿದ್ದಾರೆ ಎಂದು ಆಪಾದಿಸಿದರು. ಮೋದಿಯವರು ಈ ದೇಶಕ್ಕಾಗಿ ಮಾಡಿದ ತ್ಯಾಗ ಮತ್ತು ಸಮರ್ಪಣಾಭಾವದ ಮೇಲೆ ಖೂಬಾ ಮೆರೆಯುತ್ತಿದ್ದಾರೆ ಎಂದರು.ಜನಧ್ವನಿ ಸಂಘಟನೆಯ ಅಧ್ಯಕ್ಷ ಅಂಕುಶ ಗೋಖಲೆ ಮಾತನಾಡಿದರು. ಇದೇ ವೇಳೆ ಮುಖಂಡರಾದ ಜನಾರ್ದನ ಬಿರಾದಾರ, ಡಾ. ಬಾಲಾಜಿ ಸಾವಳೆಕರ್, ಶರಣಪ್ಪ ಕಡಗಂಚಿ, ರಾವುಸಾಹೇಬ್ ಬಿರಾದಾರ, ಸೈಯದ್ ಆಷ್ಪಾಕ್ ಭರತ ತುಕದೆ ಸೇರಿದಂತೆ ಇತರರು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))