7 ತಿಂಗಳಲ್ಲಿ 40 ಕೋಟಿ ರು.ಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ: ತಮ್ಮಯ್ಯ

| Published : Jan 02 2024, 02:15 AM IST

7 ತಿಂಗಳಲ್ಲಿ 40 ಕೋಟಿ ರು.ಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ: ತಮ್ಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಸೋಮವಾರ ಕ್ಷೇತ್ರದ ಲಕ್ಯಾ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ನೂತನ ಪಶು ಚಿಕಿತ್ಸಾಲಯ ಉದ್ಘಾಟಿಸಿದ ಶಾಸಕ ಎಚ್.ಡಿ. ತಮ್ಮಯ್ಯ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ 7 ತಿಂಗಳಲ್ಲಿ ಸುಮಾರು 40 ಕೋಟಿ ರು. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕ್ಷೇತ್ರದ ಲಕ್ಯಾ ಹೋಬಳಿ ಒಂದರಲ್ಲೇ ಪ್ರಾರಂಭಿಸಿದ್ದೇವೆ ಎಂದು ಹೇಳಿದರು.

-ಲಕ್ಯಾ ಗ್ರಾಮದಲ್ಲಿ ನೂತನ ಪಶು ಚಿಕಿತ್ಸಾಲಯ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ 7 ತಿಂಗಳಲ್ಲಿ ಸುಮಾರು 40 ಕೋಟಿ ರು. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕ್ಷೇತ್ರದ ಲಕ್ಯಾ ಹೋಬಳಿ ಒಂದರಲ್ಲೇ ಪ್ರಾರಂಭಿಸಿದ್ದೇವೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.

ಸೋಮವಾರ ಕ್ಷೇತ್ರದ ಲಕ್ಯಾ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ನೂತನ ಪಶು ಚಿಕಿತ್ಸಾಲಯ ಉದ್ಘಾಟಿಸಿ ಮಾತನಾಡಿದರು.

ಬಹಳ ವರ್ಷಗಳ ಕನಸಾಗಿದ್ದ ಪಶು ಆಸ್ಪತ್ರೆ ಇಂದು ನೆರವೇರಿದೆ. ಜಿಲ್ಲೆಗೆ ಮಂಜೂರಾಗಿ ಬಂದಿರುವುದು ಒಂದೇ ಆಸ್ಪತ್ರೆ. ಅದು ಚಿಕ್ಕಮಗಳೂರು ಕ್ಷೇತ್ರದ ಲಕ್ಯಾ ಗ್ರಾಮಕ್ಕೆ ಈ ಹೋಬಳಿ ಜನರು ಕೊಟ್ಟ ಜವಾಬ್ದಾರಿ ಶಾಸಕರಾಗಿ ಶಕ್ತಿ ಕೊಟ್ಟಿದ್ದರಿಂದ ಇದು ಕಾರ್ಯರೂಪಕ್ಕೆ ಬಂದಿದೆ ಎಂದರು.

ಗ್ರಾಮಸ್ಥರ ಪರಿಶ್ರಮಕ್ಕೆ ದೊರೆತ ತಕ್ಕ ಫಲ ಇದು ಎಂದ ಅವರು, ಇನ್ನು ಮುಂದೆ ಲಕ್ಯಾ ಗ್ರಾಮದಲ್ಲಿ ಒಂದೊಂದೇ ಕಾಮಗಾರಿ ಪ್ರಾರಂಭವಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಧಿಕಾರಕ್ಕೆ ಬಂದ 7 ತಿಂಗಳಲ್ಲಿ ಸರ್ಕಾರ ವಾರ್ಷಿಕ 59 ಸಾವಿರ ಕೋಟಿ ರು. ವೆಚ್ಚದಲ್ಲಿ ಚುನಾವಣಾ ಪೂರ್ವದಲ್ಲಿ ಮತದಾರರಿಗೆ ಕೊಟ್ಟಿದ್ದ 5 ಗ್ಯಾರಂಟಿ ಭರವಸೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಇನ್ನು ಮುಂದೆ ಅಭಿವೃದ್ಧಿ ಕಡೆಗೆ ಗಮನಹರಿಸುತ್ತೇವೆ ಎಂದು ತಿಳಿಸಿದರು.

ರೈತ ದಿನದಂದು ಪಶು ಚಿಕಿತ್ಸಾಲಯ ಉದ್ಘಾಟನೆಗೊಂಡಿರುವುದು ಸಂತಸ ತಂದಿದೆ. ಗ್ರಾಮಸ್ಥರ ಇದೇ ಸಹಕಾರ ಮುಂದೆಯೂ ಇದ್ದರೆ ಈ ಭಾಗದ ಕೆರೆ ತುಂಬಿಸುವ ಕೆಲಸ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಪಶುಸಂಗೋಪನೆ ಇಲಾಖೆ ಉಪ ನಿರ್ದೇಶಕ ಡಾ. ಮೋಹನ್‌ಕುಮಾರ್‌ ಮಾತನಾಡಿ, ಹೋಬಳಿ ಕೇಂದ್ರ ದಲ್ಲಿ ಇಂದು ಪಶುಚಿಕಿತ್ಸಾ ಆಸ್ಪತ್ರೆ ಉದ್ಘಾಟನೆಗೊಂಡಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯುವಂತೆ ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಕ್ಯಾ ಗ್ರಾಮ ಪಂಚಾಯ್ತಿ ಅಧ್ಯಕ್ಷ ಹನೀಫ್ ವಹಿಸಿದ್ದರು. ಸದಸ್ಯರಾದ ದಿನೇಶ್, ಶಶಿಧರ್, ಈರಮ್ಮ, ಶೋಭಾ, ನಾಗರಾಜ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮಲ್ಲೇಗೌಡ, ಸಹಾಯಕ ನಿರ್ದೇಶಕ ಡಾ. ಹೇಮಂತ್, ಗ್ರಾಪಂ ಮಾಜಿ ಅಧ್ಯಕ್ಷ ಕಾಂತರಾಜು ಉಪಸ್ಥಿತರಿದ್ದರು. 1 ಕೆಸಿಕೆಎಂ 4

ಚಿಕ್ಕಮಗಳೂರಿನ ಲಕ್ಯಾ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪಶು ಚಿಕಿತ್ಸಾಲಯವನ್ನು ಶಾಸಕ ಎಚ್‌.ಡಿ. ತಮ್ಮಯ್ಯ ಉದ್ಘಾಟಿಸಿದರು.