ಸಾರಾಂಶ
ಹಾನಗಲ್ಲ: ಚಟುವಟಿಕೆಯುಕ್ತ ಬೋಧನೆಯಿಂದ ಮಾತ್ರ ಮಕ್ಕಳ ಮನಸ್ಸಿನಲ್ಲಿ ವಿಷಯಗಳನ್ನು ಸರಾಗವಾಗಿ ಕಟ್ಟಿಡಲು ಸಾಧ್ಯ ಎಂಬುದು ಸಾರ್ವಕಾಲಿಕ ಸತ್ಯವಾಗಿದ್ದು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶೈಕ್ಷಣಿಕ ಸ್ಪರ್ಧೆಗೆ ಒಡ್ಡಿಕೊಳ್ಳುವವರು ಮಾತ್ರ ಉನ್ನತ ಮಟ್ಟದ ಸಾಧನೆ ಮಾಡಲು ಸಾಧ್ಯ ಎಂದು ಡಾ. ರಾಘವೇಂದ್ರ ಮಾಡಳ್ಳಿ ತಿಳಿಸಿದರು.ಶನಿವಾರ ಹಾನಗಲ್ಲ ತಾಲೂಕಿನ ಗಡೆಗುಂಡಿಯಲ್ಲಾಪುರದ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಾನಗಲ್ಲಿನ ಕೆಎಚ್‌ಬಿ ಕಾಲನಿ ಗೆಳೆಯರ ಬಳಗದ ಸಹಯೋಗದಲ್ಲಿ ಡಾ. ರಾಘವೇಂದ್ರ ಮಾಡಳ್ಳಿ ಅವರಿಗೆ ಪಿಎಚ್‌ಡಿ ಪ್ರದಾನವಾದ ಕಾರಣಕ್ಕೆ ಗೌರವ ಸನ್ಮಾನ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಸಮಾಜ ನಿರ್ಮಾಣದಲ್ಲಿ ಶಿಕ್ಷಣದ ಪಾತ್ರ ಮಹತ್ವದ್ದಾಗಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಹತ್ತು ಹಲವು ಉಪಯುಕ್ತ ಯೋಜನೆಗಳಿವೆ. ಅವುಗಳ ಅನುಷ್ಠಾನ ಅತ್ಯಂತ ಮುಖ್ಯವಾದುದು. ಇತ್ತೀಚಿನ ದಿನಗಳಲ್ಲಿ ಸಮಯದ ಹರಣ ಒಂದು ಶಾಪವಾಗಿ ಪರಿಣಮಿಸಿದೆ. ಮೊಬೈಲ್ ಸಂಗಾತದಿಂದಾಗಿ ಓದಿಗೆ ಮಕ್ಕಳ ಹಿನ್ನಡೆ ತೀರ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಮಾನವೀಯ ಸಂಬಂಧಗಳು ದೂರವಾಗುತ್ತಿದ್ದು, ವೈಚಾರಿಕತೆ ದೂರವಾಗುತ್ತಿರುವ ಈ ಕಾಲದಲ್ಲಿ ನಾಳೆಗಳು ಅರ್ಥ ಕಳೆದುಕೊಳ್ಳುತ್ತಿವೆ ಎಂದರು.ಮುಖ್ಯ ಅತಿಥಿಯಾಗಿ ಮಾತನಾಡಿದ ಸಾಹಿತಿ ಮಾರುತಿ ಶಿಡ್ಲಾಪೂರ, ಶಿಸ್ತು ಸಂಯಮ ಕಳೆದುಕೊಂಡು ಬದುಕಿನ ಅರ್ಥವನ್ನೇ ಹಾಳು ಮಾಡಿಕೊಳ್ಳುವ ಸಂದರ್ಭಗಳೇ ಈಗ ಹೆಚ್ಚಾಗಿರುವಾಗ ಉತ್ತಮ ಓದು, ಅಧ್ಯಯನಕ್ಕೆ ಅರ್ಥವಿಲ್ಲದಂತಾಗಿದೆ. ಪುಸ್ತಕಗಳ ಓದಿಗೆ ಹಿನ್ನಡೆಯಾಗುತ್ತಿದೆ. ವಿದ್ಯಾವಂತರಿಗೆ ಗೌರವ ಸಿಗುವ ಕಾಲ ಬರಬೇಕಾಗಿದೆ. ಅಧ್ಯಯನಕ್ಕೆ ತಕ್ಕ ಸಮ್ಮಾನಗಳು ಸಲ್ಲಬೇಕು. ಮನುಷ್ಯ ಮಾನವೀಯ ಸಂಬಂಧಗಳನ್ನು ಗಟ್ಟಿಯಾಗಿ ಉಳಿಸಿಕೊಳ್ಳುವ, ನೀತಿ ನಿಯತ್ತುಗಳನ್ನು ಕಟ್ಟಿಕೊಂಡು ಬದುಕು ನಡೆಸುವ ಇಚ್ಛಾಶಕ್ತಿ ಹೊಂದಿಬೇಕಾಗಿದೆ ಎಂದರು.ಶ್ರೀ ಕುಮಾರೇಶ್ವರ ಕಲಾ ವಾಣಿಜ್ಯ ಮಹಾವಿದ್ಯಾಲಯದ ಉಪನ್ಯಾಸಕ ಹೊನ್ನಪ್ಪ ಬೋವಿ ಮಾತನಾಡಿ, ವಿದ್ಯೆ ಸಾರ್ವಕಾಲಕ್ಕೂ ಗೌರವ ತಂದುಕೊಡುವಂತಹದ್ದು, ಅಧ್ಯಯನದ ಮೂಲಕ ಇತಿಹಾಸ ಸಂಸ್ಕೃತಿಯನ್ನು ತಿಳಿಯಬೇಕಾಗಿದೆ. ಸಾಧಕರನ್ನು ಗೌರವಿಸುವ ಸದ್ಗುಣ ಈ ಸಮಾಜದ್ದಾಗಬೇಕು ಎಂದರು.ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ಎನ್.ವಿ. ಅಗಸನಹಳ್ಳಿ, ಬಸಪ್ಪ ಕೂಡಲ, ಜೆ.ಆರ್. ಗೂಳಿಯವರ, ಎಸ್.ವಿ. ಲಿಂಗಾಪೂರ, ಎನ್.ಎಚ್. ಬಸವರಾಜ, ಆರ್.ಬಿ. ಹನುಮರಡ್ಡೇರ, ಕುಮಾರ ಗೋಣೀಮಠ, ಎಸ್.ಕೆ. ದೊಡ್ಡಮನಿ, ಜೆ.ಜೆ. ಆನಂದಕುಮಾರ, ಎಸ್.ಎಸ್. ಹಿರೇಮಠ, ಟಿ. ಶಿವಕುಮಾರ, ಎಸ್.ಜಿ. ಅನಿಲಕುಮಾರ, ಎಂ.ಸಿ. ನಾಯಕ, ಮಾಲತೇಶ ನಾಯಕ, ಎಂ.ಎಸ್. ಓಲೆಕಾರ, ಸಿದ್ದಲಿಂಗೇಶ ಕಾಯಕದ, ಎಸ್.ವಿ.ಮಠದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.