ಸಾರಾಂಶ
ಸಣ್ಣ ಖರ್ಗೆ ಕಾಂಗ್ರೆಸ್‌ನಲ್ಲಿರುವ ಎಲ್ಲ ದುರ್ಗುಣಗಳನ್ನು ಮೈಗೂಡಿಸಿಕೊಂಡಿದ್ದಾರೆ. ಹೀಗಾಗಿ ಈ ರೀತಿಯೆಲ್ಲ ಹೇಳಿಕೆ ನೀಡುತ್ತಿದ್ದಾರೆ. ಮೊದಲು ಕಾಂಗ್ರೆಸ್ ಕೆಲಸಗಳ ಬಗ್ಗೆ ತಿಳಿದುಕೊಳ್ಳುವುದು ಒಳಿತು.
ಹುಬ್ಬಳ್ಳಿ:
ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಚಾರ ಮಂತ್ರಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿರುವುದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಬಿ. ಶ್ರೀರಾಮುಲು, ಸಣ್ಣ ಖರ್ಗೆ ಅಧ್ಯಯನ ಮಾಡಿ ಮಾತನಾಡಬೇಕು. ಈ ರೀತಿ ದುರ್ಬದ್ಧಿಯಿಂದ ಮಾತನಾಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದ್ದಾರೆ.ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಣ್ಣ ಖರ್ಗೆ ಕಾಂಗ್ರೆಸ್‌ನಲ್ಲಿರುವ ಎಲ್ಲ ದುರ್ಗುಣಗಳನ್ನು ಮೈಗೂಡಿಸಿಕೊಂಡಿದ್ದಾರೆ. ಹೀಗಾಗಿ ಈ ರೀತಿಯೆಲ್ಲ ಹೇಳಿಕೆ ನೀಡುತ್ತಿದ್ದಾರೆ. ಮೊದಲು ಕಾಂಗ್ರೆಸ್ ಕೆಲಸಗಳ ಬಗ್ಗೆ ತಿಳಿದುಕೊಳ್ಳುವುದು ಒಳಿತು. ಅಂಬೇಡ್ಕರ್‌ರನ್ನು ಸೋಲಿಸಿರುವುದು ಕಾಂಗ್ರೆಸ್ ಅಲ್ಲವೇ? ಎಂದು ಪ್ರಶ್ನಿಸಿದರು.
ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲುತ್ತದೆ ಎಂದು ಸಮೀಕ್ಷೆ ಹೇಳುತ್ತಿದೆ ಎಂಬ ಪ್ರಶ್ನೆಗೆ, ಕಲ್ಯಾಣ ಕರ್ನಾಟಕ ಅಷ್ಟೇ ಅಲ್ಲ ಇಡೀ ಕರ್ನಾಟಕದ ಎಲ್ಲ ಸ್ಥಾನಗಳಲ್ಲೂ ಬಿಜೆಪಿ ಅಭ್ಯರ್ಥಿಗಳೇ ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ನಿಲ್ಲಬೇಕಿತ್ತು. ಆದರೆ ಬೇರೆ ಬೇರೆ ಕಾರಣಗಳಿಂದ ಅವರು ನಿಲ್ಲದೇ ಅಳಿಯನನ್ನು ಕಣಕ್ಕಿಳಿಸಿದ್ದಾರೆ. ಆದರೆ ಅಳಿಯ ಜನರ ಮಧ್ಯೆ ಇದ್ದ ವ್ಯಕ್ತಿಯಲ್ಲ. ಹೀಗಾಗಿ ಅಲ್ಲಿ ಬಿಜೆಪಿ ಗೆಲ್ಲುತ್ತದೆ. ಅದರಂತೆ ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ ಹೀಗೆ ಕಲ್ಯಾಣ ಕರ್ನಾಟಕದಲ್ಲಿ ಎಲ್ಲ ಸ್ಥಾನಗಳಲ್ಲಿ ಬಿಜೆಪಿಯೇ ಗೆಲ್ಲಲಿದೆ ಎಂದರು.
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳೆಲ್ಲ ಮತಗಳಾಗಿ ಪರಿವರ್ತನೆಯಾಗುತ್ತವೆ ಎಂಬ ಭಾವನೆ ಕಾಂಗ್ರೆಸ್ಸಿನದು. ಆದರೆ ಆ ರೀತಿ ಆಗಲ್ಲ. ಮೋದಿ ಗ್ಯಾರಂಟಿಯೇ ಇಲ್ಲಿ ನಡೆಯುವುದು. ಮೋದಿ ಮುಂದೆ ಇವರ ಯಾವ ಗ್ಯಾರಂಟಿಯೂ ಕೆಲಸ ಮಾಡುವುದಿಲ್ಲ. ಹೀಗಾಗಿ ರಾಜ್ಯದ 28 ಕ್ಷೇತ್ರಗಳಲ್ಲೂ ಬಿಜೆಪಿಯೇ ಗೆಲ್ಲಲಿದೆ ಎಂದರು.ಬಿಜೆಪಿಗೆ ಹೋದ ತಕ್ಷಣ ಜನಾರ್ದನ ರೆಡ್ಡಿ ಶುದ್ಧರಾಗಿ ಬಿಡುತ್ತಾರೆಯೇ ಎಂದು ಸಚಿವ ಸಂತೋಷ ಲಾಡ್ ಮಾಡಿರುವ ಟೀಕೆಗೆ, ಲಾಡ್ ಕೂಡ ಗಣಿಗಾರಿಕೆ ಎಂಬ ಶಾಲೆಯಲ್ಲಿ ಕಲಿತವರು. ಹೀಗಾಗಿ ಈ ರೀತಿಯೆಲ್ಲ ಮಾತನಾಡಬಾರದು ಎಂದರು.
ಕೋರ್ಟ್‌ನಲ್ಲಿ ತಪ್ಪಿತಸ್ಥ ಎಂದು ರೆಡ್ಡಿ ಅವರ ವಿರುದ್ಧ ತೀರ್ಪು ಬಂದಿಲ್ಲ. ಹಾಗೆ ನೋಡಿದರೆ ಅವರದೇ ಪಕ್ಷದ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಡಿ.ಕೆ. ಶಿವಕುಮಾರ ಮೇಲೂ ಕೇಸ್‌ಗಳಿವೆ. ಮೊದಲು ಅವುಗಳ ಬಗ್ಗೆ ತಿಳಿದುಕೊಳ್ಳಲಿ. ವಿನಾಕಾರಣ ಏನೇನೋ ಮಾತನಾಡುವುದು ಸರಿಯಲ್ಲ ಎಂದು ನುಡಿದರು.