ಸಾರಾಂಶ
ಶಿವಮೊಗ್ಗ: ಪ್ರಧಾನಿ ಮೋದಿ ಅವರಿಗಿಂತ ಹಿಂದುತ್ವದ ನಾಯಕ ಇನ್ನಾರು ಇದ್ದಾರೆ? ಅವರ ಪಕ್ಷಕ್ಕಿಂತ ಹಿಂದುತ್ವದ ಪಕ್ಷ ಇನ್ನಾವುದಿದೆ? ಕೆಲವು ಗೊಂದಲಗಳಿಂದ ಒಬ್ಬಿಬ್ಬರು ಆಚೀಚೆ ಆಗಿರಬಹುದು. ಸ್ವಾಮೀಜಿ ಅವರು ಆಶೀರ್ವಾದ ಮಾಡಿರಬಹುದು. ಆದರೆ ಒಂದಂತೂ ಸತ್ಯ, ಒಂದು ಮತವೂ ಆಚೀಚೆ ಆಗುವುದಿಲ್ಲ ಎಂದು ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಪ್ರಜಾಪ್ರಭುತ್ವ ರಾಷ್ಟ್ರ. ಅದೇ ಮಾದರಿಯಲ್ಲಿ ಚುನಾವಣೆ ನಡೆಯುತ್ತದೆ. ಯಾರಿಗೆ ಬೇಕಾದರೂ ಮೋದಿಜಿಯವರ ಫೋಟೋ ಹಾಕಿಕೊಳ್ಳಬಹುದು. ಆದರೆ ನಾನು ಬಿಜೆಪಿಯ ಅಧಿಕೃತ ಅಭ್ಯರ್ಥಿ ನನಗೆ ಮಾತ್ರ ಫೋಟೋ ಹಾಕಿಕೊಳ್ಳುವ ನಿಜವಾದ ಅಧಿಕಾರ ಇರುವುದು ಎಂದು ಹೇಳಿದರು.ಈಶ್ವರಪ್ಪ ಅವರ ನಾಮಪತ್ರ ಮೆರವಣಿಗೆಗೆ ಅಪಾರ ಸಂಖ್ಯೆಯಲ್ಲಿ ಜನ ಸೇರಿರುವುದರ ಕುರಿತು ಪ್ರತಿಕ್ರಿಯಿಸಿದ ಅವರು, ಯಾರು ಬೇಕಾದರೂ ಜನ ಸೇರಿಸಬಹುದು. ಅದಕ್ಕೆ ನಾನೇಕೆ ತಲೆ ಕೆಡಿಸಿಕೊಳ್ಳಲಿ. ಜನ ಸೇರುವುದು ಮುಖ್ಯವಲ್ಲ. ಅದು ಮತವಾಗಿ ಪರಿವರ್ತನೆಯಾಗಬೇಕು. ಆ ಕೆಲಸವನ್ನು ನಾವು ಮಾಡುತ್ತೇವೆ. ಕಳೆದ ವಾರದ ತಾಲೂಕು ಕೇಂದ್ರವಾದ ಸಾಗರದಲ್ಲಿ ಹಿಂದುಳಿದ ವರ್ಗದವರ ಸಮಾವೇಶದಲ್ಲಿ ಸುಮಾರು 25 ಸಾವಿರ ಜನ ಸೇರಿದ್ದರು. ಮೋದಿಜಿಯವರ ಕಾರ್ಯಕ್ರಮದಲ್ಲಿ ಎರಡು ಲಕ್ಷ ಜನ ಸೇರಿದ್ದರು ಎಂದರು.
ಹಿಂದುತ್ವದ ಹೆಸರನ್ನು ಹೇಳಿಕೊಂಡು ಯಾರು ಬೇಕಾದರೂ ಹೋಗಲಿ. ಆದರೆ ಜನರು ಪ್ರಜ್ಞಾವಂತರಿದ್ದಾರೆ. ಬುದ್ಧಿವಂತರಿದ್ದಾರೆ. ನಾನು ಪಕ್ಷದ ಅಧಿಕೃತ ಅಭ್ಯರ್ಥಿ. ಹಿಂದುತ್ವಕ್ಕೆ ಹೆಸರಾದ ಮೋದಿಯವರಿಗಿಂತ ಬೇರೆ ರೋಲ್‌ಮಾಡೆಲ್ ಬೇಕಾ? ಎಂದ ಅವರು ನಮಗೆ ವಿಶ್ವಾಸ ನರೇಂದ್ರ ಮೋದಿ, ಅವರ ಅಭಿವೃದ್ಧಿ ಕಾರ್ಯಕ್ರಮಗಳು, ಪಕ್ಷದ ಚಿನ್ಹೆಯಾದ ಕಮಲದ ಹೂವು, ಕಾರ್ಯಕರ್ತರು, ಯಡಿಯೂರಪ್ಪ ಅವರ ಅಭಿವೃದ್ಧಿ ಕಾರ್ಯಗಳು ಹಾಗೂ ಜನರ ಮಧ್ಯೆ ನಾನು ಇಟ್ಟುಕೊಂಡಿರುವ ಸಂಪರ್ಕಗಳು ಎಂದು ರಾಘವೇಂದ್ರ ಹೇಳಿದರು.ಮೋದಿ ಹಿಂದುತ್ವದ ಪಕ್ಷಕ್ಕಿಂತ ದೊಡ್ಡದು ಯಾವುದೂ ಇಲ್ಲ. ಅದನ್ನು ಪ್ರಶ್ನೆ ಮಾಡಲು ಯಾರಿಗೂ ಅವಕಾಶವಿಲ್ಲ. ಸ್ವಾರ್ಥಕ್ಕೋಸ್ಕರ, ಚುನಾವಣೆಗೋಸ್ಕರ, ಯಾರಿಗೋ ಖುಷಿಯಾದಾಗ ಹಿಂದುತ್ವ ನನ್ನ ರಕ್ತದಲ್ಲಿ ಹರಿಯುತ್ತಿದೆ ಎನ್ನುವುದು, ಇನ್ನಾವಗಲೋ ಯಾರಿಗೋ ಬಯ್ಯುವುದರಲ್ಲಿ ಅರ್ಥವಿಲ್ಲ ಎಂದು ಪರೋಕ್ಷವಾಗಿ ಈಶ್ವರಪ್ಪನವರಿಗೆ ಟಾಂಗ್ ನೀಡಿದರು.
ದಾರಿಯಲ್ಲಿ ಹೋಗುವವರು ಯಾರೋ ಏನೇನೋ ಮಾತನಾಡುತ್ತಾರೆ ಎಂದು ನಾನು ಪ್ರತಿಕ್ರಿಯಿಸುವುದಿಲ್ಲ. ನಮ್ಮ ಸಂಘಟನೆಯ ಮುಖಂಡರು ಯಾವ ಸಂದರ್ಭದಲ್ಲಿ ಏನು ಮಾಡಬೇಕೋ ಅದನ್ನೇ ಮಾಡುತ್ತಾರೆ. ಆದರೆ ಪತ್ರಿಕಾಗೋಷ್ಠಿಗಳಲ್ಲಿ ದಾಖಲೆ ಇಟ್ಟುಕೊಳ್ಳದೆ ಏನೇನೋ ಆರೋಪ ಮಾಡುವುದು ಸರಿಯಲ್ಲ ಎಂದರು.ಏ.14ರಂದು ಬೆಂಗಳೂರಿನಲ್ಲಿ ಸಭೆ: ಭಾನುವಾರ ಬೆಂಗಳೂರು ಪ್ಯಾಲೇಸ್ ಗ್ರೌಂಡ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಮತ್ತು ಬೈಂದೂರು ವಿಧಾನಸಭಾ ಕ್ಷೇತ್ರದ ಜನರ ಸಮಾವೇಶ ಆಯೋಜಿಸಲಾಗಿದೆ. ಸುಮಾರು 5-6 ಸಾವಿರ ಜನ ಸೇರಲಿದ್ದಾರೆ ಎಂದರು.
ಏ.18 ರಂದು ನಾಮಪತ್ರ: 18ರಂದು ನಾಮಪತ್ರ ಸಲ್ಲಿಸಲಿದ್ದೇನೆ. ಇದಕ್ಕೆ ಸಿದ್ದತೆಗಳು ನಡೆಯುತ್ತಿವೆ. ಈ ಮೂಲಕ ಚುನಾವಣಾ ಅಖಾಡ ಸಿದ್ಧವಾಗುತ್ತಿದೆ ಎಂದು ತಿಳಿಸಿದರು.