ಸವಾರರನ್ನು ಬೆದರಿಸಿ ಸರಗಳ್ಳತನ ಮಾಡುತ್ತಿದ್ದ ಇಬ್ಬರ ಬಂಧನ

| Published : Apr 14 2024, 01:51 AM IST

ಸಾರಾಂಶ

ಆರೋಪಿಗಳು ರಾಮನಗರ ಜಿಲ್ಲೆಯ ಚನ್ನಪಟ್ಟಣದ ಹೂರವಲಯದ ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಏ. 3 ರಂದು ದಂಪತಿ ಪ್ರಯಾಣಿಸುತ್ತಿದ್ದ ಕಾರನ್ನು ಅಡಗಟ್ಟಿ ಲಾಂಗ್ ತೋರಿಸಿ ಕಣ್ಣಿಗೆ ಪೆಪ್ಪರ್ ಸ್ಪ್ರೇ ಮಾಡಿ ಮಹಿಳೆಯ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಸುಲಿಗೆ ಮಾಡಿದ್ದರು.

ಮದ್ದೂರು: ನೆರೆಯ ಜಿಲ್ಲೆ ಮತ್ತು ಸ್ಥಳೀಯ ಪೊಲೀಸ್ ಠಾಣೆಗಳ ವ್ಯಾಪ್ತಿಯ ಹೆದ್ದಾರಿಗಳಲ್ಲಿ ವಾಹನ ಸವಾರರನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಬೆದರಿಸಿ ಸರಗಳ್ಳತನ ಮಾಡುತ್ತಿದ್ದ ಇಬ್ಬರು ದುಷ್ಕರ್ಮಿಗಳನ್ನು ಮದ್ದೂರು ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ವಡ್ಡರದೊಡ್ಡಿ ಗ್ರಾಮದ ಪ್ರಮೋದ್ (25) ಹಾಗೂ ರಾಮನಗರ ಜಿಲ್ಲೆ ಚನ್ನಪಟ್ಟಣದ ಅಭಿ (22) ಬಂಧಿತರು. ಕಳೆದ ಏ. 3 ರಂದು ತಾಲೂಕಿನ ರುದ್ರಾಕ್ಷಿಪುರ ಗೇಟ್ ಬಳಿ ಬೈಕ್ ಅಪಹರಣ ಪ್ರಕರಣ ದಾಖಲು ಮಾಡಿಕೊಂಡಿದ್ದರು‌. ನಂತರ ಆರೋಪಿಗಳ ಪತ್ತೆಗೆ ಸರ್ಕಲ್ ಇನ್ಸ್ ಪೆಕ್ಟರ್ ಗಳಾದ ಕೆ.ಆರ್.ಪ್ರಸಾದ್ ಮತ್ತು ವೆಂಕಟೇಗೌಡ ನೇತೃತ್ವದಲ್ಲಿ ಅಪರಾಧ ವಿಭಾಗದ ಪೊಲೀಸರ ವಿಶೇಷ ತಂಡವನ್ನು ರಚಿಸಲಾಗಿತ್ತು. ಇಬ್ಬರು ಆರೋಪಿಗಳು ಪಟ್ಟಣದ ಹೊರವಲಯದ ವೈದ್ಯನಾಥಪುರ ರಸ್ತೆಯ ಆರ್ಚ್ ಬಳಿ ಮತ್ತೊಂದು ಕೃತ್ಯ ನಡೆಸಲು ಹೊಂಚು ಹಾಕುತ್ತಿದ್ದಾಗ ಮಾಹಿತಿ ಅರಿತ ಅಪರಾಧ ಪತ್ತೆ ದಳದ ತಂಡ ಇಬ್ಬರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಹೆದ್ದಾರಿಗಳಲ್ಲಿ ವಾಹನ ಸವಾರರನ್ನು ಅಡ್ಡಗಟ್ಟಿ ಚಿನ್ನಾಭರಣ ಲೂಟಿ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.

ಸದರಿ ಆರೋಪಿಗಳು ರಾಮನಗರ ಜಿಲ್ಲೆಯ ಚನ್ನಪಟ್ಟಣದ ಹೂರವಲಯದ ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಏ. 3 ರಂದು ದಂಪತಿ ಪ್ರಯಾಣಿಸುತ್ತಿದ್ದ ಕಾರನ್ನು ಅಡಗಟ್ಟಿ ಲಾಂಗ್ ತೋರಿಸಿ ಕಣ್ಣಿಗೆ ಪೆಪ್ಪರ್ ಸ್ಪ್ರೇ ಮಾಡಿ ಮಹಿಳೆಯ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಸುಲಿಗೆ ಮಾಡಿದ್ದರು. ಇದಕ್ಕೂ ಮುನ್ನ ಕಳೆದ ಮಾರ್ಚ್ 8ರಂದು ಕೆ.ಎಂ .ದೊಡ್ಡಿ ಪೊಲೀಸ್ ಠಾಣೆ ವ್ಯಾಪ್ತಿಯ ಶೆಟ್ಟಿಹಳ್ಳಿ ಬಳಿ ಸಹೋದರನೊಂದಿಗೆ ಬೈಕ್ ನಲ್ಲಿ ಹಿಂದೆ ಕುಳಿತು ಪ್ರಯಾಣಿಸುತ್ತಿದ್ದ ಮಹಿಳೆಗೆ ಚಾಕು ತೋರಿಸಿ ಆಕೆ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಲೂಟಿ ಮಾಡಿ ಪರಾರಿಯಾಗಿದ್ದರು ಎಂದು ಪೊಲೀಸರ ವಿಚಾರಣೆ ಕಾಲದಲ್ಲಿ ಬೆಳಕಿಗೆ ಬಂದಿದೆ. ಬಂಧಿತ ಪ್ರಮೋದ್ ಹಾಗೂ ಅಭಿ ಅವರನ್ನು ವಿಚಾರಣೆ ನಂತರ ಮದ್ದೂರು ಜೆಎಂಎಸ್ ಸಿ ಎರಡನೇ ಅಪರ ಸಿವಿಲ್ ನ್ಯಾಯಾಧೀಶ ಎನ್. ವಿ. ಕೋನಪ್ಪ ಅವರ ಮುಂದೆ ಹಾಜರು ಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

--------------

13ಕೆಎಂಎನ್ ಡಿ20,21

ಬಂಧಿತ ಆರೋಪಿಗಳಾದ ಪ್ರಮೋದ್ ಹಾಗೂ ಅಭಿ