ಸಾರಾಂಶ
ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ- ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಚುನಾವಣಾ ಪ್ರಚಾರ
ಕನ್ನಡ ಪ್ರಭ ವಾರ್ತೆ, ಕಡೂರುದೇಶದ್ರೋಹಿ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದು ಕಾಂಗ್ರೆಸ್ ಪಕ್ಷದವರ ನಡವಳಿಕೆಯಾಗಿದ್ದು ಇದನ್ನು ಕೊನೆ ಗೊಳಿಸಲು ಮೋದಿಯವರು ಮತ್ತೆ ಪ್ರಧಾನಿ ಆಗಬೇಕು ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.
ಕಡೂರು ಸಮೀಪದ ಬಯಲು ಬಸಪ್ಪನ ದೇವಾಲಯದ ಬಳಿ ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ- ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಚುನಾವಣಾ ಪ್ರಚಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿರುವುದೇ ಸಿದ್ದರಾಮಯ್ಯನವರ ಸರ್ಕಾರದ ಸಾಧನೆಯಾಗಿದೆ. ಬಿಜೆಪಿ ಎಂದೂ ಮುಸ್ಲಿಮರನ್ನು ಗುರಿ ಯನ್ನಾಗಿಸಿಕೊಳ್ಳಲಿಲ್ಲ. ಅಬ್ದುಲ್ ಕಲಾಂ, ಇಬ್ರಾಹಿಂ ಸುತಾರ, ಶಿಶುನಾಳ ಶರೀಫರನ್ನು ಎದೆಯಲ್ಲಿಟ್ಟುಕೊಂಡವರು ನಾವು. ಆದರೆ ಕಾಂಗ್ರೆಸ್ ಯಾರನ್ನು ಎದೆಯಲ್ಲಿಟ್ಟುಕೊಂಡಿದೆ? ದೇಶದ್ರೋಹದ ಚಟುವಟಿಕೆಗಳನ್ನು ಪ್ರೋತ್ಸಾಹ ನೀಡುವುದು ಕಾಂಗ್ರೆಸ್ ಪಕ್ಷದವರ ನಡವಳಿಕೆ. ಇವೆಲ್ಲವನ್ನು ಕೊನೆಗೊಳಿಸಬೇಕಾದರೆ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗ ಬೇಕು. ಅದಕ್ಕಾಗಿ ಹಾಸನ ಕ್ಷೇತ್ರದಲ್ಲಿ ನಮ್ಮ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ಗೆಲ್ಲಿಸಲು ಎಲ್ಲರೂ ಶ್ರಮಿಸಬೇಕು ಎಂದರು.ದೇಶ ಮೊದಲು ಎನ್ನುವುದು ನಮ್ಮ ನೀತಿ. ರಾಷ್ಟ್ರ ಹಿತ ನಮ್ಮ ನೀತಿ. ಸ್ವಾರ್ಥ ರಾಜಕಾರಣ ಮಾಡಿದ ಕಾರಣಕ್ಕೆ 400 ಸಂಸದರಿದ್ದ ಕಾಂಗ್ರೆಸ್ 40 ಸ್ಥಾನ ಗಳಿಸಲು ತಿಣುಕಾಡಿತು. ಜೆಡಿಎಸ್ ತನ್ನ ಜಾತ್ಯತೀತ ತತ್ವಕ್ಕೆ ತಿಲಾಂಜಲಿ ಇಟ್ಟು ಬಿಜೆಪಿ ಜೊತೆ ಬಂದಿಲ್ಲ. ದೇಶದ ಹಿತಕ್ಕಾಗಿ ಆ ಪಕ್ಷ ಎನ್.ಡಿ.ಎ.ಭಾಗವಾಗಿದೆ ಎಂದರು.ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ ಮಾತನಾಡಿ, ದೇಶವಾಸಿಗಳಲ್ಲಿ ಜಾಗೃತಿ ಮೂಡಿದಾಗಲೆಲ್ಲ ರಾಜಕೀಯ ಪಕ್ಷಗಳು ಒಗ್ಗಟ್ಟಾಗಿವೆ. ಈಗ ಅಂತಹ ಪರಿಸ್ಥಿತಿ ಎದುರಾಗಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷ ಒಂದಾಗಿರುವ ಕಾರಣ ದೇಶ ಉಳಿಸಲು. ಯಾರ ವಿರುದ್ಧ ಟೀಕೆ ಟಿಪ್ಪಣಿ ಮಾಡದೆ ನಮ್ಮ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸುವ ಒಂದೇ ಗುರಿ ನಮ್ಮದಾಗಬೇಕು ಎಂದರು.ಮಾಜಿ ಶಾಸಕ ವೈ.ಎಸ್.ವಿ.ದತ್ತ ಮಾತನಾಡಿ, ದೇಶಕ್ಕೊಂದು ತುರ್ತು ಹಾಗು ಅನಿವಾರ್ಯತೆ ಬಂದೊದಗಿದೆ. ಅದಕ್ಕಾಗಿಯೇ ಜೆಡಿಎಸ್ ಬಿಜೆಪಿ ಜೊತೆ ಕೈ ಜೋಡಿಸಿದೆ. ಜೆಡಿಎಸ್ ತನ್ನ ಸಿದ್ಧಾಂತ ಮರೆತು ಬಿಜೆಪಿ ಸೇರಿದೆ ಎನ್ನುವವರಿಗೆ ಇತಿಹಾಸದ ಅರಿವಿಲ್ಲ. ಹಿಂದೆ ಕಾಂಗ್ರೆಸ್ಸನ್ನು ಸೋಲಿಸಲು ಜನಸಂಘದ ನೇತೃತ್ವದಲ್ಲಿ ಸಮಾಜವಾದಿ ತಳಹದಿ ಪಕ್ಷಗಳೆಲ್ಲ ಒಂದಾಗಿದ್ದವು. ನಂತರ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿದಾಗ ಜೆ.ಪಿ.ಯವರ ಕರೆಯಂತೆ ಜನಸಂಘದ ಜೊತೆ ಅನೇಕ ಪಕ್ಷಗಳು ಒಗ್ಗಟ್ಟಾಗಿದ್ದವು. ಆ ಒಗ್ಗಟ್ಟಿನ ಹೆಸರೇ ಜನತಾ ಪಕ್ಷ. ಇದೀಗ ಬಿಜೆಪಿ ಜೊತೆ ಜೆಡಿಎಸ್ ಕೈಜೋಡಿ ಸಿರುವುದು ರಾಷ್ಟ್ರದ ಒಳಿತಿಗಾಗಿ ಎಂದು ಸ್ಪಷ್ಟಪಡಿಸಿದರು.ಜೆಡಿಎಸ್ ತಾಲೂಕು ಅಧ್ಯಕ್ಷ ಕೆ.ಎಂ. ಮಹೇಶ್ವರಪ್ಪ, ಬಿಜೆಪಿ ಮಂಡಲಾಧ್ಯಕ್ಷ ಬಿ.ಪಿ.ದೇವಾನಂದ್, ಬಿಜೆಪಿ ಜಿಲ್ಲಾ ವಕ್ತಾರ ಕೆ.ಆರ್.ಮಹೇಶ್ ಒಡೆಯರ್, ಟಿ.ಆರ್.ಲಕ್ಕಪ್ಪ, ಜೆಡಿಎಸ್ ಮುಖಂಡರಾದ ಕೆ.ಎಂ.ವಿನಾಯಕ, ಟಿ.ಕೆ.ಜಗದೀಶ್, ಚೇತನ್ ಕೆಂಪರಾಜು, ಬಿ.ಟಿ.ಗಂಗಾಧರ ನಾಯ್ಕ, ಬಿಜೆಪಿ ಮುಖಂಡರಾದ ದಾನಿ ಉಮೇಶ್, ಜಿಗಣೇಹಳ್ಳಿ ನೀಲಕಂಠಪ್ಪ, ಸುನೀತಾ ಜಗದೀಶ್, ವನಮಾಲ ದೇವರಾಜ್, ರಂಗನಾಥ್,ಶೂದ್ರ ಶ್ರೀನಿವಾಸ್, ಡಾ. ದಿನೇಶ್, ಮಲ್ಲಪ್ಪನಹಳ್ಳಿ ಶಶಿ ಸೇರಿದಂತೆ ಮತ್ತಿತರರು ಇದ್ದರು.
-- ಬಾಕ್ಸ್ --- ವ್ಯಕ್ತಿಗಿಂತ ಪಕ್ಷ, ಪಕ್ಷಕ್ಕಿಂತ ದೇಶ ಮುಖ್ಯ ಎಂದು ನಂಬಿರುವ ಬಿಜೆಪಿಯಂತೆಯೇ ಜೆಡಿಎಸ್ ಪಕ್ಷವೂ ಎಲ್ಲ ಜನಾಂಗದವರಿಂದ ಕೂಡಿದ ಪಕ್ಷ. ಏನೇ ಮಾಡಿದರೂ ಶಿಸ್ತಿನಿಂದ ಮಾಡಬೇಕೆಂಬ ಪಾಠವನ್ನು ನನ್ನ ಶಿಷ್ಯ ಬೆಳ್ಳಿ ಪ್ರಕಾಶ್ ರವರಿಂದ ಕಲಿತಿದ್ದೇನೆ ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತ ಹೇಳಿದರು. ಬೆಳ್ಳಿ ಪ್ರಕಾಶ್ ತಮ್ಮ ಮಾತಿನ ನಡುವೆ ಸದಾ ಕಾಲಕ್ಕೂ ದತ್ತಣ್ಣ ನನ್ನ ಗುರುಗಳು. ನನ್ನ ಕಡೆಯ ಉಸಿರು ಇರುವವರೆಗೂ ದೇಶಕ್ಕಾಗಿಯೇ ಚಿಂತನೆ ನಡೆಸುತ್ತೇನೆ ಎಂದರು.13ಕೆಕೆೆಡಿಯು1.
ಕಡೂರು ಸಮೀಪದ ಬಯಲು ಬಸಪ್ಪನ ದೇವಾಲಯದ ಬಳಿ ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ- ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಚುನಾವಣಾ ಪ್ರಚಾರ ಕಾರ್ಯಕ್ರಮ ನಡೆಯಿತು.