ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಬಿಎಸ್‌ಪಿ ಜಿಲ್ಲಾಧ್ಯಕ್ಷ ಎನ್.ನಾಗಯ್ಯ ನನ್ನ ಮೇಲೆ ಮಾಡಿರುವ ಆರೋಪದಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ಜಿಪಂ ಮಾಜಿ ಸದಸ್ಯ ಎಲ್.ನಾಗರಾಜು (ಕಮಲ್) ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ತತ್ವ, ಆಶಯಗಳನ್ನು ಹೊಂದಿರುವ ಬಿಎಸ್‌ಪಿ ಪಕ್ಷದ ಜಿಲ್ಲಾಧ್ಯಕ್ಷನಾಗಿರುವ ನಾಗಯ್ಯ ಸುಳ್ಳು ಹೇಳುವ ಮೂಲಕ ಅಂಬೇಡ್ಕರ್ ತತ್ವ, ಸಿದ್ದಾಂತಕ್ಕೆ ವಿರುದ್ಧವಾಗಿ ಮಾತನಾಡಿದ್ದಾರೆ. ನನ್ನ ಬಗ್ಗೆ ಮಾತನಾಡುವ ನೈತಿಕತೆ ಅವರಿಗೆ ಇಲ್ಲ ಎಂದರು. ನನ್ನನ್ನು ಪ್ರಭಾವಿ ನಾಯಕರೊಂದಿಗೆ ಶಾಮೀಲಾಗಿದ್ದಾರೆ, ಬಿಎಸ್ಪಿ ಪಕ್ಷದಲ್ಲಿ ಯಾವುದೇ ಹುದ್ದೆ ಇಲ್ಲ, ಸದಸ್ಯತ್ವವನ್ನೇ ಪಡೆದಿಲ್ಲ ಎಂದು ಸುಳ್ಳು ಹೇಳಿರುವ ನಾಗಯ್ಯ ಹಿಂದೆ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಜಾಹೀರಾತು, ಸಭೆ, ಸಮಾರಂಭಗಳಲ್ಲಿ ರಾಜ್ಯ ಕಾರ್ಯದರ್ಶಿ ಎಂದು ಹಾಕಿರಲಿಲ್ಲವೇ ಇಷ್ಟೆಲ್ಲ ಆಧಾರ ನನ್ನ ಬಳಿ ಇದ್ದರೂ ನಾಗಯ್ಯ ನನ್ನ ವಿರುದ್ದ ಸುಳ್ಳು ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.ಪೂರ್ವಿಕರು ಶ್ರಮಪಟ್ಟು ಕಟ್ಟಿದ ಬಹುಜನ ಸಮಾಜ ಪಕ್ಷ ಫಲಕೊಡುವ ಸಂದರ್ಭದಲ್ಲಿ ಸಾರಿಗೆ ಇಲಾಖೆಯಲ್ಲಿ ನೌಕರರಾಗಿ ಪೆನ್ಷನ್ ಪಡೆದುಕೊಂಡು ವ್ಯವಹಾರ ಮಾಡಲು ರಾಜಕಾರಣಕ್ಕೆ ಬಂದಿದ್ದಾರೆ. ಪಕ್ಷದ ಬೆಳವಣಿಗೆಯಲ್ಲಿ ಯಾವುದೇ ಕೊಡುಗೆ ಏನು ಇಲ್ಲ. ನಾನು ಕೂಡ ಪಕ್ಷವನ್ನು ಜಿಲ್ಲೆಯಲ್ಲಿ ಮೊದಲು ಸಂಘಟನೆ ಮಾಡಿದ್ದೇನೆ. ನನ್ನ ವಿರುದ್ಧ ಆರೋಪ ಮಾಡಬೇಕಾದರೆ ನಾಗಯ್ಯ ಸಾಕ್ಷಿ ಆಧಾರ ಸಹಿತ ಪತ್ರಿಕಾಗೋಷ್ಠಿ ಮಾಡಲಿ ಅಂದು ನಾನು ಕೂಡ ನನ್ನ ಬಳಿಯಿರುವ ಸಾಕ್ಷಾದ್ಯಾರಗಳೊಂದಿಗೆ ಸಮಕ್ಷಮದಲ್ಲಿ ಪತ್ರಿಕಾಗೋಷ್ಠಿಗೆ ಬರುತ್ತೇನೆ. ಯಾರು ಅನ್ಯಾಯ ಮಾಡುತ್ತಿದ್ದಾರೆ ಎಂಬುವುದು ಜಿಲ್ಲೆಯ ಜನರಿಗೆ ತಿಳಿಯುತ್ತದೆ ಎಂದು ಸವಾಲು ಹಾಕಿದರು.ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಎಸ್ಪಿ ಖಜಾಂಚಿ ಬಿ.ಫಾರಂನ್ನು ಮಾರಾಟ ಮಾಡಿಕೊಂಡು ವ್ಯವಹಾರ ಮಾಡಿದ್ದಾರೆ. ಚುನಾವಣೆ ಬಂದರೆ ವೈಯುಕ್ತಿಕ ಲಾಭ ಪಡೆಯುವುದು ಜಿಲ್ಲಾ, ರಾಜ್ಯ ಸಮಿತಿ ಹುನ್ನಾರವಾಗಿದೆ ಎಂದು ಆರೋಪಿಸಿದರು. ಕೊಳ್ಳೇಗಾಲದಲ್ಲಿ ಹ.ರಾ.ಮಹೇಶ್, ಎಂ.ಕೃಷ್ಣಮೂರ್ತಿ ನನ್ನ ರಕ್ಷಣೆಯಲ್ಲಿ ಕೆಲಸ ಮಾಡಿದ್ದಾರೆ. ಸ್ಥಳೀಯವಾಗಿ ಸಮರ್ಥ ಅಭ್ಯರ್ಥಿ ಇಲ್ಲವೆಂದು ಮಂಡ್ಯ ಜಿಲ್ಲೆಯ ಕೃಷ್ಣಮೂರ್ತಿಯನ್ನು ಕಣಕ್ಕಿಳಿಸಿದ್ದಾರೆ ಎಂದು ದೂರಿದರು. ಪತ್ರಿಕಾಗೋಷ್ಠಿಯಲ್ಲಿ ಪಾಳ್ಯ ಶಿವಮೂರ್ತಿ, ದುಂಡುಮಾದನಾಯಕ, ಎಸ್.ಲಿಂಗಣ್ಣ ಉತ್ತಂಬಳ್ಳಿ, ಚೇತನ್ ಇದ್ದರು.