ದುರ್ಗದ ಕ್ಷೇತ್ರದಲ್ಲೀಗ ಅನಿವಾಸಿಗಳ ಪ್ರಾಬಲ್ಯವೇ ಜೋರು

| Published : Mar 22 2024, 01:06 AM IST

ದುರ್ಗದ ಕ್ಷೇತ್ರದಲ್ಲೀಗ ಅನಿವಾಸಿಗಳ ಪ್ರಾಬಲ್ಯವೇ ಜೋರು
Share this Article
  • FB
  • TW
  • Linkdin
  • Email

ಸಾರಾಂಶ

ಕೋಟೆ ನಾಡು ಚಿತ್ರದುರ್ಗದಲ್ಲಿ ಪ್ರತಿಬಾರಿಹೊರಗಿನ ಅಭ್ಯರ್ಥಿಗಳೆ ಸ್ಪರ್ಧಿಸಿ ಗೆದ್ದು, ಅಭಿವೃದ್ಧಿಯಾಗದೇ ಹೋಗುತ್ತಿತ್ತು. ಈ ಬಾರಿ ಸ್ಥಳೀಯರಿಗೆ ಟಿಕೆಟ್‌ ನೀಡುವಂತೆ ಆಗ್ರಹಿಸಿದ್ದಾರೆ.

ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ, ಅಲ್ಪ ಸಂಖ್ಯಾತರ ಮತಗಳ ಪ್ರಮಾಣ ಕಡಿಮೆ ಇದ್ದರೂ ಎರಡು ಬಾರಿ ಜಗಳೂರು ಇಮಾಂ ಸಾಹೇಬ್ರು, ಮೀಸಲು ವಿಧಾನಸಭೆ ಕ್ಷೇತ್ರದ ಪ್ರತಿನಿಧಿಯಾದ ಕೆ.ಎಚ್.ರಂಗನಾಥ್‌ ಸಾಮಾನ್ಯ ಕ್ಷೇತ್ರದಿಂದ ಗೆದ್ದಿರುವುದು ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಇದುವರೆಗಿನ ಚುನಾವಣೆಗಳ ವೈಶಿಷ್ಟ್ಯ. ಉರಿ ಬಿಸಿಲ ಬೇಗೆಯ ನಡುವೆಯೂ ಲೋಕಸಭೆ ಚುನಾವಣೆ ಕಾವು ಚಿತ್ರದುರ್ಗ ಕ್ಷೇತ್ರದಲ್ಲಿ ನಿಧಾನವಾಗಿ ಏರುತ್ತಿದೆ. ಚಿತ್ರದುರ್ಗ ಜಿಲ್ಲೆಯ ಆರು ಹಾಗೂ ತುಮಕೂರು ಜಿಲ್ಲೆಯ ಶಿರಾ, ಪಾವಗಡ ಎರಡು ವಿಧಾಸಭೆ ಕ್ಷೇತ್ರಗಳನ್ನು ಒಳಗೊಂಡಿರುವ ಲೋಕಸಭೆ ಕ್ಷೇತ್ರದಲ್ಲಿ 1996 ರವರೆಗೆ ಸ್ಥಳೀಯರೇ ಗೆದ್ದು ಪ್ರಾಬಲ್ಯ ಸ್ಥಾಪಿಸಿದ್ದರೆ ನಂತರದ ಚುನಾವಣೆಗಳಲ್ಲಿ ಅನಿವಾಸಿಗಳು ಲಗ್ಗೆ ಇಟ್ಟು ಲೋಕಸಭೆ ಪ್ರವೇಶಿಸಿರುವುದು ವಿಶೇಷ.

1952ರಿಂದ 2019ವರೆಗಿನ ಲೋಕಸಭಾ ಚುನಾವಣಾ ಇತಿಹಾಸವನ್ನು ಗಮನಿಸಿದರೆ ಪ್ರತಿ ಬಾರಿಯೂ ಜಿದ್ದಾಜಿದ್ದಿನ ಹೋರಾಟ ದಾಖಲಾಗಿದೆ. ಭಾರತ ದೇಶದ ಸ್ವಾತಂತ್ರ್ಯ ನಂತರ 1952 ರಲ್ಲಿ ದೇಶದಲ್ಲಿ ಜರುಗಿದ ಪ್ರಥಮ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಎಸ್. ನಿಜಲಿಂಗಪ್ಪ ಅವರು ಕಿಸಾನ್ ಮಜ್ದೂರ್ ಪ್ರಜಾ ಪಾರ್ಟಿ (ಕೆಎಂಪಿಪಿ) ಅಭ್ಯರ್ಥಿ ಜಿ.ಮರುಳಪ್ಪ ಅವರನ್ನು 79,152 ಮತಗಳ ಅಂತರದಿಂದ ಸೋಲಿಸಿ ಆಯ್ಕೆಯಾಗಿದ್ದರು. 1957 ರಲ್ಲಿ ನಡೆದ ಎರಡನೆ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಪ್ರಜಾ ಸೋಶಿಯಲಿಸ್ಟ್ ಪಕ್ಷ (ಪಿಎಸ್‍ಪಿ) ದಿಂದ ಸ್ಪರ್ಧಿಸಿದ್ದ ಜೆ.ಎಂ ಮಹ್ಮದ್ ಇಮಾಮ್ ಅವರು ಕಾಂಗ್ರೆಸ್ ಪಕ್ಷದ ಎಸ್. ರಂಗರಾವ್ ಅವರಿಗಿಂತ 11,159 ಹೆಚ್ಚು ಮತಗಳನ್ನು ಪಡೆದು ವಿಜಯಿಯಾದರು. 1962 ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನ ಎಸ್.ವೀರಬಸಪ್ಪ ಅವರು ಪ್ರಜಾ ಸೋಶಿಯಲಿಸ್ಟ್ ಪಕ್ಷದ ಅಭ್ಯರ್ಥಿ ಜಿ.ಬಸಪ್ಪ ಅವರನ್ನು 44849 ಮತಗಳ ಅಂತರದಿಂದ ಪರಾಭವಗೊಳಿಸಿ ಆಯ್ಕೆಯಾದರು.

1967ರ ಚುನಾವಣೆಯಲ್ಲಿ ಸ್ವತಂತ್ರ ಪಾರ್ಟಿ ಅಭ್ಯರ್ಥಿಯಾಗಿ ಪುನಃ ಸ್ಪರ್ಧಿಸಿದ ಜೆ.ಎಂ ಮಹ್ಮದ್ ಇಮಾಮ್ ಅವರು ಕಾಂಗ್ರೆಸ್‍ನ ಎಸ್.ವೀರಬಸಪ್ಪ ಅವರಿಗಿಂತ 31932 ಹೆಚ್ಚು ಮತಗಳನ್ನು ಗಳಿಸಿ ಆಯ್ಕೆಯಾಗಿದ್ದರು. 1971 ರ ಚುನಾವಣೆಯಲ್ಲಿ ಎನ್.ಪಿಜೆ ಪಕ್ಷದಿಂದ ಸ್ಪರ್ಧಿಸಿದ್ದ ಕೊಂಡಜ್ಜಿ ಬಸಪ್ಪ ಅವರು ಸ್ವತಂತ್ರ ಪಾರ್ಟಿಯ ದ್ದ ಜೆ.ಎಂ ಮಹ್ಮದ್ ಇಮಾಮ್ ಅವರನ್ನು 1,69,702 ಮತಗಳ ಬೃಹತ್ ಅಂತರದಿಂದ ಪರಾಭವಗೊಳಿಸಿ ವಿಜಯಶಾಲಿಯಾದರು. 1977 ರ ಲೋಕಸಭಾ ಚುನಾವಣೆಯಲ್ಲಿ ಕೆ.ಮಲ್ಲಣ್ಣ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಆಯ್ಕೆಯಾದರು. ಈ ಚುನಾವಣೆಯಲ್ಲಿ ಅವರು ಭಾರತೀಯ ಲೋಕದಳ ಪಕ್ಷದ ಅಭ್ಯರ್ಥಿ ಎಚ್.ಸಿ ಬೋರಯ್ಯ ಅವರಿಗಿಂತ 86,654 ಹೆಚ್ಚು ಮತಗಳನ್ನು ಪಡೆದಿದ್ದರು.

1980ರ ಚುನಾವಣೆಯಲ್ಲಿ ಪುನಃ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ. ಮಲ್ಲಣ್ಣ ಅವರು ಜನತಾ ಪಕ್ಷದ ಅಭ್ಯರ್ಥಿ ಬಿ.ಎಲ್ ಗೌಡ ಅವರನ್ನು 109361 ಮತಗಳಿಂದ ಸೋಲಿಸಿ ಎರಡನೆ ಬಾರಿ ಆಯ್ಕೆಯಾದರು 1984 ರಲ್ಲಿ ನಡೆದ ಚುನಾವಣೆಯಲ್ಲಿ ಕೆ.ಎಚ್ ರಂಗನಾಥ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಜನತಾ ಪಕ್ಷದ ಅಭ್ಯರ್ಥಿ ಬಿ.ಎಲ್. ಗೌಡ ಅವರನ್ನು 56811 ಮತಗಳಿಂದ ಪರಾಭವಗೊಳಿಸಿ ಆಯ್ಕೆಯಾಗಿದ್ದರು. ಪರಿಶಿಷ್ಟ ಜಾತಿಗೆ ಸೇರಿದ ಅಭ್ಯರ್ಥಿಯೋರ್ವರು ಸಾಮಾನ್ಯ ಕ್ಷೇತ್ರದಿಂದ ಗೆದ್ದ ಇತಿಹಾಸಕ್ಕೆ ರಂಗನಾಥ್ ಸಾಕ್ಷಿಯಾಗಿದ್ದರು.

1989ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಮೂಡಲಗಿರಿಯಪ್ಪ ಅವರು ತಮ್ಮ ಪ್ರತಿಸ್ಪರ್ಧಿ ಜನತಾದಳ ಪಕ್ಷದ ಅಭ್ಯರ್ಥಿ ಸಣ್ಣ ಚಿಕ್ಕಪ್ಪ ಅವರನ್ನು 1,42,193 ಮತಗಳ ಬೃಹತ್ ಅಂತರದಿಂದ ಪರಾಭವಗೊಳಿಸಿ ವಿಜಯದ ನಗೆ ಬೀರಿದ್ದರು. 1991 ರ ಚುನಾವಣೆಯಲ್ಲಿ ಮತ್ತೆ ಸಿ.ಪಿ. ಮೂಡಲಗಿರಿಯಪ್ಪ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಎಲ್.ಜಿ ಹಾವನೂರು ಅವರನ್ನು 82,512 ಮತಗಳ ಅಂತರದಿಂದ ಸೋಲಿಸಿ ಎರಡನೆ ಬಾರಿಗೆ ಆಯ್ಕೆಯಾದರು.

ಹೊರಗಿನವರ ಪ್ರಾಬಲ್ಯ ಶುರು:

ಬೆಂಗಳೂರಿನಲ್ಲಿ ಪೋಲೀಸ್ ಕಮಿಷನರ್ ಆಗಿದ್ದ ಪಿ.ಕೋದಂಡರಾಮಯ್ಯ ಹುದ್ದೆಗೆ ರಾಜಿನಾಮೆ ನೀಡಿ ಚಿತ್ರದುರ್ಗ ಕ್ಷೇತ್ರದಿಂದ ಗೆದ್ದು ಲೋಕಸಭೆ ಪ್ರವೇಶಿಸುವುದರ ಮೂಲಕ ಅನಿವಾಸಿಗಳಿಗೆ ಚಿತ್ರದುರ್ಗ ಮಣೆ ಹಾಕುವ ಪ್ರಸಂಗಕ್ಕೆ ಮುನ್ನುಡಿ ಬರೆದರು. ಅತ್ಯಂತ ಜಿದ್ದಾಜಿದ್ದಿಯಿಂದ ಕೂಡಿದ್ದ 1996 ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಪಿ.ಕೋದಂಡರಾಮಯ್ಯ, ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಸಿ.ಪಿ. ಮೂಡಲಗಿರಿಯಪ್ಪ ಅವರನ್ನು 19,382 ಮತಗಳ ಸೋಲಿಸಿದ್ದರು. 1998 ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಮೂಡಲಗಿರಿಯಪ್ಪ ಲೋಕಶಕ್ತಿ ಪಕ್ಷದ ಅಭ್ಯರ್ಥಿ ಪಿ.ಕೋದಂಡರಾಮಯ್ಯ ಅವರನ್ನು 58,321 ಮತಗಳಿಂದ ಪರಾಭವಗೊಳಿಸಿ ಸೇಡು ತೀರಿಸಿಕೊಂಡಿದ್ದರು.

1999 ರ ಚುನಾವಣೆಯಲ್ಲಿ ಸಿನಿಮಾವೊಂದರ ಶೂಟಿಂಗ್ ಗೆಂದು ಚಿತ್ರದುರ್ಗಕ್ಕೆ ಬಂದಿದ್ದ ನಟ ಶಶಿಕುಮಾರ್ ಜೆಡಿಯು ನಿಂದ ಸ್ಪರ್ಧಿಸಿ ಗೆಲವು ಸಾಧಿಸಿದ್ದರು. ಕಾಂಗ್ರೆಸ್ ನ ಸಿ.ಪಿ ಮೂಡಲಗಿರಿಯಪ್ಪ ಅವರನ್ನು ಕೇವಲ 11,178 ಮತಗಳ ಅಂತರದಿಂದ ಪರಾಭವಗೊಳಿಸಿ ಆಯ್ಕೆಯಾದರು. 2004ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎನ್.ವೈ. ಹನುಮಂತಪ್ಪ ಅವರು ಜನತಾದಳ (ಜಾತ್ಯತೀತ) ಪಕ್ಷದ ಅಭ್ಯರ್ಥಿ ಪಿ. ಕೋದಂಡರಾಮಯ್ಯ ಅವರಿಗಿಂತ 37,460 ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾಗಿದ್ದರು.

2009ರಲ್ಲಿ ಜರುಗಿದ ಚುನಾವಣೆಯಲ್ಲಿ ಬಿಜೆಪಿ ಅಭ್ಯಥಿಯಾಗಿ ಸ್ಪರ್ಧಿಸಿದ ಜನಾರ್ದನಸ್ವಾಮಿ ಅವರು, ಕಾಂಗ್ರೆಸ್‍ನ ಬಿ.ತಿಪ್ಪೇಸ್ವಾಮಿ ಅವರಿಗಿಂತ 1,35,656 ಮತಗಳ ಅಂತರದಿಂದ ಸೋಲಿಸಿದ್ದರು. 2014 ರ ಚುನಾವಣೆಯಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಬಿ.ಎನ್ ಚಂದ್ರಪ್ಪ , ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಜನಾರ್ಧನಸ್ವಾಮಿ ಅವರನ್ನು 101291 ಮತಗಳ ಅಂತರದಿಂದ ಪರಾಭವಗೊಳಿಸಿ ಆಯ್ಕೆಯಾದರು. 2019 ರಲ್ಲಿ ಜರುಗಿದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಎ. ನಾರಾಯಣಸ್ವಾಮಿ ಅವರು, ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಬಿ.ಎನ್. ಚಂದ್ರಪ್ಪ ಅವರಿಗಿಂತ 80,178 ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾಗಿದ್ದರು. ಈ ಚುನಾವಣೆಯಲ್ಲಿ ನೋಟಾಗೆ ಒಟ್ಟು 4368 ಮತಗಳು ಚಲಾವಣೆಯಾಗಿದ್ದವು.