ಮಕ್ಕಳ ರಕ್ಷಣಾ ಆಯೋಗದ ಸದಸ್ಯರ ಎದುರೇ ಅಕ್ರಮ ಬಯಲು

| Published : Jul 12 2024, 01:32 AM IST

ಸಾರಾಂಶ

ಗ್ರಾಮೀಣ ಮತ್ತು ಕನ್ನಡ ಮಾಧ್ಯಮ ಸೌಲಭ್ಯ ಪಡೆಯಲು ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯಲ್ಲಿ ಮಕ್ಕಳನ್ನು ದಾಖಲು ಮಾಡಿ, ಖಾಸಗಿ ಶಾಲೆಯಲ್ಲಿ (ಹಾಜರಾತಿ) ಓದಿಸುವ ಮೂಲಕ ಅಕ್ರಮ ಎಸಗುತ್ತಿರುವ ಪ್ರಕರಣವನ್ನು ''ಕನ್ನಡಪ್ರಭ'' ವರದಿ ಮಾಡಿದ ಬೆನ್ನಲ್ಲೇ ಮಕ್ಕಳ ರಕ್ಷಣಾ ಆಯೋಗದ ಸದಸ್ಯರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ಎದುರೇ ಈ ಅಂಶ ಬಟಾಬಯಲಾಗಿದೆ.

ಕೊಪ್ಪಳ: ಗ್ರಾಮೀಣ ಮತ್ತು ಕನ್ನಡ ಮಾಧ್ಯಮ ಸೌಲಭ್ಯ ಪಡೆಯಲು ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯಲ್ಲಿ ಮಕ್ಕಳನ್ನು ದಾಖಲು ಮಾಡಿ, ಖಾಸಗಿ ಶಾಲೆಯಲ್ಲಿ (ಹಾಜರಾತಿ) ಓದಿಸುವ ಮೂಲಕ ಅಕ್ರಮ ಎಸಗುತ್ತಿರುವ ಪ್ರಕರಣವನ್ನು ''''ಕನ್ನಡಪ್ರಭ'''' ವರದಿ ಮಾಡಿದ ಬೆನ್ನಲ್ಲೇ ಮಕ್ಕಳ ರಕ್ಷಣಾ ಆಯೋಗದ ಸದಸ್ಯರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ಎದುರೇ ಈ ಅಂಶ ಬಟಾಬಯಲಾಗಿದೆ.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಡಾ. ಕೆ.ಟಿ. ತಿಪ್ಪೇಸ್ವಾಮಿ ಹಾಗೂ ಶೇಖರಗೌಡ ರಾಮತ್ನಾಳ ಅವರ ನೇತೃತ್ವದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ವಸತಿ ಶಾಲೆಗಳು, ಗ್ರಾಮ ಪಂಚಾಯಿತಿ, ಪೊಲೀಸ್ ಠಾಣೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದಾಗ ಈ ಅಘಾತಕಾರಿ ಅಂಶ ಬೆಳಕಿಗೆ ಬಂದಿದ್ದು, ಖುದ್ದು ಮಕ್ಕಳ ರಕ್ಷಣಾ ಆಯೋಗದ ಸದಸ್ಯರೇ ಬೆರಗಾಗಿದ್ದಾರೆ.

ಕೊಪ್ಪಳ ತಾಲೂಕಿನ ಹಲಿಗೇರಿ ಗ್ರಾಮದ ಖಾಸಗಿ ಶಾಲೆಗೆ ಭೇಟಿ ನೀಡಿದಾಗ 25ಕ್ಕೂ ಹೆಚ್ಚು ಮಕ್ಕಳು ದಾಖಲಾತಿಯಲ್ಲಿ ಇಲ್ಲದೆ ಇರುವ ಮಕ್ಕಳು ಪತ್ತೆಯಾಗಿದ್ದಾರೆ. ಅಷ್ಟೇ ಅಲ್ಲ, ಅವರನ್ನು ಮಾತನಾಡಿಸಿದಾಗ ಬೇರೆ ಬೇರೆ ಶಾಲೆಯಲ್ಲಿ ದಾಖಲು ಇರುವುದು ಗೊತ್ತಾಗಿದೆ. ಆಗ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಡಾ. ತಿಪ್ಪೇಸ್ವಾಮಿ ಅವರು, ದಾಖಲಾತಿ ಇಲ್ಲದೇ ಇರುವ ಮಕ್ಕಳು ಇರುವುದು ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ. ಅವರ ಟಿಸಿ ಬಂದಿಲ್ಲ ಎಂದು ಸಬೂಬು ನೀಡಿದ್ದಾರೆ. ಅವರ ಟಿಸಿಯನ್ನು ತರಿಸಿಕೊಳ್ಳಲು ಬರೆದ ಪತ್ರವನ್ನಾದರೂ ಕೊಡಿ ಎಂದು ಕೇಳಿದಾಗ ಮರಳಿ ಉತ್ತರ ನೀಡಲು ಆಗಿಲ್ಲ. ಅಷ್ಟೇ ಅಲ್ಲ, ಕೇವಲ ಶಾಲೆಗೆ ಅನುಮತಿ ಪಡೆದು, ವಸತಿ ಶಾಲೆ ನಡೆಸುತ್ತಿರುವ ಕುರಿತು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಸರ್ಕಾರಕ್ಕೆ ವರದಿ: ಸರ್ಕಾರಿ ಶಾಲೆಯಲ್ಲಿ ಮಕ್ಕಳು ದಾಖಲಾಗಿ, ಖಾಸಗಿ ಶಾಲೆಯಲ್ಲಿ ಅಕ್ರಮವಾಗಿ ಇರುವ ಬಹುತೇಕ ಪ್ರಕರಣಗಳು ಕೊಪ್ಪಳ ಜಿಲ್ಲೆಯಲ್ಲಿದ್ದು, ಈ ಕುರಿತು ಸರ್ಕಾರಕ್ಕೆ ವರದಿ ಮಾಡುವುದಾಗಿ ಮಕ್ಕಳ ರಕ್ಷಣಾ ಆಯೋಗದ ಸದಸ್ಯರು ತಿಳಿಸಿದ್ದಾರೆ. ಇದೊಂದು ಬಹುದೊಡ್ಡ ಅಕ್ರಮವಾಗಿದ್ದು, ಇದಕ್ಕೆ ಶಿಕ್ಷಣ ಇಲಾಖೆಯ ಸಾಥ್ ಇಲ್ಲದೇ ಇಂತಹ ಅಕ್ರಮ ನಡೆಯುವುದು ಸಾಧ್ಯವೇ ಇಲ್ಲ. ಹೀಗಾಗಿ, ಇಂಥವರ ಮೇಲೆಯೂ ಕ್ರಮಕ್ಕಾಗಿ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.ದೊಡ್ಡ ದಂಧೆ: ಜಿಲ್ಲಾದ್ಯಂತ ದೊಡ್ಡ ದಂಧೆಯೇ ನಡೆಯುತ್ತಿದೆ. ಅಕ್ರಮ ಕೋಚಿಂಗ್ ಸೆಂಟರ್‌ಗಳು ಇದನ್ನು ದಂಧೆಯಾಗಿ ಮಾಡಿಕೊಂಡಿವೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧ ಮಾಡುವ ನೆಪದಲ್ಲಿ ಲಕ್ಷ ಲಕ್ಷ ರುಪಾಯಿ ಶುಲ್ಕ ವಸೂಲಿ ಮಾಡಿ, ಅಕ್ರಮವಾಗಿಯೇ ಕೋಚಿಂಗ್ ಸೆಂಟರ್ ನಡೆಸುತ್ತಿದ್ದಾರೆ. ಇನ್ನು ಖಾಸಗಿ ಶಾಲೆಗಳಲ್ಲಿ ಓದುವ ಮಕ್ಕಳ ಸರ್ಕಾರಿ ಶಾಲೆಯಲ್ಲಿ ದಾಖಲಾಗಿರುವವರು ಇದ್ದಾರೆ.ನನಗೆ ಅತ್ಯಂತ ಅಘಾತವಾಗಿದೆ. ದಾಖಲೆಯೇ ಇಲ್ಲದೇ ಇರುವ ಮಕ್ಕಳನ್ನು ಅಕ್ರಮವಾಗಿ ಇಟ್ಟುಕೊಂಡಿರುವುದು ನೋಡಿ ಶಾಖ್ ಆಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಜಿಲ್ಲಾಧಿಕಾರಿ ಸಭೆ ನಡೆಸಿ, ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಡಾ. ಟಿ.ಕೆ. ತಿಪ್ಪೇಸ್ವಾಮಿ ಹೇಳಿದ್ದಾರೆ.''''ಕನ್ನಡಪ್ರಭ'''' ಈ ಕುರಿತು ವರದಿ ಮಾಡಿದ್ದನ್ನು ಗಮನಿಸಿಯೇ ಪರಿಶೀಲನೆ ಮಾಡಿದಾಗ ಒಂದೇ ಖಾಸಗಿ ಶಾಲೆಯಲ್ಲಿ 25ಕ್ಕೂ ಹೆಚ್ಚು ಮಕ್ಕಳು ಅಕ್ರಮವಾಗಿ ಇರುವುದು ಪತ್ತೆಯಾಗಿದೆ. ಇದು ಅತ್ಯಂತ ಕೆಟ್ಟ ಬೆಳವಣಿಗೆ ಎಂದು ಶೇಖರಗೌಡ ರಾಮತ್ನಾಳ ಹೇಳಿದ್ದಾರೆ.