ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನ ಮಿನಿ ಬಳ್ಳಾರಿ ಎನ್ನಲಾದ ಹಿರೀಕಾಟಿ ಸೇರಿದಂತೆ ತಾಲೂಕಿನಾದ್ಯಂತ ನಡೆಯುತ್ತಿರುವ ಬಿಳಿ ಕಲ್ಲು ಗಣಿಗಾರಿಕೆಯಲ್ಲಿ ವರ್ಷಕ್ಕೆ ತೆಗೆಯಬೇಕಾದ ಕಲ್ಲು ವಾರದಲ್ಲೇ ಖಾಲಿ ಆಗುತ್ತಿದೆ. ಅಲ್ಲದೆ ಹೆಚ್ಚುವರಿ ಕಲ್ಲು ತೆಗೆದಿದ್ದಕ್ಕೆ ದಂಡ ಕಟ್ಟಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವಿಫಲವಾಗಿದೆ.ಕ್ವಾರಿ ಲೀಸ್‌ದಾರರೊಂದಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಶಾಮೀಲಾಗಿರುವುದೇ ಅಕ್ರಮ ಗಣಿಗಾರಿಕೆ, ಹೆಚ್ಚುವರಿ ಕಲ್ಲು ತೆಗೆದಿರುವುದು ಹಾಗೂ ಒತ್ತುವರಿ ಗಣಿಗಾರಿಕೆ ನಡೆಯಲು ಕಾರಣವಾಗಿದೆ. ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯ ರಾಜ್ಯ ಪರಿಸರ ಅಘಾತ ಅಂದಾಜೀಕರಣ ಪ್ರಾಧಿಕಾರ ನಿಗದಿ ಪಡಿಸಿರುವ ವಾರ್ಷಿಕ ಖನಿಜ ಉತ್ಪಾದನೆಗೆ ಇಂತಿಷ್ಟು ಅಂತಿದೆ. ಆದರೆ ಕ್ವಾರಿ ಲೀಸ್‌ದಾರರು ವರ್ಷಕ್ಕೆ ತೆಗೆಯಬೇಕಾದ ಕಲ್ಲನ್ನು ಕೇವಲ ವಾರದೊಳಗೆ ಮಾರಾಟ ಮಾಡುತ್ತಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯ ಅನುಮತಿ ಪ್ರಕಾರ ಉದಾಹರಣೆಗೆ ೧.೧೦ ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ಲೀಸ್ ನೀಡಿದ್ದರೂ ಗಣಿಗಾರಿಕೆ ಮಾತ್ರ ೨೮ ಗುಂಟೆ ಪ್ರದೇಶದಲ್ಲಿ ಮಾಡಬೇಕೆಂಬ ನಿಯಮವಿದೆ. ಇದಲ್ಲದೆ ೧.೧೦ ಜಾಗದಲ್ಲಿ ೨೮ ಗುಂಟೆ ಗಣಿಗಾರಿಕೆ ಸ್ಥಳ ಹೊರತು ಪಡಿಸಿ ೨೧ ಗುಂಟೆ ಪ್ರದೇಶ ಹಸಿರು ವಲಯಕ್ಕೆ ಬಿಡಬೇಕು. ೧ ಗುಂಟೆ ಪ್ರದೇಶ ರಸ್ತೆಗೆ ಬಿಡಬೇಕು. ೧ ಗುಂಟೆ ಇನ್‌ಪ್ರಾಸ್ಟಕ್ಚರ್, ೧ ಗುಂಟೆ ವೇಸ್ಟ್ ಡಂಪಿಂಗ್ , ೧ ಗುಂಟೆ ಮಿನಿರಲ್ ಸ್ಟೋರೇಜ್ ಸೇರಿದಂತೆ ಇನ್ನಿತರ ಬಳಕೆಗೆ ಜಾಗ ಬಿಡಬೇಕು.
ಇಲಾಖೆಯ ಎಲ್ಲಾ ನಿಯಮಗಳನ್ನು ತಾಲೂಕಿನ ಕ್ವಾರಿಗಳಲ್ಲಿ ಉಲ್ಲಂಘಿಸುತ್ತಿದ್ದರೂ ಚಾಮರಾಜನಗರ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಗಣಿ ಗುತ್ತಿಗೆ ಲೀಸ್‌ದಾರರ ಮೇಲೆ ಕ್ರಮಕ್ಕೆ ಮುಂದಾಗಿಲ್ಲ. ಆದರೆ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಕೂಡ ಮೌನ ವಹಿಸಿದೆ. ಅಕ್ರಮಗಳ ಬಗ್ಗೆ ಜಿಲ್ಲಾಡಳಿತಕ್ಕೆ ಜಿಲ್ಲಾ ರೈತ ಕೂಲಿ ಸಂಗ್ರಾಮ ಸಮಿತಿ ಅಧ್ಯಕ್ಷ ಕಂದೇಗಾಲ ಶಿವಣ್ಣ ಹಲವು ಬಾರಿ ದೂರು ನೀಡಿದ್ದಾರೆ. ಅಲ್ಲದೆ ಹಿರೀಕಾಟಿ ಸೇರಿದಂತೆ ಇತರೆ ಕ್ವಾರಿಗಳ ಬಗ್ಗೆ ಕನ್ನಡಪ್ರಭ ಪತ್ರಿಕೆ ಕೂಡ ನಿರಂತರವಾಗಿ ವರದಿ ಬರೆದು ಬೆಳಕು ಚೆಲ್ಲಿದೆ.ಅಕ್ರಮ ಗಣಿಗಾರಿಕೆಗೆ ಜಿಲ್ಲಾಡಳಿತ ಶಾಮೀಲು?:
ಜಿಲ್ಲಾಡಳಿತಕ್ಕೆ ದೂರು ನೀಡಿದರೂ ಜಿಲ್ಲಾಡಳಿತ ಅಕ್ರಮಗಳ ಬಗ್ಗೆ ತನಿಖೆಗೆ ಮುಂದಾಗಿಲ್ಲ. ಇದನ್ನೆಲ್ಲ ಗಮನಿಸಿದರೆ ಅಕ್ರಮ ಗಣಿಗಾರಿಕೆಗೆ ಜಿಲ್ಲಾಡಳಿತ ಶಾಮೀಲಾಗಿದೆಯೇ ಎಂಬ ಅರ್ಥ ಬರುತ್ತಿದೆ ಎಂದು ದೂರುದಾರ ಪ್ರಸನ್ನ ಆರೋಪಿಸಿದ್ದಾರೆ.ಮುಚ್ಚಳಿಕೆ ನಾಟಕ?: ಮಡಹಳ್ಳಿ ಗುಡ್ಡ ಕುಸಿತದ ಬಳಿಕ ೨ ತಿಂಗಳ ಕಾಲ ಗಣಿಗಾರಿಕೆ ಸದ್ದು ಜಿಲ್ಲೆಯಲ್ಲಿ ನಿಂತಿತ್ತು. ಇದಾದ ಬಳಿಕ ಗಣಿ ಗುತ್ತಿಗೆ ಲೀಸ್‌ದಾರರು ಹಾಗೂ ರಾಜಕೀಯ ಒತ್ತಡಕ್ಕೆ ಮಣಿದ ಜಿಲ್ಲಾಡಳಿತ, ಷರತ್ತು ಬದ್ಧ ಗಣಿಗಾರಿಕೆ ಆರಂಭಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿತ್ತು. ಜಿಲ್ಲಾಡಳಿತ ಗ್ರೀನ್ ಸಿಗ್ನಲ್ ಹೊರ ಬಿದ್ದ ತಕ್ಷಣವೇ ಗಣಿ ಗುತ್ತಿಗೆ ಲೀಸ್‌ದಾರರು ತುರಾತುರಿಯಲ್ಲಿ ಮುಚ್ಚಳಿಕೆ ಪತ್ರವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಬರೆದು ಕೊಟ್ಟು ಗಣಿಗಾರಿಕೆ ಶುರು ಮಾಡಿದರು.
ಆದರೆ ಜಿಲ್ಲಾಡಳಿತದ ಸೂಚನೆಯಂತೆ ಗಣಿ ಗುತ್ತಿಗೆ ಲೀಸ್‌ದಾರರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ನೀಡಿದ ಮುಚ್ಚಳಿಕೆ ಬರೆದು ಕೊಟ್ಟ ಉತ್ಸಾಹದಲ್ಲಿ ಮುಚ್ಚಳಿಕೆಯಲ್ಲಿನ ಷರತ್ತುಗಳ ಬಗ್ಗೆ ಕಿಂಚತ್ತು ಗಮನ ಹರಿಸಿದೆ ಗಣಿಗಾರಿಕೆಯಲ್ಲಿ ತೊಡಗಿದ್ದಾರೆ. ಗಣಿ ಗುತ್ತಿಗೆ ಲೀಸ್‌ದಾರರಿಂದ ಮುಚ್ಚಳಿಕೆ ಬರೆಸಿಕೊಂಡಿದ್ದು ಜಿಲ್ಲಾಡಳಿತದ ನಾಟಕನಾ? ಮುಚ್ಚಳಿಕೆ ಕೊಟ್ರಿ, ರಾಜಧನ ವಂಚಿಸಿ ಕಲ್ಲು ಸಾಗಿಸಿ ಎಂದರ್ಥವಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ.‘ಮಡಹಳ್ಳಿ ಬಳಿ ಗುಮ್ಮಕ್ಕಲ್ಲು ಗುಡ್ಡ ಕುಸಿತದ ಎರಡು ತಿಂಗಳ ಬಳಿಕ ಜಿಲ್ಲಾಡಳಿತ ಷರತ್ತುಬದ್ಧ ಗಣಿಗಾರಿಕೆ ನಡೆಸಲು ಅವಕಾಶ ನೀಡಿತ್ತು. ಆದರೆ ಲೀಸ್‌ದಾರರು ಷರತ್ತಿನಂತೆ ಗಣಿಗಾರಿಕೆ ನಡೆಸುತ್ತಿಲ್ಲ. ನಿಯಮ ಬಾಹಿರ ಗಣಿಗಾರಿಕೆ, ರಾತ್ರಿ, ಹಗಲು ಕ್ರಷರ್ ಕೆಲಸ ನಡೆಯುತ್ತಿದೆ. ಸಿಸಿ ಕ್ಯಾಮೆರಾ, ವೇ ಬ್ರಿಡ್ಜ್ ಹಾಕಿಲ್ಲದ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ದೂರು ನೀಡಿದ್ದೇನೆ. ಆದರೂ ಗಣಿಗಾರಿಕೆ ನಿಂತಿಲ್ಲ. ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಬದುಕಿದೆಯಾ ಎಂಬ ಪ್ರಶ್ನೆ ಕಾಡುತ್ತಿದೆ. ಪ್ರಸನ್ನ, ಪ್ರಧಾನ ಕಾರ್ಯದರ್ಶಿ, ರೈತ ಕೂಲ ಸಂಗ್ರಾಮ ಸಮಿತಿ