ಸಾರಾಂಶ
ಭಟ್ಕಳ: ''''ಹೆಸರಾಯಿತು ಕರ್ನಾಟಕ ಉಸಿರಾಯಿತು ಕನ್ನಡ'''' ಶೀರ್ಷಿಕೆ ಅಡಿಯಲ್ಲಿ, ಮೈಸೂರು ರಾಜ್ಯ ಕರ್ನಾಟಕವೆಂದು ನಾಮಕರಣವಾಗಿ 50 ವಸಂತಗಳು ಪೂರೈಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಹೊರಡಿಸಿರುವ ಕರ್ನಾಟಕ ಸಂಭ್ರಮ-50 ರಥವನ್ನು ಪಟ್ಟಣದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಪಟ್ಟಣದ ಶಂಶುದ್ದೀನ್ ಸರ್ಕಲ್‌ಗೆ ಆಗಮಿಸಿದ ರಥಯಾತ್ರೆಗೆ ಗೊಂಡ ಸಮಾಜ ಧಕ್ಕೆ ಕುಣಿತ ಹಾಗೂ ಝೇಂಕಾರ ಭರತನಾಟ್ಯ ವಿದ್ಯಾರ್ಥಿಗಳು ಪೂರ್ಣಕುಂಭ ಕಳಸದೊಂದಿಗೆ ಸ್ವಾಗತ ಮಾಡಿದರು. ತಾಯಿ ಭುವನೇಶ್ವರಿ ದೇವಿಗೆ ಪುಷ್ಪ ನಮನ ಅರ್ಪಿಸಿ, ಪೂಜೆ ಸಲ್ಲಿಸಿದರು.ಆನಂತರ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಸಹಾಯಕ ಆಯುಕ್ತೆ ಡಾ. ನಯನಾ, ರಥ ರಾಜ್ಯದಾದ್ಯಂತ ಸಂಚರಿಸಿದ್ದು, ಇದು ನಮ್ಮ ಭಾವೈಕ್ಯತೆ, ಏಕತೆಯ ಸಂಕೇತವಾಗಿ ನಮ್ಮ ಕನ್ನಡವನ್ನು ಎಲ್ಲೆಡೆ ಪಸರಿಸುತ್ತಿದೆ ಎಂದರು.
ಉಪಸ್ಥಿತರಿದ್ದ ಪ್ರಭಾರೆ ತಹಸೀಲ್ದಾರ್ ಅಶೋಕ ಭಟ್ ಮಾತನಾಡಿ, ರಾಜ್ಯ ಸರ್ಕಾರ ಸಮಸ್ತ ಜನತೆಗೆ ಕನ್ನಡದ ಬಗ್ಗೆ ಅಭಿಮಾನ ಬರಲಿ ಹಾಗೂ ನಮ್ಮ ರಾಜ್ಯದ ಗೌರವ ಹೆಚ್ಚಾಗಲಿ ಎನ್ನುವ ಉದ್ದೇಶದಿಂದ ಈ ರಥ ರಾಜ್ಯ ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಲು ಅವಕಾಶ ಮಾಡಿಕೊಟ್ಟಿದೆ. ರಥ ತಾಲೂಕಿನ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ಸಂಚರಿಸಿ, ಮುರ್ಡೇಶ್ವರದಲ್ಲಿ ತಂಗಲಿದೆ. ಸೋಮವಾರ ರಥವನ್ನು ಗೌರವಯುತವಾಗಿ ಹೊನ್ನಾವರ ತಾಲೂಕಿಗೆ ಬೀಳ್ಕೊಡಲಿದ್ದೇವೆ ಎಂದರು.ಪುರಸಭೆ ಮುಖ್ಯಾಧಿಕಾರಿ ನೀಲಕಂಠ ಮೆಸ್ತಾ, ಭಟ್ಕಳ ಕಸಾಪ ಅಧ್ಯಕ್ಷ ಗಂಗಾಧರ ನಾಯ್ಕ, ಸಾಹಿತಿ ಶಂಭು ಹೆಗಡೆ, ಶ್ರೀಧರ್ ಶೇಟ್, ದೈಹಿಕ ಶಿಕ್ಷಣಾಧಿಕಾರಿ ಪ್ರಕಾಶ ಶಿರಾಲಿ, ಪುರಸಭೆ ಆರೋಗ್ಯಾಧಿಕಾರಿ ಸೂಜಿಯ ಸೋಮನ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು. ಮಕ್ಕಳ ಆರೋಗ್ಯದ ಜಾಗೃತಿ ಅಗತ್ಯ: ಡಾ. ಸಿದ್ದಲಿಂಗಯ್ಯ
ಭಟ್ಕಳ: ಇಲ್ಲಿನ ಮಜ್ಲಿಸೆ ಇಸ್ಲಾಹ್- ವ- ತಂಝೀಮ್ ಹಾಗೂ ರಾಬಿತಾ ಸೊಸೈಟಿ ಸಹಯೋಗದೊಂದಿಗೆ ರಾಬಿತಾ ಸಭಾಂಗಣದಲ್ಲಿ ಮಕ್ಕಳ ಲಸಿಕೆ ಹೆಚ್ಚಿಸುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.ಈ ವೇಳೆ ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಾರ ಡಾ. ಸಿದ್ದಲಿಂಗಯ್ಯ ಎಚ್.ಎಸ್. ಮಾತನಾಡಿ, ಭಟ್ಕಳದಲ್ಲಿ ಮಕ್ಕಳ ಆರೋಗ್ಯ ಕುರಿತಂತೆ ಅತ್ಯಂತ ಜಾಗೃತಿ ವಹಿಸಬೇಕಾಗಿದೆ. ಇಲ್ಲಿ ಕಳೆದ ವರ್ಷ ಮಿಸೆಲ್ಸ್ ಕಾಯಿಲೆ ಉಲ್ಬಣಗೊಂಡಿರುವ ಕುರಿತು ಆರೋಗ್ಯ ಇಲಾಖೆ ವರದಿ ನೀಡಿದೆ. ಅಲ್ಲದೆ ಮಕ್ಕಳ ಲಸಿಕೆ ಕುರಿತು ಹಲವು ತಪ್ಪು ಭಾವನೆಗಳಿದ್ದು, ಅದನ್ನು ಹೋಗಲಾಡಿಸಿ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.ಲಸಿಕಾ ಅಭಿಯಾನವು ಪೋಲಿಯೋ, ದಡಾರ, ರುಬೆಲ್ಲಾ, ಡಿಫ್ತೀರಿಯಾ ಮತ್ತು ಹೆಪಟೈಟಿಸ್ ಬಿ ಮುಂತಾದ ರೋಗಗಳನ್ನು ತಡೆಗಟ್ಟುವ ರಾಷ್ಟ್ರವ್ಯಾಪಿ ಉಪಕ್ರಮದ ಭಾಗವಾಗಿದೆ. ಲಸಿಕೆಗಳನ್ನು ಪೋಷಕರಿಗೆ ಸುಲಭವಾಗಿ ತಲುಪಿಸಲು ಪ್ರಯತ್ನ ಮಾಡಲಾಗುತ್ತಿದೆ. ವೈದ್ಯಕೀಯ ಸೌಲಭ್ಯಗಳು ಲಭ್ಯವಿಲ್ಲದ ಮಕ್ಕಳನ್ನು ತಲುಪಲು ಆರೋಗ್ಯ ಕಾರ್ಯಕರ್ತರು ದೂರದ ಪ್ರದೇಶಗಳಲ್ಲಿ ಮನೆ- ಮನೆಗೆ ಭೇಟಿ ನೀಡುತ್ತಿದ್ದು, ಸಹಕರಿಸಬೇಕು ಎಂದರು.ಯುನಿಸೆಫ್ ಸಲಹೆಗಾರ ಮನೋಜ್ ಸೆಬಸ್ಟೈನ್ ಮಾತನಾಡಿ, ಸಮುದಾಯದ ಮುಖಂಡರು ಮತ್ತು ಸ್ಥಳೀಯ ಸಂಸ್ಥೆಗಳಾದ ತಂಝೀಮ್ ಮತ್ತು ರಾಬಿತಾ ಸಂಸ್ಥೆಗಳು ಜಾಗೃತಿ ಮೂಡಿಸುವ ಮೂಲಕ ಮಕ್ಕಳಿಗೆ ಲಸಿಕೆ ಹಾಕಿಸಲು ಪೋಷಕರನ್ನು ಉತ್ತೇಜಿಸುತ್ತಿರುವುದು ಶ್ಲಾಘನೀಯ ಎಂದರು.
ಮಕ್ಕಳ ವೈದ್ಯ ಡಾ. ಜಮೀಲ್ ಗವಾಯಿ ಮಾತನಾಡಿ, ಮಕ್ಕಳ ಲಸಿಕೆ ಕುರಿತಂತೆ ನಮ್ಮಲ್ಲಿನ ತಪ್ಪಕಲ್ಪನೆಗಳನ್ನು ದೂರ ಮಾಡಬೇಕಾದುದು ಅತಿ ಅವಶ್ಯಕವಾಗಿದ್ದು, ಸಮುದಾಯದ ವಿವಿಧ ಸಂಘ- ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯಾಚರಣೆಗಿಳಿದಿರುವುದು ತುಂಬಾ ಸಂತೋಷ ಎಂದರು.ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್, ಅಧ್ಯಕ್ಷತೆ ವಹಿಸಿದ್ದ ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ., ಜಿದ್ದಾ ಮುಸ್ಲಿಮ್ ಜಮಾಅತ್ ಅಧ್ಯಕ್ಷ ಖಮರ್ ಸಾದಾ ಮಾತನಾಡಿದರು. ತಂಝೀಮ್ ಸಂಸ್ಥೆಯ ಪದಾಧಿಕಾರಿ ಇಕ್ಬಾಲ್ ಜಾವೀದ್ ನಿರೂಪಿಸಿದರು.