ಮಂಡ್ಯ ಜಿಲ್ಲೆಯಲ್ಲಿ ‘ಕೈ’ಗೆ ಬಲ ತುಂಬಿದ ಪಕ್ಷ ಸೇರ್ಪಡೆ..!

| Published : Mar 28 2024, 12:49 AM IST

ಮಂಡ್ಯ ಜಿಲ್ಲೆಯಲ್ಲಿ ‘ಕೈ’ಗೆ ಬಲ ತುಂಬಿದ ಪಕ್ಷ ಸೇರ್ಪಡೆ..!
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಎಂಬುದು ಗೊತ್ತಾಗುತ್ತಿದ್ದಂತೆ ಜೆಡಿಎಸ್, ಬಿಜೆಪಿಯ ನೂರಾರು ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಸೇರಲು ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅಲ್ಲಿಂದ ಪ್ರವಾಹದಂತೆ ಕಾಂಗ್ರೆಸ್ ಕಡೆ ಹರಿದುಬರಲಿದ್ದಾರೆ ಎಂದು ಭವಿಷ್ಯ ನುಡಿದ ಶಾಸಕ ಪಿ.ರವಿಕುಮಾರ, ಕಳೆದ ೩೦ ವರ್ಷದಿಂದ ಜೆಡಿಎಸ್ ಸುಳ್ಳಿನ ಸರಮಾಲೆಯನ್ನೇ ಸೃಷ್ಟಿಸಿ ಜಿಲ್ಲೆಯನ್ನು ಅಭಿವೃದ್ಧಿಯಿಂದ ವಂಚಿತಗೊಳ್ಳುವಂತೆ ಮಾಡಿದೆ. ಸುಳ್ಳು ಮತ್ತು ಅಭಿವೃದ್ಧಿ ಮೇಲೆ ಈ ಚುನಾವಣೆ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕಾಂಗ್ರೆಸ್ ಸರ್ಕಾರದ ಸಾಧನೆಗಳು ಮತ್ತು ಕಾರ್ಯಕ್ರಮಗಳನ್ನು ಮೆಚ್ಚಿ ಶಾಸಕ ಪಿ.ರವಿಕುಮಾರ್ ನೇತೃತ್ವದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಹಲವಾರು ಮುಖಂಡರು, ಕಾರ್ಯಕರ್ತರು ಬೇಷರತ್ತಾಗಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು.

ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಜಿಲ್ಲಾ ಪಂಚಾಯ್ತಿ, ನಗರಸಭೆ, ಪುರಸಭೆ ಮಾಜಿ ಅಧ್ಯಕ್ಷರು, ಸದಸ್ಯರು ಸೇರಿದಂತೆ ಕಾರ್ಯಕರ್ತರು, ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಮುಖಂಡರಿಗೆ ಸಚಿವ ಚಲುವರಾಯಸ್ವಾಮಿ, ಶಾಸಕ ಗಣಿಗ ರವಿಕುಮಾರ್, ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರು ಶಾಲು ಹಾಕಿ ಪಕ್ಷಕ್ಕೆ ಬರಮಾಡಿಕೊಂಡರು.

ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಮಾಜಿ ಸದಸ್ಯ ಎಚ್.ಎನ್.ಯೋಗೇಶ್, ನಗರಸಭೆ ಸದಸ್ಯೆ ಮಂಜುಳಾ, ಮಾಜಿ ಸದಸ್ಯರಾದ ಮಂಜು, ಆಯೇಷಾ ತಬ್ಸಂ, ಚಂದ್ರಕುಮಾರ, ಎಪಿಎಂಸಿ ಅಧ್ಯಕ್ಷ ರಘು, ಪುರಸಭಾ ಮಾಜಿ ಉಪಾಧ್ಯಕ್ಷ, ಗಣೇಶ್, ತಾಪಂ ಮಾಜಿ ಅಧ್ಯಕ್ಷ ಬೈರವ, ಕೆರಗೋಡು ಗ್ರಾಪಂ ಅಧ್ಯಕ್ಷ ನವೀನ್‌ಕುಮಾರ್, ಸೇರಿದಂತೆ ಜೆಡಿಎಸ್, ಬಿಜೆಪಿ ಪಕ್ಷದ ನೂರಾರು ಮುಖಂಡರು, ಕಾರ್ಯಕರ್ತರು ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.

ಲೋಕಸಭಾ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ಶಾಸಕ ಪಿ.ರವಿಕುಮಾರ್ ಅವರು ಜೆಡಿಎಸ್-ಬಿಜೆಪಿ ಪಕ್ಷದಲ್ಲಿದ್ದವರ ಮನವೊಲಿಸಿ ಕೈ ಪಾಳಯಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಹಲವು ಪ್ರಮುಖ ಮುಖಂಡರು-ಕಾರ್ಯಕರ್ತರ ಸೇರ್ಪಡೆಯಿಂದ ಕಾಂಗ್ರೆಸ್‌ಗೆ ಬಲ ತುಂಬಿದಂತಾಗಿದೆ.

ಸಮಾರಂಭದಲ್ಲಿ ಶಾಸಕ ಪಿ.ರವಿಕುಮಾರ್ ಮಾತನಾಡಿ, ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ ಎಂಬುದು ಗೊತ್ತಾಗುತ್ತಿದ್ದಂತೆ ಜೆಡಿಎಸ್, ಬಿಜೆಪಿಯ ನೂರಾರು ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಸೇರಲು ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅಲ್ಲಿಂದ ಪ್ರವಾಹದಂತೆ ಕಾಂಗ್ರೆಸ್ ಕಡೆ ಹರಿದುಬರಲಿದ್ದಾರೆ ಎಂದು ಭವಿಷ್ಯ ನುಡಿದರು.

ಕಳೆದ ೩೦ ವರ್ಷದಿಂದ ಜೆಡಿಎಸ್ ಸುಳ್ಳಿನ ಸರಮಾಲೆಯನ್ನೇ ಸೃಷ್ಟಿಸಿ ಜಿಲ್ಲೆಯನ್ನು ಅಭಿವೃದ್ಧಿಯಿಂದ ವಂಚಿತಗೊಳ್ಳುವಂತೆ ಮಾಡಿದೆ. ಸುಳ್ಳು ಮತ್ತು ಅಭಿವೃದ್ಧಿ ಮೇಲೆ ಈ ಚುನಾವಣೆ ನಡೆಯಲಿದೆ. ಸತ್ಯ, ಅಭಿವೃದ್ಧಿ ಬೇಕಿದ್ದರೆ ಕಾಂಗ್ರೆಸ್ ಬೆಂಬಲಿಸಿ. ಕಣ್ಣೀರಾಕಿ ವೋಟ್ ಕೇಳುವವರಿಗೆ ಕಿವಿಗೊಡಬೇಡಿ ಎಂದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ೧೦ ತಿಂಗಳಲ್ಲಿ ಹೊಸ ಸಕ್ಕರೆ ಕಾರ್ಖಾನೆಗೆ ೫೦೦ ಕೋಟಿ ರು. ಘೋಷಣೆ ಮಾಡಲಾಗಿದೆ. ಇದು ನಮ್ಮೆಲ್ಲರಿಗೆ ಖುಷಿ ತಂದಿದೆ, ಮಂಡ್ಯ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಅಭಿವೃದ್ಧಿ ಕೆಲಸಕ್ಕಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವುದರೊಂದಿಗೆ ಇನ್ನು ಹಲವು ಯೋಜನೆಗಳು ಜಿಲ್ಲೆಗೆ ದೊರಕಲು ಹೆಚ್ಚು ಮತಗಳಿಂದ ಸ್ಟಾರ್ ಚಂದ್ರು ಅವರನ್ನ ಗೆಲ್ಲಿಸುವಂತೆ ಮನವಿ ಮಾಡಿದರು.

೩೩ ಕೋಟಿ ರು. ವೆಚ್ಚದಲ್ಲಿ ಮಂಡ್ಯದೊಳಗೆ ಹಾದುಹೋಗಿರುವ ಹೆದ್ದಾರಿ ರಸ್ತೆಯನ್ನು ಉಮ್ಮಡಹಳ್ಳಿ ಗೇಟ್‌ನಿಂದ ಕಿರಗಂದೂರು ರಸ್ತೆಯವರೆಗೆ ಅಭಿವೃದ್ಧಿಪಡಿಸಲಾಗುತ್ತಿದೆ. ಇದು ಅತ್ಯಂತ ಗುಣಾತ್ಮಕವಾಗಿ ರಸ್ತೆಯನ್ನು ಅಭಿವೃದ್ಧಿ ಪಡಿಸುವುದರೊಂದಿಗೆ ಪ್ರಮುಖ ವೃತ್ತಗಳನ್ನು ಅತ್ಯಾಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸಿ ನಗರಕ್ಕೆ ಹೊಸ ರೂಪ ನೀಡಲಾಗುವುದು ಎಂದರು.

೭೫ ವರ್ಷಗಳಿಂದ ತಮಿಳುನಾಡಿಗೆ ಹಕ್ಕುಪತ್ರ ಕೊಟ್ಟಿರಲಿಲ್ಲ. ಅದನ್ನು ಈಗ ನಾವು ಅಧಿಕಾರಕ್ಕೆ ಬಂದ ಮೇಲೆ ಕೊಡಿಸಿದ್ದೇವೆ. ಮಂಡ್ಯ ನಗರದ ಎಲ್ಲಾ ನಿವಾಸಿಗಳಿಗೂ ಮುಂದಿನ ದಿನಗಳಲ್ಲಿ ಹಕ್ಕುಪತ್ರ ದೊರಕಿಸಿಕೊಟ್ಟಿದ್ದೇವೆ. ಇಂತಹ ಯಾವುದಾದರೂ ಕೆಲಸ ಮಾಡಿದ್ದೇನೆ ಎಂದು ಜೆಡಿಎಸ್ ಶಾಸಕರಾಗಿದ್ದವರು ಮುಂದೆ ಬಂದು ಹೇಳಲಿ ಎಂದು ಸವಾಲು ಹಾಕಿದರು.

ವಿರೋಧ ಪಕ್ಷದವರಿಗೆ ಮತ ಹಾಕಿದರೆ ಅವರು ಅಭಿವೃದ್ಧಿಗೆ ಅಡ್ಡಗಾಲಾಗುತ್ತಾರೆ. ಆದ್ದರಿಂದ ಜನರು ಮತ್ತೆ ತೊಂದರೆಗೆ ಒಳಗಾಗಬೇಕಾಗುತ್ತದೆ. ಇದರಿಂದ ಅಭಿವೃದ್ಧಿ ಮತ್ತಷ್ಟು ಹಿನ್ನಡೆಯಾಗುತ್ತದೆ. ಅದಕ್ಕಾಗಿ ಸ್ಟಾರ್ ಚಂದ್ರು ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಸಭೆಯಲ್ಲಿ ಸಚಿವ ಎನ್.ಚಲುವರಾಯಸ್ವಾಮಿ, ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು), ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ಪಿ.ಎಂ.ನರೇಂದ್ರಸ್ವಾಮಿ, ವಿಧಾನಪರಿಷತ್ ಸದಸ್ಯ ದಿನೇಶ್‌ಗೂಳಿಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಾ ಶ್ರೀಕಾಂತ್ ಇತರರಿದ್ದರು.