ಚಾಮರಾಜನಗರ ಹಾಗೂ ಧಾರವಾಡ ತಂಡಗಳು ತೃತೀಯ ಸ್ಥಾನವನ್ನು ಹಂಚಿಕೊಂಡವು.

ಕನ್ನಡಪ್ರಭ ವಾರ್ತೆ ಮೈಸೂರು

ಕರ್ನಾಟಕ ಅಮೇಚೂರ್‌ ಖೋ ಖೋ ಅಸೋಸಿಯೇಷನ್‌ ಮಾಜಿ ಅಧ್ಯಕ್ಷ ಹಾಗೂ ಏಕಲವ್ಯ ಪ್ರಶಸ್ತಿ ವಿಜೇತ ದಿ. ಎನ್‌. ಪ್ರಕಾಶ್‌ ಅವರ ಸ್ಮರಣಾರ್ಥ ನಡೆಸಿದ ಪುರುಷರ ರಾಜ್ಯ ಮಟ್ಟದ ಸೀನಿಯರ್‌ ಖೋ ಖೋ ಪಂದ್ಯಾವಳಿಯಲ್ಲಿ ರಾಯಚೂರು ತಂಡ ಚಾಂಪಿಯನ್‌ ಎನಿಸಿಕೊಂಡಿತು. ಮೈಸೂರು ತಂಡ ರನ್ನರ್‌ ಅಪ್‌ ಆಯಿತು.

ಚಾಮರಾಜನಗರ ಹಾಗೂ ಧಾರವಾಡ ತಂಡಗಳು ತೃತೀಯ ಸ್ಥಾನವನ್ನು ಹಂಚಿಕೊಂಡವು. ರಾಯಚೂರಿನ ಕಿರಣ್‌- ಅತ್ಯುತ್ತಮ ರಕ್ಷಕ, ಮೈಸೂರಿನ ಗಗನ್‌- ಅತ್ಯುತ್ತಮ ಆಕ್ರಮಣಕಾರ, ರಾಯಚೂರಿನ ಶಿವಪ್ಪ- ಅತ್ಯುತ್ತಮ ಆಲ್‌ ರೌಂಡರ್‌ ಪ್ರಶಸ್ತಿ ಪಡೆದರು.ಮೈಸೂರಿನ ಕುವೆಂಪುನಗರದ ವಿವೇಕಾನಂದ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾವಳಿಯಲ್ಲಿ ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಬಹುಮಾನಗಳನ್ನು ವಿತರಿಸಿದರು. ಅಸೋಸಿಯೇಷನ್‌ ಜಿಲ್ಲಾಧ್ಯಕ್ಷ ನಾಗರಾಜ ವಿ. ಬೈರಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಎಂ.ಕೆ. ಸೋಮಶೇಖರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌, ಸಾಮಾಜಿಕ ಹೋರಾಟಗಾರ ಅಹಿಂದ ಜವರಪ್ಪ, ಜನತಾ ಏಜೆನ್ಸೀಸ್‌ ಮಾಲೀಕ ಜಿನೇಶ್‌ ಮುಖ್ಯ ಅತಿಥಿಗಳಾಗಿದ್ದರು. ಜಿಲ್ಲಾ ರಾಜ್ಯ ಸರ್ಕಾರಿ ಗ್ರೇಡ್‌-1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜೆ. ರವಿ, ಶಿಕ್ಷಣ ಇಲಾಖೆಯ ಅಧಿಕಾರಿ ಸ್ವಾಮಿ, ಎಲ್ಲೈಸಿಯ ಕೃಷ್ಣಸ್ವಾಮಿ, ಖೋ ಖೋ ಆಟಗಾರ ಶ್ರೀಪತಿ ಭಟ್‌ ವಿಶೇಷ ಆಹ್ವಾನಿತರಾಗಿದ್ದರು. ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ರವಿಕುಮಾರ್‌, ಅಸೋಸಿಯೇಷನ್‌ನ ಸಿ.ಎಸ್. ಮಂಜುನಾಥ್‌, ಎನ್‌. ಅಶೋಕ್‌, ಎನ್‌. ಜೀವೇಂದ್ರಕುಮಾರ್‌, ಸಂದೇಶ್‌ ಪ್ರಕಾಶ್‌, ಸಿ.ಎಪ್‌. ಜಾಡರ್‌, ಚಿನ್ನಮೂರ್ತಿ, ಮಹದೇವಪ್ಪ, ಪ್ರಕಾಶ್‌, ಕೃಷ್ಣಸ್ವಾಮಿ ಮೊದಲಾದವರು ಇದ್ದರು. ಡಾ. ಅಮ್ಮ ರಾಮಚಂದ್ರ ಮತ್ತು ತಂಡದವರು ಸಂವಿಧಾನ ಪೀಠಿಕೆ ಹಾಡಿದರು. ಬಾಕ್ಸ್‌.

ಕ್ರೀಡೆಗಳು ಭಾತೃತ್ವ ಬೆಳೆಸಲು ಸಹಕಾರಿ- ಡಾ.ಎಚ್‌.ಸಿ. ಮಹದೇವಪ್ಪ

ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅವರು, ಕ್ರೀಡೆಗಳು ಭಾತೃತ್ವ ಬೆಳೆಸಲು ಸಹಕಾರಿಯಾಗಿವೆ ಎಂದರು.

ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಸಂವಿಧಾನದಲ್ಲಿ ಆಶಯ ವ್ಯಕ್ತಪಡಿಸಿರುವಂತೆ ಭಾರತೀಯರಾದ ನಾವೆಲ್ಲರೂ ಒಂದೇ. ಜಾತಿ, ಪ್ರಾದೇಶಿಕತೆ, ಧರ್ಮ ಯಾವುದೂ ಇಲ್ಲ ಎಂದು ಅವರು ಹೇಳಿದರು.

ಭಾಗವಹಿಸಿದ್ದ ಎಲ್ಲ ತಂಡಗಳು ಕ್ರೀಡಾ ಸ್ಫೂರ್ತಿಯಿಂದ ಆಡಿವೆ. ಅದರಲ್ಲೂ ರಾಯಚೂರು ಹಾಗೂ ಮೈಸೂರು ತಂಡಗಳು ನಡುವಿನ ಪಂದ್ಯ ನೋಡಿದಾಗ ಕ್ರಿಕೆಟ್‌ನ

ಟಿ20 ಗಿಂತ ರೋಚಕವಾಯಿತು ನಡೆಯಿತು. ಅಂತಿಮವಾಗಿ ಕ್ರೀಡೆ ಗೆದ್ದಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.