ಸಾರಾಂಶ
ಬಾಲಕೃಷ್ಣ ಜಾಡಬಂಡಿ
ಹುಬ್ಬಳ್ಳಿ:ಮಳೆ ಬಂದರೆ ಮನೆಗೆ ನೀರು ಬರುವುದು ಉಚಿತ, ಬೇಸಿಗೆಯಲ್ಲಿ ಬಯಸದಿದ್ದರೂ ದೂಳು ಖಚಿತ.
ಇದು ಸ್ಮಾರ್ಟ್‌ಸಿಟಿಯಾಗುತ್ತಿರುವ ವಾಣಿಜ್ಯ ನಗರಿಯ ಕೊಳಗೇರಿ ಪ್ರದೇಶವಾದ ಆನಂದ ನಗರದ ನಿವಾಸಿಗಳಿಗೆ ನಮ್ಮ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದ ಸಿಕ್ಕಿರುವ ಭಾಗ್ಯ.ಹಳೇಹುಬ್ಬಳ್ಳಿ ಭಾಗದ ಅತ್ಯಂತ ಹಿಂದುಳಿದ ಹಾಗೂ ಕೊಳಗೇರಿ ಪ್ರದೇಶವಾಗಿರುವ ಆನಂದ ನಗರ ಹೆಸರಿಗೆ ಆನಂದ ನಗರವಾಗಿದೆ. ದೂಳುಮಯ ರಸ್ತೆ, ಚರಂಡಿ, ಕುಡಿಯುವ ನೀರಿನ ಸಮಸ್ಯೆ ಹೀಗೆ ಸಮಸ್ಯೆಗಳ ಸರಮಾಲೆಯಲ್ಲಿ ಇಲ್ಲಿನ ನಿವಾಸಿಗಳು ಜೀವನ ನಡೆಸುತ್ತಿದ್ದಾರೆ.
ಈ ನಗರ 1999ರಲ್ಲಿ ಸ್ಲಂ ಪ್ರದೇಶ ಎಂದು ಘೋಷಿತವಾಗಿದೆ. ಸಾವಿರಾರು ಕುಟುಂಬಗಳು ಇಲ್ಲಿ ಜೀವನ ನಡೆಸುತ್ತಿವೆ. ಆನಂದ ನಗರದ ಒಳರಸ್ತೆಗಳು ಎಂದರೆ ದೇವರಿಗೆ ಪ್ರೀತಿ ಎನ್ನುವಂತಾಗಿದೆ. ಒಮ್ಮೆ ನಿರ್ಮಾಣವಾದ ರಸ್ತೆ ಒಂದು ಗಂಟೆಯ ಧಾರಾಕಾರ ಮಳೆಗೆ ತೇಲಿ ಹೋಗುತ್ತದೆ. ಮತ್ತೆ ರಸ್ತೆಗಾಗಿ ಇಲ್ಲಿನ ಜನರು ವರ್ಷಗಟ್ಟಲೇ ಕಾಯಬೇಕು.ಆನಂದ ನಗರದಿಂದ ಗೋಕುಲ ರಸ್ತೆ, ಅಕ್ಷಯ ಪಾರ್ಕ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಕೆಮ್ಮಣ್ಣಿನಿಂದ ಕೂಡಿದೆ. ಮಳೆಗೆ ಕೆಸರುಗುಂಡಿಯಂತಾಗುತ್ತದೆ. ಇನ್ನು ಬೇಸಿಗೆಯಲ್ಲಿ ದೂಳಿನ ಸ್ವರ್ಗ. ಒಮ್ಮೆ ಆನಂದ ನಗರದಿಂದ ಈ ರಸ್ತೆಯಲ್ಲಿ ಹೋಗಿ ಬಂದರೆ ಮತ್ತೊಮ್ಮೆ ಈ ಕಡೆ ಹೋಗುವುದೇ ಬೇಡ ಎನಿಸುವುದಂತೂ ಸತ್ಯ. ಒಳರಸ್ತೆ ನಿರ್ಮಿಸುವುದೇ ಅಪರೂಪ. ಅದರಲ್ಲೂ ನಿರ್ಮಿಸಿದ ರಸ್ತೆಯನ್ನು ಯಾವುದೋ ಕಾಮಗಾರಿಗೆಂದು ಅಗೆಯುತ್ತಾರೆ. ವಾಪಸ್ ಆ ಕಡೆ ಯಾರೂ ಮುಖ ಮಾಡಿ ಕೂಡ ನೋಡಲ್ಲ. ರಸ್ತೆಯ ನಟ್ಟನಡುವೆ, ಅಕ್ಕಪಕ್ಕದಲ್ಲಿ ಮಾರುದ್ದ ಗುಂಡಿ ತೆಗೆಯುತ್ತಾರೆ. ಅದು ವರ್ಷಗಟ್ಟಲೇ ಹಾಗೇ ಇರುತ್ತದೆ. ಇದರಿಂದ ಅಲ್ಲಿನ ಜನರು ರೋಸಿ ಹೋಗಿದ್ದಾರೆ. ದಿನಾ ಸಾಯುವವರಿಗೆ ಅಳುವವರು ಯಾರು ಎಂಬಂತೆ ಆಗಿದೆ ಇಲ್ಲಿನವರ ಪರಿಸ್ಥಿತಿ.
ಕಸದ ವಾಹನ ಸರಿಯಾಗಿ ಬರಲ್ಲ. ಈ ರಸ್ತೆಯ ಅವ್ಯವಸ್ಥೆಯಿಂದ ಸಾಕಾಗಿ ಹೋಗಿದೆ. ಮಕ್ಕಳು ಹೊರಗಡೆ ಹೋದರೆ ಎಲ್ಲಿ ಬಿದ್ದು ಬರುತ್ತಾರೆ ಎಂಬ ಭಯಯೇ ಕಾಡುತ್ತಿರುತ್ತದೆ. ಸಮಸ್ಯೆ ಇದೆಯಾ, ಇಲ್ಲವಾ ಎಂದು ಯಾರೂ ಕೇಳಲ್ಲ. ಸಮಸ್ಯೆ ಇದೆ ಎಂದು ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎನ್ನುತ್ತಾರೆ ಆನಂದ ನಗರದ ನಿವಾಸಿ ಶಂಶಾದ್ ಬೇಗಂ.ರಸ್ತೆ ನಿರ್ಮಾಣ ಮಾಡುವ ಮುನ್ನ ಪೈಪ್‌ಲೈನ್ ಸೇರಿದಂತೆ ಎಲ್ಲ ಕೆಲಸ ಮಾಡಬೇಕು. ರಸ್ತೆ ಮಾಡಿದ ಮೇಲೆ ಮತ್ತೆ ರಸ್ತೆ ಅಗೆಯುವುದು ಏಕೆ? ಪುನಃ ಅದನ್ನು ಸರಿಪಡಿಸುವವರು ಯಾರು ಎಂಬುದು ಯಕ್ಷ ಪ್ರಶ್ನೆಯಾಗಿದೆ. ಅವರನ್ನು ಕೇಳಿದರೆ ಇವರ ಮೇಲೆ, ಇವರನ್ನು ಕೇಳಿದರೆ ಅವರ ಮೇಲೆ ಹಾಕುತ್ತಾರೆ ಯಾರನ್ನು ಕೇಳಬೇಕು ಎಂಬುದೇ ತಿಳಿಯುತ್ತಿಲ್ಲ ಎನ್ನುತ್ತಾರೆ ಇಲ್ಲಿನ ನಿವಾಸಿ ನಿವಾಸಿಗಳು.
ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಲಂ ಪ್ರದೇಶವಾದ ಆನಂದ ನಗರದ ಸಮಗ್ರ ಅಭಿವೃದ್ಧಿಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂಬುದು ಇಲ್ಲಿನ ಜನರ ಒತ್ತಾಯವಾಗಿದೆ.ಸ್ಲಂ ಎಂದ ಕೂಡಲೇ ಕಳಪೆಮಟ್ಟದ ಕಾಮಗಾರಿ ನಡೆಸಿ ರಸ್ತೆ ಮಾಡುತ್ತಾರೆ. ಆ ರಸ್ತೆ ಒಂದೇ ಮಳೆ ಬಂದರೆ ನಾಪತ್ತೆಯಾಗುತ್ತದೆ. ಆಮೇಲೆ ಇಲ್ಲಿನ ಜನರು ನಿತ್ಯ ಪರಿತಪಿಸುತ್ತಾ ಬದುಕುಬೇಕು ಎಂದು ದಯಾನಂದ ಬೆಂಡಿಗೇರಿ ಹೇಳಿದರು.
ಮಳೆ ಬಂದಾಗ ಮನೆಗೆ ನೀರು ನುಗ್ಗುತ್ತದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಬಂದು ನೋಡಿ ಹೋಗುತ್ತಾರೆ. ಆ ಮೇಲೆ ನಮ್ಮ ಪಾಡನ್ನು ಯಾರೂ ಕೇಳುವುದಿಲ್ಲ ಎಂದು ದುರ್ಗವ್ವ ಚಂದಾವರಿ ಹೇಳಿದರು.