ಸಾರಾಂಶ
ಹರಪನಹಳ್ಳಿ: ಸಮಾಜ ಪರಿವರ್ತನೆಯಾಗಬೇಕಾದರೆ ಜನ ಸಾಮಾನ್ಯರು ರಾಜಕೀಯ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದು ಇನ್‌ಸೈಟ್ಸ್ ಐಎಎಸ್ ಸಂಸ್ಥೆಯ ಸಂಸ್ಥಾಪಕ, ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ. ವಿನಯಕುಮಾರ್ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ತಾಲೂಕು ಕನಕ ನೌಕರರ ಸಂಘ, ಬೀರೇಶ್ವರ ಕುರುಬ ಸಂಘ ಮತ್ತು ಯುವ ಘಟಕದ ಸಹಯೋಗದಲ್ಲಿ ಶನಿವಾರ ಅಯೋಜಿಸಿದ್ದ ಭಕ್ತ ಕನಕದಾಸರ ೫೩೭ನೇ ಜಯಂತ್ಯುತ್ಸವ ಹಾಗೂ ಪ್ರತಿಭಾ ಪುರಸ್ಕಾರ, ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ತಮ್ಮ ಪ್ರತಿಭೆಯನ್ನು ಹೊರಹಾಕಬೇಕಿದೆ. ಕುರುಬ ಸಮುದಾಯದ ಮಕ್ಕಳಿಗೆ ಐಎಎಸ್, ಕೆಎಎಸ್, ವಿದ್ಯಾಭ್ಯಾಸ ಕೊಡಲು ಪೋಷಕರು ಮುಂದಾಗಬೇಕು. ಇಂದು ಪ್ರತಿಭೆ ಕೇವಲ ಕೆಲವೇ ಕೆಲವು ವರ್ಗಗಳಿಗೆ ಸೀಮಿತವಾಗುತ್ತಿದೆ. ಈ ಬಗ್ಗೆ ನಾವು ಜಾಗೃತರಾಗಬೇಕು ಎಂದರು.
ಸಿದ್ದರಾಮಯ್ಯ ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾದರೂ ಕುರುಬ ಸಮಾಜ ಬೆಳವಣಿಗೆಯಾಗಿಲ್ಲ. ಈಗಲೂ ಈ ಸಮುದಾಯವನ್ನು ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಕಡೆಗಣಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.ಹಳ್ಳಿಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕಿದೆ. ಅನೇಕ ಅಭಿವೃದ್ಧಿ ಕೆಲಸ ಮಾಡುವ ಗುರಿ ಹಾಕಿಕೊಂಡಿದ್ದು, ಮಂದೆ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲು ಪ್ರಯತ್ನಿಸುತ್ತಿದ್ದೇನೆ. ನಿಮ್ಮೆಲ್ಲರ ಸಹಕಾರ ಅಗತ್ಯವಿದೆ ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಆರ್. ಗಂಗಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಲವು ಇತಿಹಾಸವಿರುವ ಹಾಲುಮತ ಸಮುದಾಯಕ್ಕೆ ಗೌರವಸ್ಥಾನವಿದ್ದು, ಸಮಾಜದ ಮಕ್ಕಳು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಮುಂದೆ ಬರಬೇಕು ಎಂದು ಹೇಳಿದರು.ಮುಖಂಡ ವೈ.ಕೆ.ಬಿ. ದುರುಗಪ್ಪ ಮತ್ತು ಹಡಗಲಿ ಸಮಾಜ ಕಲ್ಯಾಣಾಧಿಕಾರಿ ಆನಂದ ಡೊಳ್ಳಿನ ಮಾತನಾಡಿ, ಕುರುಬ ಸಮುದಾಯ ಒಗ್ಗಟ್ಟಾಗಿ ಸಮುದಾಯದ ಏಳಿಗೆಗೆ ಶ್ರಮಿಸಬೇಕು, ಸರ್ಕಾರ ಎಲ್ಲ ರಂಗದಲ್ಲೂ ಸೌಲಭ್ಯಗಳನ್ನು ಕೊಡುತ್ತಿದೆ. ಅದರ ಬಳಕೆ ಮಾಡಿಕೊಂಡು ಸಾಮಾಜಿಕವಾಗಿ ಮುಖ್ಯ ವಾಹಿನಿಗೆ ಬರಬೇಕು ಎಂದರು.
ತಾಲೂಕು ಕುರುಬ ಸಮಾಜದ ಸಂಘದ ಅಧ್ಯಕ್ಷ, ವಕೀಲ ಬಂಡ್ರಿ ಗೋಣಿಬಸಪ್ಪ ಮಾತನಾಡಿ ಕನಕದಾಸರೂ ಸಾಕಷ್ಟು ಸಂಕಷ್ಟ ಅನುಭವಿಸಿ ಅಂದು ವ್ಯವಸ್ಥೆ ವಿರುದ್ದ ಹೋರಾಟ ಮಾಡಿ ಸಾಹಿತ್ಯದ ಮುಖಾಂತರ ಜಾಗೃತಿ ಮೂಡಿಸುವ ಕೆಲಸ ಮಾಡಿದರು. ಕನಕದಾಸರ ಜಯಂತಿ ನಿಮಿತ್ತ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಿದರೆ ಸಾಲದು, ಸಮುದಾಯದಲ್ಲಿ ಬರುವ ಸಮಸ್ಯೆಗಳು ಬಗೆಹರಿಸಿಕೊಂಡು ಮುಖ್ಯವಾಹಿನಿಗೆ ಬರುವಂತಾಗಬೇಕು ಎಂದರು.ತಾಲೂಕು ಕನಕ ನೌಕರರ ಸಂಘದ ಗೌರವಾದ್ಯಕ್ಷ ಎಸ್. ರಾಮಪ್ಪ, ಅಧ್ಯಕ್ಷ ಸಿದ್ದಪ್ಪ ವೈ.ಹರಿಂದ್ರಾಳ್ ಮಾತನಾಡಿದರು.
ಇದೇ ವೇಳೆ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಶಿಕ್ಷಕಿ ಜಿ.ಮಹಾದೇವಮ್ಮ, ಸಮಾಜ ಕಲ್ಯಾಣ ಅಧಿಕಾರಿ ಆನಂದ ಡೊಳ್ಳಿನ ಇವರಿಗೆ ಕನಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಜೋಗಿನರ ಭರತೇಶ, ಉದ್ದಾರ ಗಣೇಶ್, ಎಚ್. ವಸಂತಪ್ಪ, ಸತ್ತೂರು ಯಲ್ಲಮ್ಮ, ಮುಖಂಡರಾದ ಮುತ್ತಿಗಿ ಜಂಬಣ್ಣ, ಎಚ್.ಪಿ. ಬಸವರಾಜ, ವಕೀಲರಾದ ಮೈದೂರು ಮಲ್ಲಿಕಾರ್ಜುನ, ಬಸವರಾಜ್ ಹುಲಿಯಪ್ಪನವರ್, ವೆಂಕಟೇಶ ಬಾಗಲಾರ್, ಪಾಲಕ್ಷಪ್ಪ, ಎಚ್. ಪರಶುರಾಮ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಬಿ. ರಾಜಶೇಖರ, ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಂದ್ರಮೌಳಿ, ಶಿಕ್ಷಕರಾದ ಪದ್ಮರಾಜಜೈನ್, ಚನ್ನಪ್ಪ ಕಂಬಳಿ, ಬಡಗಿ ಮೆಹಬೂಬ್, ವೃಷಭೇಂದ್ರ, ತಿಮ್ಮಪ್ಪ, ಮಾರುತಿ, ಮಂಡಿ ನಾಗರಾಜ, ಚಂದ್ರಪ್ಪ, ಕೆ.ರತ್ನಮ್ಮ, ಶ್ರೀದೇವಿ ಆನಂದ ದೊಳ್ಳಿನ, ಸೇರಿದಂತೆ ಇತರರು ಇದ್ದರು.