ಸಾರಾಂಶ
ಹಾನಗಲ್ಲ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು ಒಂದು ವರ್ಷ ಗತಿಸಿದೆ. ಈ ಅವಧಿಯಲ್ಲಿ ಸರ್ಕಾರ ಕೊಟ್ಟ ಮಾತು ಉಳಿಸಿಕೊಂಡಿದೆ. ಅತಿವೃಷ್ಟಿ, ಅನಾವೃಷ್ಟಿ, ಕೊರೋನಾ ಕಾರಣಗಳಿಂದ ಸಂಕಷ್ಟಕ್ಕೆ ಸಿಲುಕಿದ್ದ ಜನಸಾಮಾನ್ಯರಿಗೆ ಗ್ಯಾರಂಟಿ ಯೋಜನೆಗಳ ಮೂಲಕ ಆರ್ಥಿಕ ಶಕ್ತಿ ತುಂಬಿ, ಗೌರವದ ಜೀವನ ನಡೆಸಲು ಅವಕಾಶ ಕಲ್ಪಿಸಿಕೊಟ್ಟಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು. ತಾಲೂಕಿನ ಕೊಪ್ಪರಸಿಕೊಪ್ಪ ಗ್ರಾಮದಲ್ಲಿ ವಿವಿಧ ಆಶ್ರಯ ವಸತಿ ಯೋಜನೆಗಳಡಿ ೧೩ ಜನ ಫಲಾನುಭವಿಗಳಿಗೆ ಮನೆ ನಿರ್ಮಾಣದ ಆದೇಶ ಪತ್ರ ವಿತರಿಸಿ ಅವರು ಮಾತನಾಡಿದರು. ಬಹುದೊಡ್ಡ ಪ್ರಮಾಣದಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ಸರ್ಕಾರ ಜನಸಾಮಾನ್ಯರಿಗೆ ನೇರವಾಗಿ ಆರ್ಥಿಕ ನೆರವು ನೀಡುತ್ತಿದೆ. ಇದರಿಂದ ಶಕ್ತಿ ಹೀನರಿಗೆ ಶಕ್ತಿ ತುಂಬಿದಂತಾಗಿದೆ. ಒಂದು ಕಡೆ ಇಂಥ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಾಗ ಇನ್ನೊಂದಿಷ್ಟು ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಸ್ವಲ್ಪ ವ್ಯತ್ಯಾಸ ಆಗುವುದು ಸಾಮಾನ್ಯ. ಬೆಲೆ ಏರಿಕೆ ಬಿಸಿ, ನಾನಾ ಸಂಕಷ್ಟಗಳ ಕಾರಣದಿಂದ ಕುಟುಂಬ ನಿರ್ವಹಣೆಗೂ ಹೆಣಗಾಟ ನಡೆಸುವಂಥ ಸ್ಥಿತಿ ಇದ್ದಿದ್ದರಿಂದಲೇ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೆ ತಂದು ಆಸರೆಗೆ ನಿಂತಿದೆ ಎಂದರು.ಆಶ್ರಯ ವಸತಿ ಯೋಜನೆಗಳಡಿ ಮನೆ ನಿರ್ಮಾಣದ ಆದೇಶ ಪತ್ರ ಪಡೆದಿರುವ ಫಲಾನುಭವಿಗಳು ನಿಗದಿತ ಕಾಲಮಿತಿಯೊಳಗೆ ಮನೆ ನಿರ್ಮಾಣ ಮುಗಿಸಬೇಕು. ವಿಳಂಬ ಮಾಡಿದರೆ ಅನುದಾನ ಬಿಡುಗಡೆಗೆ ತಾಂತ್ರಿಕ ಅಡಚಣೆ ಉಂಟಾಗಲಿದೆ. ೪ ವರ್ಷಗಳ ಬಳಿಕ ತಾಲೂಕಿನ ಪ್ರತಿ ಗ್ರಾಪಂಗಳಿಗೆ ೩೦-೪೦ ಆಶ್ರಯ ಮನೆಗಳು ಲಭಿಸಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮನೆಗಳ ಮಂಜೂರಾತಿಗೆ ಶ್ರಮ ವಹಿಸುವ ಭರವಸೆ ನೀಡಿದ ಶಾಸಕ ಮಾನೆ, ಸರ್ಕಾರ ರಸ್ತೆ , ಗಟಾರು ನಿರ್ಮಾಣಕ್ಕೆ ಅನುದಾನ ಒದಗಿಸಲಿದೆ. ಆದರೆ ಗಟಾರು ಸ್ವಚ್ಛತೆ, ನೀರು ಸರಬರಾಜಿಗೆ ಅನುದಾನ ನೀಡುವುದಿಲ್ಲ. ಹಾಗಾಗಿ ಸಾರ್ವಜನಿಕರು ನಿಗದಿತ ಸಮಯಕ್ಕೆ ತಮ್ಮ ಪಾಲಿನ ಟ್ಯಾಕ್ಸ್ ಹಣವನ್ನು ಸ್ಥಳೀಯ ಗ್ರಾಪಂಗಳಿಗೆ ಭರಿಸಿದರೆ ಮೂಲಸೌಲಭ್ಯ ಒದಗಿಸಲು ಅನುಕೂಲವಾಗಲಿದೆ ಎಂದರು. ಗ್ರಾಪಂ ಅಧ್ಯಕ್ಷ ಹನುಮಂತಪ್ಪ ಮಾಳಾಪೂರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ನನ್ನಿಮಾ ನಾಸಿಪುಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ, ಮುಖಂಡರಾದ ವಿಷ್ಣುಕಾಂತ ಜಾಧವ, ಮಂಜುಳಾ ಓಲೇಕಾರ, ಮಹ್ಮದ್‌ಹಯಾತ್, ಗೀತಾ ವಡ್ಡರ, ಕಲಾವತಿ ದೇಸಾಯಿ, ಶಿವಾಜಿ ಸಾಳುಂಕಿ, ಮಂಜುನಾಥ ನಿಂಗೋಜಿ, ಮಕ್ಬೂಲ್‌ಸಾಬ ಬಡಗಿ, ಹನುಮಂತಪ್ಪ ಮರಡಿ, ಕಮಲವ್ವ ಹುಲ್ಲತ್ತಿ, ಪರಶುರಾಮ ಚಿಕ್ಕಣಗಿ, ಕೆ.ಡಿ. ನಾಗೋಜಿ, ಅಶೋಕ ಜಾಧವ, ಹೆಗ್ಗಪ್ಪ ಕಾಮನಹಳ್ಳಿ ಸೇರಿದಂತೆ ಇನ್ನೂ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.