ಸಾರಾಂಶ
ದಾವಣಗೆರೆಯಲ್ಲಿ ಕಟ್ಟಡ ಕಾರ್ಮಿಕರು ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಕುಮಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ದಾವಣಗೆರೆ
ನೋಂದಾಯಿತ ಕಟ್ಟಡ ಕಾರ್ಮಿಕರು ಮತ್ತು ಅವರ ಅವಲಂಬಿತರಿಗೆ ಆರೋಗ್ಯ ತಪಾಸಣೆ ಮತ್ತು ತರಬೇತಿ ಒದಗಿಸುವ ಕಾರ್ಯಕ್ರಮದಲ್ಲಿ ಆಗಿದೆ ಎನ್ನಲಾದ ಅವ್ಯವಹಾರದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಕಟ್ಟಡ ಕಾರ್ಮಿಕರು ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಕುಮಾರ ಅಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಪ್ರಿವೆನ್ಷನ್ ಹೆಲ್ತ್ ಯೋಜನೆಯಡಿ ಆರೋಗ್ಯ ತಪಾಸಣೆಗೆ 2022ನೇ ಸಾಲಿನಲ್ಲಿ ರಾಜ್ಯ ಮತ್ತು ಹೊರ ರಾಜ್ಯದ ಖಾಸಗಿ ಆಸ್ಪತ್ರೆಗೆ ಗುತ್ತಿಗೆ ನೀಡಲಾಗಿತ್ತು. ಅದೇ ರೀತಿ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ನೀಡಲಾಗಿದೆ. ಯಾವುದೇ ಕಾರ್ಮಿಕರ ಗಮನಕ್ಕೂ ತಾರದೇ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಗಿದೆ ಎಂದು ದೂರಿದರು.
ಒಬ್ಬ ಕಾರ್ಮಿಕರಿಗೆ ₹2954 ರಂತೆ 35,500 ಕಾರ್ಮಿಕರಿಗೆ ತಪಾಸಣೆ ನಡೆಸಲಾಗಿದೆ ಎಂದು ₹9.89 ಕೋಟಿ ಹಣ ವಿತ್ ಡ್ರಾ ಮಾಡಿರುವ ಬಗ್ಗೆ ಉನ್ನತಮಟ್ಟದ ಸಮಗ್ರ ತನಿಖೆ ನಡೆಸಬೇಕು. ಆರೋಗ್ಯ ತಪಾಸಣೆ ಹೆಸರಲ್ಲಿ ಹಣ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯ ಉಚ್ಚ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ನಾಗರಾಜ, ಇ.ರಾಜಪ್ಪ, ತಿಮ್ಮಯ್ಯ, ಪರಶುರಾಮ ಇತರರು ಇದ್ದರು.