ಬಾಬೂಜಿ ಜೀವನ, ಸಾಧನೆ ಸ್ಮರಣೆ ಅಗತ್ಯ

| Published : Jul 07 2024, 01:22 AM IST

ಸಾರಾಂಶ

ಡಾ.ಬಾಬು ಜಗಜೀವನ್ ರಾಮ್ ಅವರ ಪುಣ್ಯಸ್ಮರಣೆ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಾಬೂಜೀಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರಶೋಷಿತ ಸಮುದಾಯದಲ್ಲಿ ಹುಟ್ಟಿ ಸಮಾಜದ ಎಲ್ಲಾ ವರ್ಗಗಳ ಉದ್ಧಾರಕ್ಕಾಗಿ ದುಡಿದ ಡಾ.ಬಾಬು ಜಗಜೀವನ್ ರಾಮ್ ಅವರ ಜೀವನ ಸಾಧನೆಗಳನ್ನು ಸ್ಮರಿಸುವುದು ಅಗತ್ಯವಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಭಾರತದ ಉಪ ಪ್ರಧಾನಿ, ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್ ರಾಮ್ ಅವರ ೩೮ನೇ ಪುಣ್ಯಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಡಾ.ಬಾಬು ಜಗಜೀವನ್ ರಾಮ್ ಒಂದೇ ವರ್ಗಕ್ಕೆ ಸೀಮಿತರಾದವರಲ್ಲ. ಬಡವರು, ಶೋಷಿತರು, ದೀನದಲಿತರು ಸೇರಿದಂತೆ ಎಲ್ಲರ ಶ್ರೇಯೋಭಿವೃದ್ಧಿಗಾಗಿ ಅವಿರತವಾಗಿ ಶ್ರಮಿಸಿದ ಮಹಾನ್ ಸಮಾಜ ಸುಧಾರಕರು ಆಗಿದ್ದಾರೆ. ಸ್ವಾತಂತ್ರ ಹೋರಾಟಗಾರರಾಗಿದ್ದ ಬಾಬೂಜಿ ೭೮ ವರ್ಷಗಳ ಜೀವಿತಾವಧಿಯಲ್ಲಿ ೫೦ ವರ್ಷಗಳನ್ನು ರಾಜಕಾರಣದಲ್ಲೆ ಕಳೆದು ಅನೇಕ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದರು ಎಂದರು.

ತುರ್ತು ಪರಿಸ್ಥಿತಿ ಘೋಷಣೆಯಾದ ಸಂದರ್ಭದಲ್ಲಿ ಆಡಳಿತದ ಚುಕ್ಕಾಣಿ ಹಿಡಿದು ದೇಶವನ್ನು ಮುನ್ನೆಡೆಸಿದ ಕೀರ್ತಿ ಬಾಬೂಜಿಯವರಿಗೆ ಸಲ್ಲುತ್ತದೆ. ಆಹಾರ ಅಭಾವ ಉಂಟಾದಾಗ ಇತರೆ ದೇಶಗಳ ಆಹಾರ ಪರಿಸ್ಥಿತಿಯನ್ನು ಸಮಗ್ರವಾಗಿ ಅಧ್ಯಯನ ಮಾಡಿ ಭಾರತ ಆಹಾರ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ನೆರವಾದರು ಎಂದು ತಿಳಿಸಿದರು.

ಮುಖಂಡ ಅರಕಲವಾಡಿ ನಾಗೇಂದ್ರ ಮಾತನಾಡಿ, ದೇಶದಲ್ಲಿ ಜಾತೀಯ ವ್ಯವಸ್ಥೆ ಅತ್ಯಂತ ಕ್ರೂರವಾಗಿದ್ದ ಕಾಲಘಟ್ಟದಲ್ಲಿ ಅಂಬೇಡ್ಕರ್ ಹಾಗೂ ಬಾಬೂಜಿ ತಮಗಾದ ನೋವು, ಯಾತನೆಗಳನ್ನು ಮರೆತು ಸಮಾಜ ಸುಧಾರಣೆಗಾಗಿ ಇಡೀ ಜೀವನವನ್ನೇ ಮುಡಿಪಾಗಿಟ್ಟರು ಎಂದರು.

ಮುಖಂಡರಾದ ಜವರಯ್ಯ ಮಾತನಾಡಿ, ಅಂಬೇಡ್ಕರ್, ಬಾಬೂಜಿ ದೇಶದ ಎರಡು ಕಣ್ಮಣಿಗಳಾಗಿದ್ದಾರೆ. ತಳ ಸಮುದಾಯದ ಒಳಿತಿಗೆ ಶ್ರಮಿಸಿದ ಈ ಇಬ್ಬರು ನಾಯಕರ ದಿನಾಚರಣೆ, ಪುಣ್ಯಸ್ಮರಣೆ ಆಚರಣೆ ಮಾತ್ರ ಸಾಲದು. ಅವರ ಚಿಂತನೆ, ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜಕ್ಕೆ ಕೊಡುಗೆ ನೀಡಬೇಕು. ಅವರು ಹಾಕಿಕೊಟ್ಟ ಹಾದಿಯಲ್ಲಿ ಮುನ್ನೆಡೆಯಬೇಕು ಎಂದು ಹೇಳಿದರು.

ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ, ಉಪ ಕಾರ್ಯದರ್ಶಿ ಪಿ.ಲಕ್ಷ್ಮೀ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜು, ತಾಲೂಕು ಸಮಾಜ ಕಲ್ಯಾಣಾಧಿಕಾರಿ ನಂಜುಂಡೇಗೌಡ, ವಿವಿಧ ಇಲಾಖೆ ಅಧಿಕಾರಿಗಳು, ಸಮಾಜದ ಮುಖಂಡರು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.