ಸಾರಾಂಶ
ಪ್ರವೀಣ ಹೆಗಡೆ ಕರ್ಜಗಿಶಿರಸಿ: ನಗರ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣದ ಅಭಿವೃದ್ಧಿ ಕಾಮಗಾರಿ ಆಮೆಗತಿಯಲ್ಲಿ ಸಾಗಿರುವುದರಿಂದ ವಾಹನ ಸವಾರರು ತೊಂದರೆ ಅನುಭವಿಸುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಅರ್ಧಂಬರ್ಧ ರಸ್ತೆಯಲ್ಲಿ ಧೂಳುಮಯ ವಾತಾವರಣದಿಂದ ಜನತೆಯಲ್ಲಿ ಅಲರ್ಜಿ, ನೆಗಡಿ, ಕೆಮ್ಮು ಹಾಗೂ ಜ್ವರ ಬಾಧೆ ವಿಪರೀತ ಪ್ರಮಾಣದಲ್ಲಿ ವ್ಯಾಪಿಸಿ ಅನಾರೋಗ್ಯ ಸಮಸ್ಯೆಗೆ ಕಾರಣವಾಗಿದೆ.
ಹಿಂದಿನ ಸರ್ಕಾರದ ಅವಧಿಯಲ್ಲಿ ಐದುರಸ್ತೆ ಸರ್ಕಲ್‌ನಿಂದ ಯಲ್ಲಾಪುರ ನಾಕಾ ವರೆಗಿನ ರಸ್ತೆ ಅಗಲೀಕರಣಗೊಳಿಸಿ, ದ್ವಿಪಥ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಐದುರಸ್ತೆ ಸರ್ಕಲ್‌ನ ಕೆಳಭಾಗದಿಂದ ಪಂಡಿತ ಸಾರ್ವಜನಿಕ ಆಸ್ಪತ್ರೆ ವರೆಗೆ ಮತ್ತು ಎಪಿಎಂಸಿ ಕ್ರಾಸ್‌ನಿಂದ ಯಲ್ಲಾಪುರ ನಾಕಾದವರೆಗೆ ದ್ವಿಪಥ ರಸ್ತೆ ಕಾಮಗಾರಿ ಮುಕ್ತಾಯಗೊಂಡಿದ್ದು, ಸಾರ್ವಜನಿಕ ಆಸ್ಪತ್ರೆಯಿಂದ ಡೆವಲಪ್‌ಮೆಂಟ್ ಸೊಸೈಟಿವರೆಗೆನಿ ಮಧ್ಯಭಾಗದಲ್ಲಿ ಡಿವೈಡರ್ ಅಳವಡಿಸಲಾಗಿದೆ. ₹೧೨.೫ ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಲೋಕೋಪಯೋಗಿ ಕೆಲಸವು ವಿಳಂಬವಾದ ಹಿನ್ನೆಲೆಯಲ್ಲಿ ಅರೆಬರೆ ಕಾಮಗಾರಿಯಾಗಿದೆ. ಇದು ರಸ್ತೆ ಅಧ್ವಾನಕ್ಕೆ ದಾರಿ ಮಾಡಿಕೊಟ್ಟಿದೆ.ಅಧ್ವಾನಕ್ಕೆ ಯಾರು ಹೊಣೆ?: ಡಿವೈಡರ್ ಅಳವಡಿಸಿ, ದ್ವಿಪಥ ರಸ್ತೆಯನ್ನಾಗಿ ಮಾಡಲಾಗಿದೆಯೇ ಹೊರತು ಮರುಡಾಂಬರೀಕರಣ ಮಾಡದಿರುವ ಕಾರಣ ಹೊಂಡಗಳ ರಸ್ತೆಯಲ್ಲಿಯೇ ವಾಹನ ಸವಾರರು ಸಂಚಾರ ಮಾಡುವಂತಾಗಿದ್ದು, ಝೂ ಸರ್ಕಲ್, ರೋಟರಿ ಆಸ್ಪತ್ರೆ ಎದುರು, ಅಶ್ವಿನಿ ವೃತ್ತ, ಟಿಎಎಸ್ ಕ್ರಾಸ್, ರಾಘವೇಂದ್ರ ಸರ್ಕಲ್, ಮಾರಿಕಾಂಬಾ ಕಾಲೇಜು ಎದುರು, ಮರಾಠಿಕೊಪ್ಪ ಕ್ರಾಸ್ ಬಳಿ ಹೊಂಡಗಳು ಉಂಟಾಗಿ ದ್ವಿಚಕ್ರ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.ಈ ಭಾಗಗಳಲ್ಲಿ ಸರಿಯಾದ ಬೀದಿದೀಪವೂ ಇಲ್ಲದ ಕಾರಣ ರಸ್ತೆಗಳಲ್ಲಿರುವ ತಗ್ಗುಗಳು ಗೋಚರವಾಗದೇ ಬೈಕ್ ಸವಾರರು ಉರುಳಿ ಬೀಳುವಂತಾಗಿದೆ. ನಿರ್ವಹಣೆ ಎಂದು ಹೇಳಿ ಹೊಂಡಗಳಿಗೆ ಮಣ್ಣು ಹಾಗೂ ಕ್ರಷರ್ ಪೌಡರ್ ಹಾಕುತ್ತಾರೆ. ಬಿಸಿಲಿಗೆ ಕ್ರಷರ್ ಪೌಡರ್ ಧೂಳಾಗಿ ಹಾರಾಡುತ್ತದೆ. ಇದರಿಂದ ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ಅನಾರೋಗ್ಯದ ಸಮಸ್ಯೆ ಉಂಟಾಗುತ್ತಿದೆ.
ರಸ್ತೆ ಅಧ್ವಾನದ ಸ್ಥಿತಿಗೆ ಯಾರು ಹೊಣೆ? ಇದರ ಕುರಿತು ಲೊಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಕೆಲವೇ ದಿನದಲ್ಲಿ ರಸ್ತೆ ಕಾಮಗಾರಿ ಆರಂಭಿಸುತ್ತೇವೆ ಎನ್ನುತ್ತಾರೆ. ಗುತ್ತಿಗೆದಾರನನ್ನು ಪ್ರಶ್ನಿಸಿದರೆ ಈಗ ನಿರ್ವಹಿಸಿದ ಕಾಮಗಾರಿಯ ಪೂರ್ಣ ಪ್ರಮಾಣದಲ್ಲಿ ಹಣ ಬಿಡುಗಡೆಯಾಗಿಲ್ಲ. ಎಲ್ಲಿಂದ ಹಣ ತಂದು ಕಾಮಗಾರಿ ಮಾಡಬೇಕು ಎಂದು ಹೇಳುತ್ತಾರೆ. ಹೊಸ ಸರ್ಕಾರ ರಚನೆಯಾಗಿ ಒಂದೂವರೆ ವರ್ಷಗಳಾದರೂ ಕಾಮಗಾರಿ ಮುಕ್ತಾಯಗೊಳಿಸಲು ಇಚ್ಛಾಶಕ್ತಿ ತೋರಿಸದಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.ರಸ್ತೆ ಮ್ಯಾಪ್ ಬದಲಾವಣೆ?ಪಂಡಿತ್ ಸಾರ್ವಜನಿಕ ಆಸ್ಪತ್ರೆಯಿಂದ ಎಪಿಎಂಸಿ ಕ್ರಾಸ್‌ವರೆಗೆ ಸಂಪೂರ್ಣ ರಸ್ತೆ ಅಗಲೀಕರಣಗೊಳಿಸಿ, ದ್ವಿಪಥ ಕಾಮಗಾರಿ ಎಂದು ಯೋಜನೆಯಲ್ಲಿ ಮಂಜೂರಾಗಿತ್ತು. ಕೆಲ ಪ್ರಭಾವಿ ವ್ಯಕ್ತಿಗಳ ಜಾಗ ರಸ್ತೆಗೆ ಬಿಟ್ಟುಕೊಡಬೇಕಾಗುತ್ತದೆ, ಅಲ್ಲದೇ ಕೆಲವರು ಅಂಗಡಿ, ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಅವರನ್ನು ರಕ್ಷಿಸುವ ಉದ್ದೇಶ ಮತ್ತು ವೈಯಕ್ತಿಕ ಹಿತಾಸಕ್ತಿಯ ಕಾರಣಕ್ಕಾಗಿ ಯೋಜನಾ ವರದಿಯಲ್ಲಿದ್ದ ಮ್ಯಾಪ್ ಬದಲಾವಣೆ ಮಾಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಇನ್ನೊಂದು ಯೋಜನೆಯಲ್ಲಿ ಡೆವಲಪ್‌ಮೆಂಟ್ ಸೊಸೈಟಿಯಿಂದ ಅಶ್ವಿನಿ ವೃತ್ತದವರೆಗೆ ಈಗಿರುವ ರಸ್ತೆಗೆ ಮರು ಡಾಂಬರೀಕರಣ ಎಂದು ಬದಲಾವಣೆ ಮಾಡಲಾಗಿದೆ. ಶಾಸಕರು ಇದರ ಕುರಿತು ಗಮನವಹಿಸಿ, ಅಭಿವೃದ್ಧಿ ಹೊಂದುತ್ತಿರುವ ಶಿರಸಿ ನಗರಕ್ಕೆ ರಸ್ತೆಗೆ ಪ್ರಮುಖ ಆದ್ಯತೆ ನೀಡಿ, ಅನುಕೂಲ ಮಾಡಿಕೊಡಬೇಕು ಎನ್ನುತ್ತಾರೆ ಸಾರ್ವಜನಿಕರು.
ತಾತ್ಕಾಲಿಕ ದುರಸ್ತಿ: ನಗರದ ಅಶ್ವಿನಿ ಸರ್ಕಲ್ ಬಳಿ ಪ್ರತಿದಿನವೂ ವಾಹನ ದಟ್ಟಣೆ ಅಧಿಕವಾಗಿರುತ್ತದೆ. ಆ ಭಾಗದಲ್ಲಿ ರಸ್ತೆ ಸಂಪೂರ್ಣ ಕಿತ್ತಿದೆ. ಕ್ರಷರ್ ಪೌಡರ್ ತುಂಬಿ ತಾತ್ಕಾಲಿಕವಾಗಿ ದುರಸ್ತಿ ಮಾಡುವ ಬದಲು ಒಂದು ಭಾಗದಿಂದ ಸಂಪೂರ್ಣ ಕಾಮಗಾರಿ ಮುಕ್ತಾಯಗೊಳಿಸಲು ಇಚ್ಛಾಶಕ್ತಿ ತೋರಿಸಲಿ ಎಂದು ಸಾರ್ವಜನಿಕರಾದ ವೆಂಕಟೇಶ ಎಚ್. ತಿಳಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))