ಕ್ರೀಡೆಯಲ್ಲಿ ಗೆದ್ದವನು ನಾಯಕ, ಸೋತವನು ಮಾರ್ಗದರ್ಶಕ

| Published : Sep 08 2025, 01:01 AM IST

ಕ್ರೀಡೆಯಲ್ಲಿ ಗೆದ್ದವನು ನಾಯಕ, ಸೋತವನು ಮಾರ್ಗದರ್ಶಕ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳ ಮಾನಸಿಕ, ದೈಹಿಕ ಬೆಳವಣಿಗೆಗೆ ಕ್ರೀಡೆ ಬಹಳಷ್ಟು ಸಹಕಾರಿಯಾಗಿದೆ. ಕ್ರೀಡೆಯಲ್ಲಿ ಗೆದ್ದವನು ನಾಯಕನಾಗುತ್ತಾನೆ. ಸೋತವನು ಮಾರ್ಗದರ್ಶಕನಾಗುತ್ತಾನೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ವಿದ್ಯಾರ್ಥಿಗಳ ಮಾನಸಿಕ, ದೈಹಿಕ ಬೆಳವಣಿಗೆಗೆ ಕ್ರೀಡೆ ಬಹಳಷ್ಟು ಸಹಕಾರಿಯಾಗಿದೆ. ಕ್ರೀಡೆಯಲ್ಲಿ ಗೆದ್ದವನು ನಾಯಕನಾಗುತ್ತಾನೆ. ಸೋತವನು ಮಾರ್ಗದರ್ಶಕನಾಗುತ್ತಾನೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.ಪಟ್ಟಣದ ಭೋಜರಾಜ ಕ್ರೀಡಾಂಗಣದಲ್ಲಿ ಅಥಣಿ ತಾಲೂಕು ಪದವಿ ಪೂರ್ವ ಮಹಾವಿದ್ಯಾಲಯಗಳ ತಾಲೂಕುಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡೆಯಲ್ಲಿ ಸೋಲು- ಗೆಲುವು ಸಹಜ. ಸೋತರೆ ಯಾರೂ ಎದೆಗುಂದಬಾರದು. ಕ್ರೀಡೆಯಲ್ಲಿ ಸ್ಪರ್ಧಿಸುವುದು ಬಹಳ ಮುಖ್ಯ. ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಪ್ರತಿದಿನ ಪೌಷ್ಠಿಕ ಆಹಾರ ಸೇವಿಸುವುದರ ಜೊತೆಗೆ ಪ್ರತಿದಿನ ದೈಹಿಕ ಕಸರತ್ತು ಮತ್ತು ವ್ಯಾಯಾಮ, ಕ್ರೀಡೆಗಳನ್ನು ರೂಢಿಸಿಕೊಳ್ಳಬೇಕು. ಇಂದಿನ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು , ಕ್ರೀಡಾಸಕ್ತಿ ಹೊಂದುವುದು ಅಗತ್ಯ. ಇಂದಿನ ಆಹಾರ ಪದ್ಧತಿಯಿಂದ ರೋಗನಿರೋಧಕ ಶಕ್ತಿ ಕುಂದುತ್ತಿದೆ. ಗುಣಮಟ್ಟದ ಆಹಾರವನ್ನು ಸೇವಿಸುವ ಮೂಲಕ, ದೈಹಿಕವಾಗಿ ಕ್ರೀಡಾ ಕಸರತ್ತುಗಳನ್ನು ಮಾಡುವ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕೆಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿದ್ದ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಪರಪ್ಪ ಸವದಿ, ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಾಂಡುರಂಗ ಭಂಡಾರೆ, ಜಾದವ್.ಜಿ ಶಿಕ್ಷಣ ಸಂಸ್ಥೆಯ ಕಾರ್ಯಧ್ಯಕ್ಷ ಡಾ. ರಾಮ್ ಬಿ ಕುಲಕರ್ಣಿ ಮಾತನಾಡಿದರು.

ಶ್ರೀ ಶಿವಾನಂದ ಭಾರತಿ ಪದವಿ ಪೂರ್ವ ವಿದ್ಯಾಲಯದ ಪ್ರಾಚಾರ್ಯ ಎಸ್.ಜೆ.ಕಮತಗಿ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲೂಕಿನ 38 ಪದವಿ ಪೂರ್ವ ಕಾಲೇಜುಗಳ ಸುಮಾರು 3000ಕ್ಕೂ ಅಧಿಕ ವಿದ್ಯಾರ್ಥಿಗಳು ಈ ತಾಲೂಕು ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಲಿದ್ದಾರೆ. ಸರ್ಕಾರದಿಂದ ಯಾವುದೇ ಸಹಾಯಧನವಿಲ್ಲದೆ ಪ್ರತಿ ವರ್ಷ ಸರದಿಯಂತೆ ಕಾಲೇಜಿನ ಆಡಳಿತ ಮಂಡಳಿ ಹಾಗೂ ದಾನಿಗಳ ಸಹಕಾರದಿಂದ ಲಕ್ಷಾಂತರ ರು. ವೆಚ್ಚದಲ್ಲಿ ಈ ಕ್ರೀಡಾಕೂಟಗಳನ್ನು ನಡೆಸಲಾಗುತ್ತಿದೆ. ಎರಡು ದಿನಗಳ ಕಾಲ ನಡೆಯುವ ಈ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳಿಗಾಗಿ ಅಗತ್ಯ ಸೌಲಭ್ಯಗಳನ್ನು ಮಹಾವಿದ್ಯಾಲಯದಿಂದ ಒದಗಿಸಲಾಗಿದೆ ಎಂದ ಅವರು, ಸಹಾಯ ಸಹಕಾರ ನೀಡಿದ ಎಲ್ಲರಿಗೂ ಅಭಿನಂದಿಸಿದರು.

ತಾಲೂಕು ಕ್ರೀಡಾ ಸಂಯೋಜಕ ಜಿ.ಎಂ.ಚನಗೊಂಡ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ಶಿವಾನಂದ ಭಾರತಿ ಪದವಿ ಪೂರ್ವ ಮಹಾವಿದ್ಯಾಲಯದ ಅಧ್ಯಕ್ಷ ಬಸವರಾಜ ತೇಲಿ ಮಾತನಾಡಿದರು. ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರಾದ ಪ್ರಕಾಶ ತೇಲಿ, ಬಸವರಾಜ ಸಾವಡಕರ, ಅಪ್ಪಾಸಾಬ ಹೊನಕಾಂಬಳೆ, ಕಸ್ತೂರಿ ಅವಟಿ, ಶಿವಾನಂದ ಪಾಟೀಲ, ರಾಜು ತೇಲಿ, ಜೆಡೇಪ್ಪ ಕುಂಬಾರ, ಮಲ್ಲೇಶ ಸವದಿ ಸೇರಿದಂತೆ ತಾಲೂಕಿನ ವಿವಿಧ ಪದವಿ ಪೂರ್ವ ಮಹಾವಿದ್ಯಾಲಯಗಳ ಪ್ರಾಚಾರ್ಯರು ಉಪಸ್ಥಿತರಿದ್ದರು. ಎ.ಎಸ್ ಕಾರೆ ಸ್ವಾಗತಿಸಿದರು. ವಿ.ಸಿ.ಹಿರೇಪಟ್ಟ ನಿರೂಪಿಸಿದರು. ಪದ್ಮಶ್ರೀ ಗುಣವಂತಗೋಳ ವಂದಿಸಿದರು.