ಸಮಾಜ ಬೆಳವಣಿಗೆಗೆ ಹೋರಾಟ ಅನಿವಾರ್ಯ

| Published : Sep 08 2025, 01:01 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಸಮಾಜದ ಮುಂಚೂಣಿಗೆ ಬಂದು ಗುರುತಿಸಿಕೊಳ್ಳಲು ಹೂಗಾರ ಬಂಧುಗಳು ಶೈಕ್ಷಣಿಕವಾಗಿ ಬೆಳೆದು ನಿಲ್ಲಬೇಕು ಎಂದು ಲೆಕ್ಕಪರಿಶೋಧಕರು ಮತ್ತು ತೆರಿಗೆ ಸಲಹೆಗಾರ ಪ್ರದೀಪ ಹೂಗಾರ ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಸಮಾಜದ ಮುಂಚೂಣಿಗೆ ಬಂದು ಗುರುತಿಸಿಕೊಳ್ಳಲು ಹೂಗಾರ ಬಂಧುಗಳು ಶೈಕ್ಷಣಿಕವಾಗಿ ಬೆಳೆದು ನಿಲ್ಲಬೇಕು ಎಂದು ಲೆಕ್ಕಪರಿಶೋಧಕರು ಮತ್ತು ತೆರಿಗೆ ಸಲಹೆಗಾರ ಪ್ರದೀಪ ಹೂಗಾರ ಹೇಳಿದರು.

ಪಟ್ಟಣದ ಹೂಗಾರ ಸಮಾಜದ ಬಾಂಧವರು ಭಾನುವಾರ ಪೊಲೀಸ್ ಸ್ಟೇಷನ್ ಬಳಿಯ ಶರಣ ಹೂಗಾರ ಮಾದಯ್ಯನವರ ಜಯಂತಿ ಹಿನ್ನಲೆಯಲ್ಲಿ ಅವರ ಭಾವಚಿತ್ರ ಹಾಗೂ ವೃತ್ತದಲ್ಲಿ ಪೂಜೆ ನೆರವೇರಿಸಿ ಬಳಿಕ ಮಾತನಾಡಿದರು. ಹೂಗಾರ ಬಂಧುಗಳಾದ ನಾವು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಬಹಳಷ್ಟು ಹಿಂದೆ ಉಳಿದಿದ್ದೇವೆ. ಇತರೆ ಸಮುದಾಯಗಳ ಜೊತೆ ಬೆಳೆದು ನಿಲ್ಲಲು ಸಂಘಟಿತ ಹೋರಾಟಕ್ಕೆ ಮುಂದಾಗುವ ಅನಿವಾರ್ಯತೆ ಇದೆ. ಸಮಾಜದಲ್ಲಿ ಸಾಮರಸ್ಯದಿಂದ ಬದುಕಲು ಹೂವು ಹೊತ್ತ ದಾರದಂತೆ ಬಾಳಬೇಕು. ಸಹನೆ ಮತ್ತು ತಾಳ್ಮೆ ನಮ್ಮ ಜೀವನದ ಆಧಾರವಾಗಿರಬೇಕು. ಶರಣ ಹೂಗಾರ ಮಾದಯ್ಯನವರು 12ನೇ ಶತಮಾನದಲ್ಲಿ ಬಸವಣ್ಣನವರ ಜೊತೆಗೆ ಶರಣರಿಗೆ ಹೂವುಗಳನ್ನು ಪೂರೈಸುವ ಮಹತ್ತರ ಕಾಯಕ ಕೈಗೊಂಡಿದ್ದರು, ಬಸವಾದಿ ಶರಣರಂತೆ ಹೂಗಾರ ಮಾದಯ್ಯ ಶರಣರು ವಚನಗಳ ಮೂಲಕ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ವಚನಗಳ ಅಧ್ಯಯನ ನಡೆಸಲು ಸರ್ಕಾರ ಮುಂದಾಗಬೇಕು ಎಂದು ಮನವಿ ಮಾಡಿದರು.ತಾಲೂಕು ಘಟಕದ ಅಧ್ಯಕ್ಷ ಪ್ರಕಾಶ ಹೂಗಾರ ಮಾತನಾಡಿ, ಪ್ರತಿಯೊಂದು ಕಾರ್ಯಕ್ರಮಗಳಿಗೆ ಹೂಗಳನ್ನು ಮುಡಿಸುವುದು ಪೂಜೆ ಸಲ್ಲಿಸುವ ಮೂಲಕ ಭಕ್ತಿ ಮೆರೆಯವುದು ಸಾಂಪ್ರದಾಯ ಅಂತಹ ಶ್ರೇಷ್ಠ ಕಾಯಕ ಜೀವಿಗಳಾಗಿ ಭಗವಂತನ ಕೃಪೆಗೆ ಪಾತ್ರರಾಗಿರುವ ಹೂಗಾರ ಸಮಾಜದ ಸಾಮಾಜಿ ಕಳಕಳಿ ಶ್ರೇಷ್ಠತೆಯಲ್ಲಿ ಒಂದಾಗಿದೆ. ಕಡಿಮೆ ಸಂಖ್ಯೆಯ ಜನರನ್ನು ಹೊಂದಿರುವ ಹೂಗಾರ ಸಮಾಜ ದೇವರ ಆರಾಧನೆಗಾಗಿ, ಬಿಲ್ವಪತ್ರೆ ಹಾಗೂ ಹೂವುಗಳನ್ನು ಮನೆಮನೆ ಮುಖಾಂತರ ದೇವರ ಮುಡಿಗೇರಿಸುವ ಕಾಯಕದಲ್ಲಿ ಯಾವಾಗಲೂ ನಿಷ್ಠೆಯಿಂದ ತೊಡಗಿಕೊಂಡಿದೆ. ಈ ಪರಂಪರೆ ಅನಾದಿಕಾಲದಿಂದಲೂ ಮುಂದುವರಿಯುತ್ತಿದೆ ಎಂದು ಹೇಳಿದರು.ಈ ವೇಳೆ ವಿಜಯಪುರ ಜಿಲ್ಲಾ ಪ್ರವಾಸೋದ್ಯಮ ನಿರ್ದೇಶಕ ಅರವಿಂದ ಹೂಗಾರ, ನ್ಯಾಯವಾದಿ ಬಸಲಿಂಗಪ್ಪ ಹೂಗಾರ, ಕಾರ್ಯದರ್ಶಿ ಶಿವು ಹೂಗಾರ, ಉಪಾಧ್ಯಕ್ಷ ಶರಣು ಹೂಗಾರ, ಪ್ರೊ.ಸುರೇಶ್ ಹೂಗಾರ, ಸಹ ಕಾರ್ಯದರ್ಶಿ ಬಸವರಾಜ್ ಹೂಗಾರ, ಸಂತೋಷ ಹೂಗಾರ, ಹಿರಿಯರಾದ ಮಹಾಂತೇಶ ಹೂಗಾರ, ಬಸವರಾಜ ಪೂಜಾರಿ, ಸಂಗಪ್ಪ ಹೂಗಾರ, ಶಂಕರಲಿಂಗ ಹೂಗಾರ, ಶೇಖವ್ವ ಹೂಗಾರ, ಡಾ. ಚಂದ್ರಶೇಖರ ಹೂಗಾರ, ಹನುಮಂತರಾಯ ಪೂಜಾರಿ, ಶರಣಬಸವ ಹೂಗಾರ ಹಾಗೂ ಹೂಗಾರ ಸಮಾಜದ ಗಣ್ಯರು ಉಪಸ್ಥಿತರಿದ್ದರು. ಹೂಗಾರ ಸಮಾಜದ ವತಿಯಿಂದ ಶರಣ ಹೂಗಾರ ಮಾದಯ್ಯ ಜಯಂತಿ ಆಚರಣೆ ಮಾಡಲಾಯಿತು.