ಸಾರಾಂಶ
ದೆಹಲಿ ಬಳಿ ನಡೆಯುತ್ತಿರುವ ರೈತರ ಹೋರಾಟ ಬೆಂಬಲಿಸಿ ರಾಜ್ಯ ರೈತರು ಹೋರಾಟ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ದೆಹಲಿ ರೈತರ ಹೋರಾಟಕ್ಕೆ ಪೂರಕವಾಗಿ ರಾಜ್ಯದಲ್ಲಿಯೂ ಪ್ರಬಲ ಹೋರಾಟ ರೂಪಿಸುವ ಬಗ್ಗೆ ಚಿಂತನೆ ನಡೆಸಿದ್ದು, ಈ ಬಗ್ಗೆ ಸಭೆ ನಡೆಸಿ ಏಕಕಾಲದಲ್ಲಿ ರಾಜ್ಯಾದ್ಯಂತ ರೈತರ ಹೋರಾಟಕ್ಕೆ ಕರೆ ನೀಡಲಾಗುವುದು ಎಂದು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯತರ) ದಕ್ಷಿಣ ಭಾರತ ಸಂಚಾಲಕ ಕುರುಬೂರ್ ಶಾಂತಕುಮಾರ್ ತಿಳಿಸಿದ್ದಾರೆ.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿ ಹೋರಾಟದ ಜೊತೆ ಸಾಗಲು ರಾಜ್ಯದಲ್ಲಿಯೂ ಪ್ರಬಲ ಹೋರಾಟ ರೂಪಿಸುವ ಅಗತ್ಯವಿದೆ. ಈ ಸಂಬಂಧ ರೈತ ಸಂಘಟನೆಗಳ ಮುಖಂಡರ ಜೊತೆ ಗೂಗಲ್ ಸಭೆ ನಡೆಸಿ ತೀರ್ಮಾನಿಸಲಿದ್ದೇವೆ. ಪಂಜಾಬ್, ಹರಿಯಾಣ, ಉತ್ತರಪ್ರದೇಶ ರಾಜಸ್ಥಾನದ ಲಕ್ಷಾಂತರ ರೈತರು ಶಾಂತಿಯುತವಾಗಿ ದೆಹಲಿ ಚಲೋ ನಡೆಸುತ್ತಿದ್ದು, ಅದನ್ನು ಬೆಂಬಲಿಸಲಿದ್ದೇವೆ ಎಂದರು.
ರೈತರನ್ನು ಭಯೋತ್ಪಾದಕರು, ದೇಶದ್ರೋಹಿಗಳು, ಖಲಿಸ್ತಾನಿಗಳು ಎಂದು ಕರೆದು ಹೋರಾಟ ಹತ್ತಿಕ್ಕಲು ದಮನಕಾರಿ ನೀತಿ ಅನುಸರಿಸುವುದು ಸರಿಯಲ್ಲ. ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ, ವ್ಯಂಗ್ಯವಾಡುವುದು ಸರಿಯಲ್ಲ. ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು ರೈತರ ಸಾಲ ಸಂಪೂರ್ಣ ಮನ್ನಾ , ಸ್ವಾಮಿನಾಥನ್ ವರದಿ ಬೆಂಬಲ ಬೆಲೆ ಜಾರಿಗೊಳಿಸಬೇಕು. ಡಬ್ಲ್ಯೂಟಿಓ ಒಪ್ಪಂದದಿಂದ ಹೊರಗೆ ಬರಬೇಕು, ರೈತರಿಗೆ ಪಿಂಚಣಿ, ಫಸಲ್ ಬಿಮಾ ಬೆಳೆ ವಿಮೆ ಪದ್ಧತಿ ಬದಲಾಗಬೇಕು ಎಂದು ಆಗ್ರಹಿಸಿದರು.ರೈತ ಸಂಘದ ರಾಜ್ಯಾಧ್ಯಕ್ಷ ನಾರಾಯಣ ರೆಡ್ಡಿ, ಅತ್ತಹಳ್ಳಿ ದೇವರಾಜ್, ಹಾರೋಹಳ್ಳಿ ಗಜೇಂದ್ರ ಸಿಂಗ್, ಕನಕಪುರ ಶಿವಕುಮಾರ್ ಇದ್ದರು.